ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಲ್ಲದ ಶಾಲೆಗೆ ₹11 ಲಕ್ಷ ಅನುದಾನ! ಬಸವರಾಜ ಹೊರಟ್ಟಿ ತಾಯಿಯ ಹೆಸರಿನ ಸ್ಕೂಲ್

Last Updated 11 ಜೂನ್ 2022, 5:45 IST
ಅಕ್ಷರ ಗಾತ್ರ

ಗದಗ:‘ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ತಾಯಿಯವರ ಹೆಸರಿನಲ್ಲಿ ಗದಗ ನಗರದಲ್ಲಿರುವ ಪ್ರಭು ಶಿಕ್ಷಣ ಸಂಸ್ಥೆಯ ‘ಮಾತೋಶ್ರೀ ಗುರಮ್ಮಾ ಶಿವಲಿಂಗಪ್ಪ ಹೊರಟ್ಟಿ ಪ್ರಾಥಮಿಕ ಶಾಲೆ’ ನೋಂದಣಿ ಆದಂದಿನಿಂದಲೂ ಮಕ್ಕಳ ದಾಖಲಾತಿ ಮಾಡಿಕೊಂಡಿಲ್ಲ. ಶಿಕ್ಷಣ ಇಲಾಖೆಯೇ ಒದಗಿಸಿರುವ ದಾಖಲೆಯ ಅನ್ವಯ ಬಂದ್ ಆಗಿದ್ದು, ಇಂತಹ ಶಾಲೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹11 ಲಕ್ಷ ಅನುದಾನ ಪಡೆಯಲಾಗಿದೆ’ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಆಮ್ ಆದ್ಮಿ ಪಕ್ಷ ಬೆಂಬಲಿತ ಅಭ್ಯರ್ಥಿ ವಿ.ಆರ್.ಗೋವಿಂದಗೌಡ್ರ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಇದಕ್ಕೆ ಪೂರಕ ದಾಖಲೆ ಪ್ರದರ್ಶಿಸಿದರು.

‘2007ರ ಜೂನ್‌ 18ರಂದು ಕನ್ನಡ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಅನುಮತಿ ಪಡೆಯಲಾಗಿದೆ. ಅನುಮತಿ ತೆಗೆದುಕೊಂಡ ನಂತರ 2008-09ರಿಂದ ಇಲ್ಲಿಯವರೆಗೆ ಮುಚ್ಚಲಾಗಿದ್ದು, ಈವರೆಗೆ ಒಂದು ಮಗುವನ್ನೂ ದಾಖಲಾತಿ ಮಾಡಿಕೊಂಡಿಲ್ಲ ಎಂದು ಶಿಕ್ಷಣ ಇಲಾಖೆಯೇ ಮಾಹಿತಿ ಒದಗಿಸಿದೆ’ ಎಂದು ಅವರು ತಿಳಿಸಿದರು.

‘ಶಾಲೆ ನಡೆಸದಿದ್ದರೂ ಆಡಳಿತ ಮಂಡಳಿ 2009-10ರಲ್ಲಿ ₹1ಲಕ್ಷ ಹಾಗೂ 2010-11ರಲ್ಲಿ ₹10 ಲಕ್ಷ ಹಣವನ್ನು ಅಂದಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪಡೆಯಲಾಗಿದೆ. ಇದು ಸರ್ಕಾರಕ್ಕೆ ಮಾಡಿದ ವಂಚನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಷ್ಟೇ ಅಲ್ಲದೇ, 2015-16ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಜಯಮಾಲಾ ಹಾಗೂ ಟಿ.ಎ. ಶರವಣ ಅವರು ತಲಾ ₹5 ಲಕ್ಷ ನೀಡುವಂತೆ ಶಿಫಾರಸು ಮಾಡಿದ್ದಾರೆ. ಆದರೆ, ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅವರು ಸೂಕ್ತ ದಾಖಲಾತಿ ಇಲ್ಲದ್ದಕ್ಕೆ ತಡೆ ಹಿಡಿದಿದ್ದರು’ ಎಂದು ಹೇಳಿದರು.

‘ಈ ಶಾಲೆಯ ಆಡಳಿತ ಮಂಡಳಿಗೆ ಬಸವರಾಜ ಧಾರವಾಡ ಅಧ್ಯಕ್ಷ ಎಂಬ ಮಾಹಿತಿ ಇದೆ. ಈ ಬಗ್ಗೆ ಇನ್ನಷ್ಟು ದಾಖಲೆ ಸಂಗ್ರಹಿಸಲಾಗುತ್ತಿದೆ. ಶಾಲೆಗೆ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ತಾಯಿ ಹೆಸರಿರುವುದರಿಂದ ಇದು ಎಲ್ಲವೂ ಅವರ ಗಮನಕ್ಕೆ ಬಂದಿರದೇ ಇರದು’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಗದಗ ಜಿಲ್ಲೆಯಲ್ಲಿ ಬಸವರಾಜ ಧಾರವಾಡ ಅವರು ಹೊರಟ್ಟಿ ಅವರಿಗೆ ಏಜೆಂಟರಾಗಿದ್ದಾರೆ. ಸಂಘ-ಸಂಸ್ಥೆಗೆ ಅನುದಾನ ಕೊಡಿಸಿ, ಅವರಿಂದ ಕಮಿಷನ್ ಪಡೆಯುತ್ತಿದ್ದಾರೆ. ಬಸವರಾಜ ಧಾರವಾಡ ಆಸ್ತಿಯ ಬಗ್ಗೆಯೂ ತನಿಖೆಯಾಗಬೇಕು. ಭ್ರಷ್ಟಾಚಾರ ನಿಗ್ರಹ ದಳವು ಸ್ವಯಂ ದೂರು ದಾಖಲಿಸಿಕೊಂಡು, ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಹೊರಟ್ಟಿಗೂ ಶಾಲೆಗೂ ಸಂಬಂಧವಿಲ್ಲ’

‘ಬಸವರಾಜ ಹೊರಟ್ಟಿ ಅವರ ಮೇಲಿನ ಅಭಿಮಾನದಿಂದ ಅವರ ತಾಯಿಯ ಹೆಸರನ್ನು ನಮ್ಮ ಶಾಲೆಗೆ ಇರಿಸಲಾಗಿದೆ. ಅದನ್ನು ಹೊರತುಪಡಿಸಿ ಹೊರಟ್ಟಿ ಅವರಿಗೂ ಈ ಶಾಲೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಶಾಲೆಯ ಅಧ್ಯಕ್ಷ ಡಾ.ಬಸವರಾಜ ಧಾರವಾಡ ತಿಳಿಸಿದರು.

ಆಮ್‌ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ವೆಂಕನಗೌಡ ಗೋವಿಂದಗೌಡ್ರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಶಾಲೆ ಆರಂಭಗೊಂಡ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಾಖಲಾಗದ ಕಾರಣ ಅಂದಿನಿಂದ 2019ರವರೆಗೆ ಬಾಲವಾಡಿ ನಡೆಸಲಾಗಿದೆ. ಮೂರು ಮಂದಿ ಶಿಕ್ಷಕರು, ಒಬ್ಬಳು ಆಯಾ ಕರ್ತವ್ಯ ನಿರ್ವಹಿಸಿದ ಎಲ್ಲ ದಾಖಲೆಗಳಿವೆ. ಶಾಲೆಗೆ ₹9 ಲಕ್ಷ ಅನುದಾನ ಬಂದಿದ್ದು, ಆ ಹಣದಿಂದ ಕಟ್ಟಡ ಕಾಮಗಾರಿ ನಡೆಸಲಾಗಿದೆ. ಹಣದ ಕೊರತೆಯಿಂದ ಕಟ್ಟಡ ಅರ್ಧಕ್ಕೆ ನಿಂತಿದೆ’ ಎಂದು ಹೇಳಿದರು.

‘ಬಸವರಾಜ ಹೊರಟ್ಟಿ ಏಜೆಂಟ್‌ ನಾನು ಎಂಬುದನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT