ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಮಹದಾಯಿ ಯೋಜನೆ ಹೋರಾಟಕ್ಕೆ ಭರ್ತಿ ಆರು ವರ್ಷ

ಏಳನೇ ವರ್ಷಕ್ಕೆ ಕಾಲಿಟ್ಟ ಬಂಡಾಯ ನೆಲದ ಹೋರಾಟ– ಮೌನ ಪ್ರತಿಭಟನೆ ಇಂದು
Last Updated 16 ಜುಲೈ 2021, 6:42 IST
ಅಕ್ಷರ ಗಾತ್ರ

ನರಗುಂದ: ಮೂರು ದಶಕಗಳಿಂದ ನಡೆದಿದ್ದ ಕಳಸಾ ಬಂಡೂರಿ, ಮಹದಾಯಿ ಹೋರಾಟಕ್ಕೆ ಹೊಸ ರೂಪ ತಂದು ಕೊಟ್ಟ ರೈತ ಸೇನೆ ಹಾಗೂ ಮಹದಾಯಿ ಹೋರಾಟ ಸಮಿತಿಯ ಮಹದಾಯಿ ಯೋಜನೆ ಹೋರಾಟಕ್ಕೆ ಜುಲೈ 16ಕ್ಕೆ ಆರು ವರ್ಷಗಳು ತುಂಬಿ ಏಳನೇ ವರ್ಷಕ್ಕೆ ಕಾಲಿಡುತ್ತಿದೆ. ಆದರೆ, ಮಹದಾಯಿ ಇನ್ನೂ ಮಲಪ್ರಭೆಗೆ ಸೇರಿಲ್ಲ. ರೈತರ ಒತ್ತಾಯ ನಿಂತಿಲ್ಲ. ಮತ್ತೆ ವಿಭಿನ್ನ ಹೋರಾಟದ ಕಹಳೆ ಊದಲು ರೈತರು ಚಿಂತನೆ ನಡೆಸಿದ್ದಾರೆ.

ಹೋರಾಟದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಕಣಕುಂಬಿಯಿಂದ ಮಹದಾಯಿ ನದಿ ನೀರು ಕಳಸಾ ಬಂಡೂರಿ ನಾಲೆಗಳ ಮೂಲಕ ಮಲಪ್ರಭೆಗೆ ಸೇರಬೇಕಿದೆ. ಇದರಿಂದ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯ 11 ತಾಲ್ಲೂಕಿಗೆ ಸಂಪೂರ್ಣ ನೀರಾವರಿಯಾಗುತ್ತದೆ. ಇದಕ್ಕಾಗಿ ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಕಣಿವೆ ಯೋಜನೆ ರೂಪುಗೊಂಡು ನಾಲ್ಕು ದಶಕಗಳು ಕಳೆದಿವೆ. ಈ ಸಂಬಂಧ ನ್ಯಾಯಮಂಡಳಿಯೂ ಸ್ಥಾಪನೆಯಾಗಿತ್ತು. ಆದರೆ ರೈತರ ಆಶಯ ಈವರೆಗೂ ಈಡೇರಿದ್ದಿಲ್ಲ.

ಇದನ್ನು ಮನಗಂಡ ರೈತ ಸೇನೆ ಸದಸ್ಯರು ವೀರೇಶ ಸೊಬರದಮಠ ನೇತೃತ್ವದಲ್ಲಿ 2015 ಜುಲೈ 16ರಂದು ಹುತಾತ್ಮ ರೈತ ದಿ.ವೀರಪ್ಪ ಕಡಿಕೊಪ್ಪ ಅವರ ವೀರಗಲ್ಲಿನ ಸಮೀಪ ವೇದಿಕೆ ನಿರ್ಮಿಸಿ ಹೋರಾಟ ಆರಂಭಿಸಿದರು. ಹಾಲಿ, ಮಾಜಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ರಾಜ್ಯದ ಸಹಸ್ರಾರು ಸಂಘಟನೆಗಳು, ಮಠಾಧೀಶರು, ವಕೀಲರು, ಸರ್ಕಾರಿ ನೌಕರರ ಸಂಘ, ಚಿತ್ರರಂಗ ಹಾಗೂ ಮಹಿಳಾ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿದವು.

ಹೋರಾಟದ ರೂಪ: ಹೋರಾಟ ಆರಂಭದಲ್ಲಿ ನಿತ್ಯಒಂದು ರೂಪ ಪಡೆದಿತ್ತು. ನರಗುಂದದಿಂದ ಬೆಂಗಳೂರು ವಿಧಾನಸೌಧ, ರಾಜಭವನದ ಎದುರು, ದೆಹಲಿ ಜಂತರ್ ಮಂತರ್, ಸಂಸತ್ ಎದುರು ಪ್ರತಿಭಟನೆ, ಪತ್ರ ಚಳವಳಿ, ದಯಾಮರಣಕ್ಕೆ ಅರ್ಜಿ, ಕೂಡಲ ಸಂಗಮದಿಂದ ಕಣಕುಂಬಿ ವರೆಗೆ ಪಾದಯಾತ್ರೆ, ಉಪವಾಸ ಸತ್ಯಾಗ್ರಹ, ಸಂಸದರು, ಶಾಸಕರು, ಸಚಿವರು ಮನೆ ಮುಂದೆ ಧರಣಿ, ಪೊರಕೆ, ಬಾರುಕೋಲು, ಒನಕೆ, ಎತ್ತು ಚಕ್ಕಡಿ ಚಳವಳಿ, ಹೆದ್ದಾರಿ ತಡೆ ಸೇರಿದಂತೆ ಹೋರಾಟದ ರೂಪ ವಿಭಿನ್ನವಾಗಿಯೇ ನಡೆದಿತ್ತು. ಕೊನೆಗೆ ಇದಕ್ಕೆ ತಮ್ಮ ಜೀವನ ಮುಡಿಪಾಗಿಡುವ ಸಲುವಾಗಿ ವೀರೇಶ ಸೊಬರದಮಠ ಮಠಾಧೀಶರ ನೇತೃತ್ವದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

11 ಹೋರಾಟಗಾರರು ಪ್ರಾಣ ಕಳೆದುಕೊಂಡರು. ಆರಂಭದಲ್ಲಿದ್ದ ಹೋರಾಟಗಾರರು ದೂರ ಸರಿದರು. ಹೋರಾಟಗಾರರ ಮೇಲೆ ಹಲ್ಲೆ ನಡೆಯಿತು. ಪರಸ್ಪರ ಆರೋಪ ನಡೆದವು. ಈ ಮೂಲಕ ರೈತರು ಹೋರಾಟ ನಡೆಸಿದರು, ಈಗಲೂ ನಡೆಸುತ್ತಿದ್ದಾರೆ. ಎಲ್ಲಿಗೆ ಹೋದರೂ, ರಾಜಧಾನಿಗೆ ತೆರಳಿದರೂ ಒಂದೇ ಬೇಡಿಕೆ ಬೇಗನೇ ಮಹದಾಯಿ ಯೋಜನೆ ಅನುಷ್ಠಾನಗೊಳ್ಳಬೇಕು. ಈ ಒತ್ತಾಯ ನಿರಂತರವಾಗಿ ನಡೆಯುತ್ತಲೇ ಇದೆ.

ಈ ಹೋರಾಟಕ್ಕೆ ಮಣಿದೋ ಅಥವಾ ನ್ಯಾಯಮಂಡಳಿ ಅವಧಿ ವಿಸ್ತರಿಸಲು ಅಸಾಧ್ಯವೋ ಎಂಬಂತೆ ಮಹದಾಯಿ ನ್ಯಾಯಮಂಡಳಿಯಿಂದ 2018ರ ಅಗಸ್ಟ್ ತಿಂಗಳಲ್ಲಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ನೀರು ಹಂಚಿಕೆ ಮಾಡಿತು. ಇದರಲ್ಲಿ ಕರ್ನಾಟಕದ ಪಾಲು 45 ಟಿಎಂಸಿ ಅಡಿ. ಆದರೆ 13.40 ಟಿಎಂಸಿ ಅಡಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲು ಅನುಮತಿ ದೊರೆಯಿತು. ಇದಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತು. ರಾಜ್ಯ ಸರ್ಕಾರ ಕಳೆದ ಹಾಗೂ ಈ ಸಲದ ಬಜೆಟ್‍ನಲ್ಲಿ ಒಟ್ಟು ₹2,175 ಕೋಟಿ ಮೀಸಲಿಟ್ಟಿತು. ಆದರೆ ಕಾಮಗಾರಿ ನಡೆದಿಲ್ಲ, ಮಹದಾಯಿಯಿಂದ ಮಲಪ್ರಭೆಗೆ ಒಂದು ತೊಟ್ಟು ನೀರೂ ಹರಿದಿಲ್ಲ. ರೈತರ ಹೋರಾಟವೂ ನಿಂತಿಲ್ಲ. ಮತ್ತೆ ಶುಕ್ರವಾರ ರೈತರಿಂದ ವಿವಿಧ ನಿರ್ಣಯ ಹೊರಬರಲಿವೆ. ಅವುಗಳು ಏನಿರಬಹುದು ಎಂಬುದನ್ನು ಕಾದು ನೋಡಬೇಕಿದೆ.

***

ರಾಜ್ಯ ಸರ್ಕಾರಗಳು ಮಹದಾಯಿ ಯೋಜನೆ ಅನುಷ್ಠಾನ ಮಾಡಲು ಮುಂದಾಗುತ್ತಿಲ್ಲ. ಇದಕ್ಕೆ ಮತ್ತೆ ಭಿನ್ನ ಹೋರಾಟದ ನಿರ್ಣಯಕ್ಕೆ ಬರಲಿದ್ದೇವೆ

-ವೀರೇಶ ಸೊಬರದಮಠ, ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ

***

ಬಂಡಾಯ ನೆಲದ ಹೋರಾಟವನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡದೇ ಯೋಜನೆ ಅನುಷ್ಠಾನಗೊಳಿಸಬೇಕು

-ಎಸ್.ಬಿ. ಜೋಗಣ್ಣವರ, ಮಹದಾಯಿ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT