ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ಕಬ್ಬು ಕಟಾವು ವಿಳಂಬ: ರೈತರಿಂದ ಅಣಕು ಶವಯಾತ್ರೆ

Published 28 ನವೆಂಬರ್ 2023, 14:29 IST
Last Updated 28 ನವೆಂಬರ್ 2023, 14:29 IST
ಅಕ್ಷರ ಗಾತ್ರ

ಮುಂಡರಗಿ: ಸಕಾಲದಲ್ಲಿ ರೈತರ ಜಮೀನಿನಲ್ಲಿರುವ ಕಬ್ಬನ್ನು ಕಟಾವು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ಕಬ್ಬು ಬೆಳೆಗಾರರು ಮಂಗಳವಾರ ತಾಲ್ಲೂಕಿನ ಗಂಗಾಪೂರದಲ್ಲಿರುವ ಸಕ್ಕರೆ ಕಾರ್ಖಾನೆಯ ಮುಖ್ಯ ದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಶಿಂಗಟಾಲೂರ ಮೊದಲಾದ ಗ್ರಾಮಗಳಿಂದ ಆಗಮಿಸಿದ ರೈತರು ಸಕ್ಕರೆ ಕಾರ್ಖಾನೆಯ ಬಳಿ ಜಮಾಯಿಸಿದರು. ಅಲ್ಲಿಂದ ಹಲಗೆ ಬಾರಿಸುತ್ತಾ ಅಣಕು ಶವಯಾತ್ರೆ ಕೈಗೊಂಡರು. ಸಕ್ಕರೆ ಕಾರ್ಖಾನೆಯ ಆಡಳಿತ ಕಚೇರಿಯ ಆವರಣದಲ್ಲಿ ಅಣಕು ಶವವನ್ನು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಂಗಾಮಿನಲ್ಲಿ ನೆಟ್ಟಿದ್ದ ಕಬ್ಬು ಕಟಾವಿಗೆ ಬಂದು ಆರೆಂಟು ತಿಂಗಳು ಗತಿಸಿದ್ದರೂ, ಕಾರ್ಖಾನೆಯವರು ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ರೈತರು ಕಬ್ಬುನಾಟಿ ಮಾಡಿ ಒಂದುವರೆ ವರ್ಷ ಗತಿಸಿದ್ದು, ಅವರೆಲ್ಲ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಕ್ಕರೆ ಕಾರ್ಖಾನೆಯವರು ತಕ್ಷಣ ಎಲ್ಲ ರೈತರ ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಯವರು ಕಬ್ಬನ್ನು ಕಟಾವು ಮಾಡಿಕೊಳ್ಳದೆ ಇರುವುದರಿಂದ ರೈತರಿಗೆ ಕಬ್ಬಿನ ಬೆಳೆ ನಿರ್ವಹಣೆ ಸಮಸ್ಯೆಯಾಗಲಿದೆ. ಸಕಾಲದಲ್ಲಿ ಕಬ್ಬು ಕಟಾವು ಮಾಡಿಕೊಂಡು ಹೋದರೆ ಮುಂದಿನ ಕೆಲಸ ಕಾರ್ಯಗಳಿಗೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ರೈತರೆಲ್ಲ ಕೇವಲ ಕಬ್ಬಿನ ಗದ್ದೆಯಲ್ಲಿ ದಿನ ಕಳೆಯಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಕಷ್ಟು ರೈತರು ಅನ್ಯರ ಜಮೀನನ್ನು ವಾರ್ಷಿಕ ಗುತ್ತಿಗೆ ಪಡೆದುಕೊಂಡು ಕಬ್ಬು ನಾಟಿ ಮಾಡಿದ್ದಾರೆ. ಕೆಲವು ರೈತರ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ಇನ್ನೂ ಹಲವು ರೈತರ ಗುತ್ತಿಗೆ ಅವಧಿ ಸದ್ಯದಲ್ಲಿಯೆ ಪೂರ್ಣಗೊಳ್ಳಲಿದೆ. ಗುತ್ತಿಗೆ ಮುಗಿದ ಜಮೀನುಗಳ ಮಾಲೀಕರು ತಕ್ಷಣ ಕಬ್ಬು ಕಟಾವು ಮಾಡಿ ಜಮೀನನ್ನು ತೆರವುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ರೈತರು ಏನು ಮಾಡಬೇಕೆನ್ನುವುದು ತಿಳಿಯದಾಗಿದೆ ಎಂದು ತಿಳಿಸಿದರು.

ಕಬ್ಬು ಕಟಾವು ಮಾಡುವ ಕೂಲಿಯಾಳುಗಳ (ಗ್ಯಾಂಗುಗಳು) ಸಿಗುತ್ತಿಲ್ಲ ಎಂದು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ವಿನಾಕಾರಣ ಸಬೂಬು ಹೇಳುತ್ತಿದ್ದಾರೆ. ಇದರಿಂದ ರೈತರ ಸಮಸ್ಯೆ ನಿವಾರಣೆಯಾಗದಂತಾಗಿದೆ. ಆದ್ದರಿಂದ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಪ್ರತಿಭಟನಾ ನಿರತರ ಬಳಿಗೆ ಸಕ್ಕರೆ ಕಾರ್ಖಾನೆಯ ಎಜಿಎಂ ಮಂಜುನಾಥ ಆಗಮಿಸಿ, 'ಕೂಲಿಯಾಳುಗಳ ಸಮಸ್ಯೆ ತೀವ್ರವಾಗಿದ್ದು, ಎರಡು ತಿಂಗಳೊಳಗಾಗಿ ಎಲ್ಲ ರೈತರ ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳಲಾಗುವುದು. ರೈತರು ಸಹನೆಯಿಂದ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು' ಎಂದು ಮನವಿ ಮಾಡಿಕೊಂಡರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ವೀರನಗೌಡ ಪಾಟೀಲ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹನುಮಂತ ಕೊಳಲು, ರಂಜಿತ್ ಮಧ್ಯಪಾಟಿ, ಹನುಮಂತಪ್ಪ ಶೀರನಹಳ್ಳಿ, ಕೋಟೆಪ್ಪ ಚೌಡಕಿ, ಮಾಬುಸಾಬ್ ಬಳ್ಳಾರಿ, ಚನ್ನಬಸಪ್ಪ ಸೊಂಡಗಿ, ಇಮಾಮಸಾಬ್ ಬಾಳಾನಾಯ್ಕರ್, ಅಶೋಕ ಸೀಗೇನಹಳ್ಳಿ, ರಾಜಶೇಖರ ಕೊಂತೆಣ್ಣವರ ಇದ್ದರು.

ರೈತರಿಗೆ ಕಬ್ಬಿನ ಬೆಳೆ ನಿರ್ವಹಣೆಯಲ್ಲಿ ಸಮಸ್ಯೆ ಕಟಾವಿಗೆ ಕಾರ್ಖಾನೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT