ಹತ್ತಿಗೆ ಕಾಯಿಕೊರಕ ಕಂಟಕ; ರೈತರಿಗೆ ಸಂಕಟ

7
ಬಿಳಿ ಬಂಗಾರದ ನಾಡಿನಲ್ಲಿ ಕಂಗಾಲಾಗಿರುವ ಅನ್ನದಾತರು

ಹತ್ತಿಗೆ ಕಾಯಿಕೊರಕ ಕಂಟಕ; ರೈತರಿಗೆ ಸಂಕಟ

Published:
Updated:
Deccan Herald

ನರಗುಂದ: ತಾಲ್ಲೂಕಿನ ಮಲಪ್ರಭಾ ಅಚ್ಚುಕಟ್ಟ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಬಿಟಿ ಹತ್ತಿಗೆ ಗುಲಾಬಿ ಕಾಯಿಕೊರಕ ಬಾಧೆ ಕಾಣಿಸಿಕೊಂಡಿದ್ದು,ರೈತರು ಆತಂಕಗೊಂಡಿದ್ದಾರೆ.

ಈ ಬಾರಿ ತಾಲ್ಲೂಕಿನಲ್ಲಿ ನಿರೀಕ್ಷೆ ಮೀರಿ ಬಿಟಿ ಹತ್ತಿ ಬಿತ್ತನೆ ಆಗಿದೆ. ಆದರೆ, ‘ಹತ್ತಿಗೆ ಹತ್ತು ಕುತ್ತು’ ಎಂಬ ಮಾತು ನಿಜವಾಗುವಂತೆ ಕಾಯಿಕೊರಕ ರೋಗ ಕಾಣಿಸಿಕೊಂಡಿದೆ. ಇದರ ಜತೆಗೆ ಎರಡು ತಿಂಗಳಿನಿಂದ ಮಳೆ ಬಾರದ ಕಾರಣ, ಬೆಳೆಗಳು ಒಣಗುತ್ತಿವೆ.

ಹತ್ತಿಗೆ ತೀವ್ರ ಅಪಾಯಕಾರಿ ಎಂದೇ ಕರೆಯಲಾಗುವ ಗುಲಾಬಿ ಹುಳು ಮೊಗ್ಗಿನಿಂದಲೇ ಹರಡಿ, ಇಡೀ ಬೆಳೆಯನ್ನು ನಾಶ ಮಾಡುತ್ತದೆ. ಕಾಯಿಯೊಳಗೆ ಅಡಗಿಕೊಳ್ಳುವ ಈ ಹುಳವನ್ನು ನಿಯಂತ್ರಣ ಮಾಡುವುದು ಕಷ್ಟ ಎನ್ನುತ್ತಾರೆ ಕೃಷಿ ತಜ್ಞರು.

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 23,600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 600 ಹೆಕ್ಟೇರ್‌ದಲ್ಲಿ ಬಿಟಿ ಹತ್ತಿ ಬಿತ್ತನೆಯಾಗಿದೆ. ಮುಂಗಾರು ಆರಂಭದಲ್ಲಿ ರೋಹಿಣಿ ಮಳೆ ಉತ್ತಮವಾಗಿ ಲಭಿಸಿದ್ದರಿಂದ ರೈತರು ವಾಣಿಜ್ಯ ಬೆಳೆಗಳಾದ ಹತ್ತಿ, ಸೂರ್ಯಕಾಂತಿ ಹಾಗೂ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಹತ್ತಿ ಬೆಳೆಗೆ ಪ್ರತಿ ಎಕರೆಗೆ ರೈತರು ಕನಿಷ್ಠ ₨20 ಸಾವಿರ ಖರ್ಚು ಮಾಡಿದ್ದಾರೆ.

ಭರ್ತಿಯಾಗದ ಮಲಪ್ರಭೆ
ತಾಲ್ಲೂಕಿನಲ್ಲಿ ಮಲಪ್ರಭಾ ನದಿ ನೀರು ನೆಚ್ಚಿಕೊಂಡು ಕೃಷಿ ಮಾಡುವ ರೈತರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಆದರೆ, ಈ ಬಾರಿ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ಮಲಪ್ರಭಾ ನೀರು ಕಾಲುವೆ ಮೂಲಕ ಬೇಗ ಹರಿಯುವ ಲಕ್ಷಣ ಕಾಣುತ್ತಿಲ್ಲ. ಮಳೆ ಮತ್ತು ನೀರಿನ ಕೊರತೆಯಿಂದ ತಾಲ್ಲೂಕಿನ ರೈತರು ನಾಲ್ಕನೇ ವರ್ಷವೂ ಸಂಕಷ್ಟದಲ್ಲಿದ್ದಾರೆ.

ಬಿಟಿ ಹತ್ತಿಗೆ ಗುಲಾಬಿ ಕಾಯಿಕೊರಕ ರೋಗ ಕಾಣಿಸಿಕೊಂಡಿದ್ದು, ದಿಕ್ಕು ತೋಚದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೀಟನಾಶಕ ಸಿಂಪಡಿಸಿದರೂ ರೋಗ ಕಡಿಮೆಯಾಗಿಲ್ಲ.
- ಈರಪ್ಪ ಮಜ್ಜಿಗೆ, ರೈತ, ನರಗುಂದ

ರೋಗ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಪ್ರೋಪೆನೋಫಾಸ್ ಬೆರೆಸಿ ಸಿಂಪಡಿಸಬೇಕು. ಹುಳುಗಳನ್ನು ನಿಯಂತ್ರಿಸಲು ಬಲೆ ಬಳಸಬಹುದು.
-ಚನ್ನಪ್ಪ ಅಂಗಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ನರಗುಂದ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !