ಶನಿವಾರ, ಜನವರಿ 22, 2022
16 °C
ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

ಫಿಟ್‌ನೆಸ್‌ ಕಾಯ್ದುಕೊಳ್ಳಲು ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಸಾರ್ವಜನಿಕ ಪ್ರಾಣ, ಆಸ್ತಿ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುವ ಪೊಲೀಸರಿಗೆ ವೃತ್ತಿಯಲ್ಲಿ ತೀವ್ರ ಒತ್ತಡ ಇರುವುದು ಸಹಜ. ಪೊಲೀಸರು ಕರ್ತವ್ಯದ ಜತೆಗೆ ವೈಯಕ್ತಿಕ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಗಮನ ಹರಿಸಬೇಕು. ಜತೆಗೆ ಕುಟುಂಬಕ್ಕೂ ಸಮಯ ಕೊಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ತಿಳಿಸಿದರು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸೇವೆಗೆ ಸೇರಿದ ನಂತರ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಆರೋಗ್ಯದ ಕಡೆಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ದಿನನಿತ್ಯದ ಕೆಲಸದ ನಡುವೆಯೂ ಆರೋಗ್ಯದ ಕಡೆಗೆ ಗಮನ ಕೊಡಬೇಕು’ ಎಂದರು.

‘ವಿವಿಧ ಇಲಾಖೆಗಳ ಸಿಬ್ಬಂದಿ ಸರ್ಕಾರದ ಸೇವೆ ಮಾಡುತ್ತಾರೆ. ಆದರೆ, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮುಂಚೂಣಿಯ ಸೇವೆ ನೀಡುವುದು ಪೊಲೀಸರು ಮಾತ್ರ. ಕೋವಿಡ್‌–19 ನಿರ್ವಹಣೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಉತ್ತಮ ಪಾತ್ರ ನಿರ್ವಹಿಸಿದೆ. ಆರೋಗ್ಯ ಇಲಾಖೆ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ; ಪೊಲೀಸ್ ಸಿಬ್ಬಂದಿ ಸೋಂಕು ವ್ಯಾಪಕವಾಗಿ ಹರಡದಂತೆ ನಿಗಾ ವಹಿಸಿದ್ದರು. ಕೊರೊನಾ ಸೋಂಕು ತೀವ್ರಗತಿಯಲ್ಲಿ ಇದ್ದಾಗಲೂ ಪೊಲೀಸರು ಅಪಾಯವನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಸ್ವಾಗತಿಸಿದರು. ಡಿಸಿಆರ್‌ಬಿ ಡಿವೈಎಸ್‌ಪಿ ವಿಜಯ ಬಿರಾದಾರ, ಗದಗ ಉಪವಿಭಾಗ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐಗಳಾದ ಪಂಚಾಕ್ಷರಿ ಸಾಲಿಮಠ, ಬಿ.ಜಿ.ಸುಬ್ಬಾಪೂರಮಠ, ವಿಕಾಸ ಲಮಾಣಿ, ಸುನೀಲ ಸವದಿ, ರವಿ ಕಪ್ಪತ್ತನವರ ಹಾಗೂ ಜಿಲ್ಲೆಯ ಎರಡು ಉಪ ವಿಭಾಗದ ಏಳು ಠಾಣೆಗಳ ಪಿಎಸ್‍ಐಗಳು ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು.

ಪೊಲೀಸ್ ಇಲಾಖೆಗೆ ಸೇರುವ ಮುನ್ನ ಹೊಂದಿದ್ದ ಫಿಟ್‍ನೆಸ್, ವೈಯಕ್ತಿಕ ಆರೋಗ್ಯದ ಕಾಳಜಿಯನ್ನು ಮುಂದುವರಿಸಬೇಕು. ಆಗ ಮಾತ್ರ ಒತ್ತಡ ರಹಿತ ಬದುಕು ನಡೆಸಲು ಸಾಧ್ಯ

ಶಿವಪ್ರಕಾಶ್‌ ದೇವರಾಜು,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು