ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ವಸತಿಗೃಹ; ದುರಸ್ತಿಗೆ ಆಗ್ರಹ

ವಸತಿಗೃಹಗಳ ಸುತ್ತಲೂ ಮುಳ್ಳುಕಂಠಿ– ಜೀವ ಕೈಯಲ್ಲಿಡಿದು ಬದುಕುವ ಸ್ಥಿತಿ
Last Updated 20 ನವೆಂಬರ್ 2020, 1:48 IST
ಅಕ್ಷರ ಗಾತ್ರ

ಡಂಬಳ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹಗಳು ಶಿಥಿಲಾವಸ್ಥೆ ತಲುಪಿದ್ದು, ಸುತ್ತಲೂಮುಳ್ಳುಕಂಟಿಗಳು ಬೆಳೆದಿವೆ. ವಸತಿಗೃಹಗಳ ದುರಸ್ತಿಗೆ ಶೀಘ್ರವೇ ಕ್ರಮವಹಿಸಿ ಸಾರ್ವಜನಿಕರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ದೊರಕಿಸಿಕೊಡಲು ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಡಂಬಳ, ಹೊಸ ಡಂಬಳ, ನಾರಾಯಣಪೂರ, ಯಕ್ಲಾಸಪೂರ, ಹೈತಾಪೂರ, ಬರದೂರ, ತಾಮ್ರಗುಂಡಿ, ಮೇವುಂಡಿ ಗ್ರಾಮಗಳ ಸಾವಿರಾರು ಜನ ಚಿಕಿತ್ಸೆಗಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ರಾತ್ರಿ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ದೊರೆಯಲಿ ಹಾಗೂ ಸಕಾಲದಲ್ಲಿ ಸಿಬ್ಬಂದಿ ಲಭ್ಯವಾಗಲಿ ಎಂಬ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಐದು ದಶಕಗಳ ಹಿಂದೆ ಹತ್ತು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ನಾಲ್ಕು ವಸತಿ ಗೃಹಗಳಲ್ಲಿ ಮಾತ್ರ ಸಿಬ್ಬಂದಿ ವಾಸಿಸುತ್ತಿದ್ದು, ಉಳಿದವುಗಳು ಪಾಳು ಬಿದ್ದಿವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ವಸತಿಗೃಹಗಳ ಕಿಟಕಿ ಗಾಜುಗಳು ಹೊಡೆದು ಹೋಗಿವೆ. ಮಳೆಗಾಲದಲ್ಲಿ ಚಾವಣಿ ಸೋರುತ್ತದೆ. ಆರ್‌ಸಿಸಿಯಿಂದ ಸಿಮೆಂಟ್‌ ಪುಡಿ ಉದುರುತ್ತಿದೆ. ವಸತಿಗೃಹದ ಸುತ್ತ ರಾತ್ರಿ ಕತ್ತಲು ಆವರಿಸಿರುತ್ತದೆ.ಮುಳ್ಳುಕಂಟಿಗಳು ಬೆಳೆದಿರುವುದರಿಂದ ಹಾವು ಚೇಳುಗಳ ಕಾಟ ವಿಪರೀತವಾಗಿದೆ. ಈಚೆಗೆ ಸಿಬ್ಬಂದಿಯೊಬ್ಬರ ಮನೆಯಲ್ಲಿನ ಬಂಗಾರ, ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಮಕ್ಕಳನ್ನು ಅಂಗಳದಲ್ಲಿ ಆಟವಾಡಲು ಬಿಡದಂತಹ ಸ್ಥಿತಿ ಇದೆ. ಮೂಲಸೌಲಭ್ಯ, ಸೂಕ್ತ ರಕ್ಷಣೆ ಇಲ್ಲದೆ ಅನಿವಾರ್ಯವಾಗಿ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಔಷಧಿ ವಿತರಣಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ, ಗಣಕಯಂತ್ರ ಕೊಠಡಿ, ವೈದ್ಯಾಧಿಕಾರಿ ಕೊಠಡಿ, ನೇತ್ರಾ ತಪಾಸಣಾ ಕೊಠಡಿ, ತೀವ್ರ ನಿಗಾ ಘಟಕ, ಸಿಸಿಟಿವಿ ಕ್ಯಾಮೆರಾ, ಹೆರಿಗೆ ಕೊಠಡಿ, ಆಂಬುಲೆನ್ಸ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ. ಆದರೆ, ಇಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಆರೋಗ್ಯ ಕೇಂದ್ರಕ್ಕೆ ಪೂರ್ಣಾವಧಿ ವೈದ್ಯರಿಲ್ಲ. ಕಣ್ಣಿನ ವೈದ್ಯರ ಹುದ್ದೆ ಖಾಲಿ ಇದೆ. ಇಬ್ಬರು ನರ್ಸ್‌ಗಳ ಹುದ್ದೆ ಸೇರಿದಂತೆ ಇತರೆ ಸಿಬ್ಬಂದಿ ಕೊರತೆ ಇರುವುದರಿಂದ ರೋಗಿಗಳಿಗೆ ಸಕಾಲಕ್ಕೆ ಅಗತ್ಯ ಸೇವೆ ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಆರೋಗ್ಯ ಸಚಿವರು ಹಾಗೂ ಈ ಭಾಗದ ಶಾಸಕರು ವಸತಿಗೃಹಗಳ ಮರು ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಕಾಯಂ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನೇಮಕಕ್ಕೆ ಸೂಕ್ತ ಕ್ರಮತೆಗೆದುಕೊಳ್ಳದಿದ್ದರೆ ಸಾರ್ವಜನಿಕರು ಹಾಗೂ ಸಂಘಟನೆಗಳ ಸಹಯೋಗದೊಂದಿಗೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡುತ್ತಾರೆ ಡಂಬಳ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ನಂಜಪ್ಪನವರ ಹಾಗೂ ಮೇವುಂಡಿ ಗ್ರಾಮದ ಯುವಮುಖಂಡ ಸೋಮಪ್ಪ ಹೈತಾಪೂರ.

‘ಸಮಸ್ಯೆ ಬಗೆಹರಿಸಲು ಪ್ರಯತ್ನ’

‘ಇಲ್ಲಿನ ಸಮಸ್ಯೆ ಕುರಿತು ಜಿಲ್ಲಾ ವೈದ್ಯಾಧಿಕಾರಿಗೆ ವಿವರಿಸಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ವಸತಿಗೃಹಗಳು ವಾಸಮಾಡಲು ಯೋಗ್ಯವಾಗಿವೆಯೇ? ಇಲ್ಲವೇ? ಎಂಬುದನ್ನು ಎಂಜಿನಿಯರ್‌ಗಳ ಮೂಲಕ ಪರಿಶೀಲಿಸಿ, ಅಗತ್ಯ ಕ್ರಮ ತಗೆದುಕೊಳ್ಳಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ ಟಿ.ಎಸ್. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT