ಬುಧವಾರ, ಮೇ 12, 2021
27 °C

ರಣ ಬಿಸಿಲಿಗೆ ತತ್ತರಿಸಿದ ಮುದ್ರಣಕಾಶಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಗದಗ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಸಿಲಿನ ತಾಪ ವಿಫರೀತವಾಗಿದೆ.

ಸೋಮವಾರ ಗದಗ–ಬೆಟಗೇರಿ ಅವಳಿ ನಗರದಲ್ಲಿ 33 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. 2011ರ ಅಕ್ಟೋಬರ್ ತಿಂಗಳಲ್ಲಿ ಗರಿಷ್ಠ 34.4 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದೇ ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. 

ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ 30ರಿಂದ 32 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ, ಅಕ್ಟೋಬರ್‌ ಮೊದಲ ವಾರದಿಂದ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ತೀವ್ರ ಬಿಸಿಲಿರುತ್ತದೆ. ಬಿಸಿಲಿನ ಪ್ರಖರತೆಯಿಂದ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಗಡೆ ಬರಲು ಆಗುತ್ತಿಲ್ಲ. ಈಗಲೇ ಈ ಸ್ಥಿತಿಯಾದರೆ ಜನವರಿ, ಫೆಬ್ರುವರಿ ವೇಳೆಗೆ ಹೇಗೆ ಎನ್ನುತ್ತಿದ್ದಾರೆ ನಗರದ ಜನತೆ.

ಜಿಲ್ಲೆಯಲ್ಲಿ ಮಳೆ ಸುರಿದು ಎರಡು ವಾರಗಳು ಕಳೆದಿವೆ. ನೀರಿನ ಸೆಲೆ ಕಣ್ಮರೆಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಒಣ ಹವೆ ಹೆಚ್ಚಾಗಿದ್ದು, ಬಿಸಿಲ ಧಗೆ ಹೆಚ್ಚುತ್ತಿದೆ. ಕೆಲಸದ ನಿಮಿತ್ತ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ.

ಪಾದಚಾರಿಗಳು ನೆತ್ತಿ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೊಡೆ, ಮರದ ನೆರಳನ್ನು ಹುಡುಕುತ್ತಿದ್ದಾರೆ. ಮನೆಯ ಹೊರಗಡೆ ನಿಲ್ಲಿಸಿದ ದ್ವಿಚಕ್ರ ವಾಹನಗಳಲ್ಲಿ ಪೆಟ್ರೋಲ್‌ ಸಹ ಬಿಸಿಲಿಗೆ ಆವಿಯಾಗುತ್ತಿದೆ.

ಲಕ್ಷ್ಮೇಶ್ವರ, ಗಜೇಂದ್ರಗಡ ತಾಲ್ಲೂಕು, ನರೇಗಲ್‌ ಹೋಬಳಿ ವ್ಯಾಪ್ತಿಯಲ್ಲಿ ಸಂಪೂರ್ಣ ಬೇಸಿಗೆಯ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಹಿಂಗಾರಿನ ಕಡಲೆ, ಸೂರ್ಯಕಾಂತಿ, ಜೋಳ, ಗೋಧಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು, ಮಳೆಗಾಗಿ ಮುಗಿಲಿನತ್ತ ಮುಖಮಾಡಿ ನಿಂತಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿ ಗ್ರಾಮೀಣ ಪ್ರದೇಶಗಳಲ್ಲಿ ಕತ್ತೆ,ಕಪ್ಪೆ ಮದುವೆ, ಗುರ್ಜಿ ಆಚರಣೆ, ಗಡಿ ದುರಗಮ್ಮನ ಪೂಜೆಗಳು ಪ್ರಾರಂಭವಾಗಿವೆ.

ಬಿಸಿಲಿನಿಂದ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ವ್ಯಾಪಾರವೂ ಕಡಿಮೆಯಾಗಿದೆ. ಹಣ್ಣು ತರಕಾರಿಗಳ ಮೇಲೆ ಆಗಾಗ್ಗ ನೀರು ಚಿಮುಕಿಸಿ ವ್ಯಾಪಾರಿಗಳು ಅವುಗಳು ಬಾಡದಂತೆ ರಕ್ಷಿಸಿಕೊಳ್ಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು