ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾನತೆ, ಜಾತಿ ವ್ಯವಸ್ಥೆಗೆ ಶಿಕ್ಷಣವೇ ಅಸ್ತ್ರ

ಗದಗ: ಕನಕದಾಸ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ; ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ
Last Updated 13 ಜನವರಿ 2017, 6:17 IST
ಅಕ್ಷರ ಗಾತ್ರ
ಗದಗ: ಶಿಕ್ಷಣ ಲಭಿಸಿದಾಗ ಮಾತ್ರ ಮನುಷ್ಯನಾಗಲು ಸಾಧ್ಯ. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇವುಗಳಿ ಗೆಲ್ಲ ಶಿಕ್ಷಣವೇ ಅಸ್ತ್ರ. ಹಿಂದುಳಿದ ವರ್ಗದವರು ಶಿಕ್ಷಣ ಸಂಸ್ಥೆಗಳನ್ನು ತೆರೆ ಯುವುದು ಸಾಹಸ ಎನ್ನುವಂತಿದ್ದ ಕಾಲ ಘಟ್ಟದಲ್ಲಿ, ಧೈರ್ಯದಿಂದ ಕನಕದಾಸ ಶಿಕ್ಷಣ ಸಂಸ್ಥೆ (ಕೆಎಸ್‌ಎಸ್‌) ಯನ್ನು ಸ್ಥಾಪಿಸಿ, ಅದನ್ನು ಬೃಹದಾಕಾರವಾಗಿ ಬೆಳೆಸಿದವರು ಡಾ. ಬಿ.ಎಫ್‌. ದಂಡಿನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
 
ಗದುಗಿನ ಆಂಗ್ಲೊ ಉರ್ದು ಶಾಲೆ ಮೈದಾನದಲ್ಲಿ ಗುರುವಾರ ನಡೆದ ಕೆಎಸ್‌ಎಸ್‌ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವರ್ಣ ವ್ಯವಸ್ಥೆಯಲ್ಲಂತೂ ಮೇಲ್ವರ್ಗದವರಿಗೆ ಮಾತ್ರ ಶಿಕ್ಷಣ ಪಡೆಯಲು ಅವಕಾಶವಿತ್ತು. ಆ ವ್ಯವಸ್ಥೆ ಯಿಂದ ಸೃಷ್ಟಿಯಾದ ಸಾಮಾಜಿಕ, ಆರ್ಥಿಕ ಕಂದರವನ್ನು ಇನ್ನು ಮುಚ್ಚಲಾ ಗುತ್ತಿಲ್ಲ  ಎಂದು ವಿಷಾದ ವ್ಯಕ್ತಪಡಿಸಿದರು.
 
ಸಂವಿಧಾನದ ಆಶಯದಂತೆ ಎಲ್ಲ ಜಾತಿ, ಧರ್ಮದವರು ವಿದ್ಯಾವಂತರಾಗ ಬೇಕು. ಹುಟ್ಟು ಮತ್ತು ಸಾವಿನ ನಡುವಿನ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಸಮಾಜ ಮುಖಿಯಾಗಿ ಬದುಕಬೇಕು, ಸಮಾಜಕ್ಕೆ ಉಪಕಾರಿ ಆಗಬೇಕು ಎಂದರು. 
 
ಡಾ.ಬಿ.ಎಫ್. ದಂಡಿನ ದಂಪತಿ ಸನ್ಮಾನಿಸಿದ ಮುಖ್ಯಮಂತ್ರಿಗಳು ‘ದಂಡಿನ ದಾರಿ’ ಅಭಿನಂದನಾ ಗ್ರಂಥ, ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು. ಕೆಎಸ್‌ಎಸ್‌ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಎಸ್. ಸಿದ್ದರಾಮಯ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಾಮಫಲಕ ಅನಾವರಣ ಮಾಡಿದರು. ಕಾಳಿದಾಸ ವಾಚನಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿಯನ್ನು ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. 
ಸಾಧಕರಾದ ಬಿ.ಜಿ. ಅಣ್ಣಿಗೇರಿ, ಪಂಚಾಂಗ ಕತೃ ಬಸವಯ್ಯ ಶಾಸ್ತ್ರಿಗಳು, ಜ್ಞಾನದೇವ ದೊಡ್ಡಮೇಟಿ ಅವರನ್ನು ಸನ್ಮಾನಿಸಿದರು.
 
ಜ್ಞಾನದೇವ ದೊಡ್ಡಮೇಟಿ ಮಾತ ನಾಡಿ, ಎಲ್ಲ ಕ್ಷೇತ್ರಗಳು ದಿಕ್ಕು ತಪ್ಪಿ ಸಂಚರಿಸುತ್ತಿರುವ ಕಾಲದಲ್ಲಿ, ಶಿಕ್ಷಣ ಕ್ಷೇತ್ರದ ರಥವನ್ನು ಸರಿಯಾದ ದಾರಿ ಯಲ್ಲಿ ಎಳೆಯುವ ಕೆಲಸವನ್ನು ಬಿ.ಎಫ್‌. ದಂಡಿನ ಅವರು ಮಾಡಿದ್ದಾರೆ ಎಂದು ಪ್ರಶಂಸಿದರು.
 
**
ಹೊರಟ್ಟಿ ನೀನು ಯಾವುದರಲ್ಲಿ ಫೇಲ್‌? 
ಡಾ.ಬಿ.ಎಫ್. ದಂಡಿನ ಅವರು ಎಂಎಸ್‌ಸಿ ಗಣಿತದಲ್ಲಿ 100ಕ್ಕೆ 100 ಅಂಕ ಪಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಈವತ್ತಿಗೆ ಕೂಡ ನಮ್ಮ ವಿದ್ಯಾರ್ಥಿಗಳು ಗಣಿತ ಮತ್ತು ಇಂಗ್ಲೀಷ್‌ನಲ್ಲಿ ಹೆಚ್ಚಾಗಿ ಫೇಲ್‌ ಆಗುತ್ತಿದ್ದಾರೆ ಎನ್ನುತ್ತಾ, ವೇದಿಕೆ ಮೇಲಿದ್ದ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರತ್ತ ನೋಡಿ, ಹೊರಟ್ಟಿ ನೀನು ಯಾವುದರಲ್ಲಿ ಫೇಲ್‌ ಆಗಿದ್ದೆ ಎಂದು ಕೆಣಕಿದರು. ಹೊರಟ್ಟಿ ಅದಕ್ಕೆ ನಗುವಿನ ಉತ್ತರ ನೀಡಿದರು.
 
ಇದಕ್ಕೆ ವಿದ್ಯಾರ್ಥಿಗಳು ಹೋ ಎಂದು ಕೂಗಿ  ಪ್ರತಿಕ್ರಿಯಿಸಿದರು. ಇದಕ್ಕೆ ಮುಖ್ಯಮಂತ್ರಿ ಅವರು ತಮ್ಮದೇ ಶೈಲಿಯಲ್ಲಿ, ಈಗ ಕೂಗ್ತಾ ಇರೋರೆಲ್ಲಾ ಫೇಲ್‌ ಆದವರೇ ಎಂದರು. ಅಲ್ಲದೆ, ಚುನಾವಣೆಯಲ್ಲಿ ತಾವು ನಾಲ್ಕು ಬಾರಿ ಸೋತಿದ್ದನ್ನು ಸ್ಮರಿಸಿದರು. 
 
**
ಕೆಲವರಿಗೆ  ಅಂದು  ಇಲ್ಲದ  ಸ್ವಾಭಿಮಾನದ  ಪ್ರಶ್ನೆ  ಇಂದೇಕೆ..? 
ಈಗ ಸಾಕಷ್ಟು ಜನರು ಸ್ವಾಭಿಮಾನದ ಕುರಿತು ಮಾತನಾಡುತ್ತಿದ್ದಾರೆ. ಸ್ವಾರ್ಥಕ್ಕೆ ಧಕ್ಕೆ ಆದಾಗ ಅಲ್ಲ, ನಿಸ್ವಾರ್ಥಕ್ಕೆ ಧಕ್ಕೆ ಆದಾಗ ಸ್ವಾಭಿಮಾನದ ಪ್ರಶ್ನೆ ಉದ್ಭವಿಸುತ್ತದೆ. ಈಗ ಸ್ವಾರ್ಥಕ್ಕೆ ಅಥವಾ ವೈಯಕ್ತಿಕ ಲಾಭಕ್ಕೆ ಧಕ್ಕೆ ಆದಾಗ ಸ್ವಾಭಿಮಾನದ ಪ್ರಜ್ಞೆ ದಿಢೀರ್‌ ಜಾಗೃತವಾಗುತ್ತದೆ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಟಾಂಗ್ ನೀಡಿದರು.
 
ನಿಸ್ವಾರ್ಥ ಕಾರ್ಯಕ್ಕೆ ಧಕ್ಕೆಯಾದಾಗ ಸ್ವಾಭಿಮಾನದ ಪ್ರಶ್ನೆ ಬರಬೇಕು. ಆದರೆ, ಕೆಲವರು ಸ್ಥಾನಮಾನ ನೀಡಿಲ್ಲ ಎಂಬ ಸ್ವಾರ್ಥಕ್ಕೆ ರಾಜೀನಾಮೆ ನೀಡಿ ಸ್ವಾಭಿಮಾನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.
 
ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ,  ಸಚಿವ ಎಚ್.ಕೆ. ಪಾಟೀಲ, ಶಾಸಕ ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಎಚ್.ಎಂ. ರೇವಣ್ಣ, ಮಾಜಿ ಸಚಿವ ಎಸ್.ಎಸ್. ಪಾಟೀಲ ಇದ್ದರು.
 
**
ಹಿಂದುಳಿದ ವರ್ಗದವರು ಶಿಕ್ಷಣ ಸಂಸ್ಥೆ ಆರಂಭಿಸುವುದು ಹಿಂದೆ ಸಾಹಸದ ಕೆಲಸವಾಗಿತ್ತು. ಬೆರಳೆಣಿಕೆಯ ಸಾಹಸಿಗರು ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಅಂಥವರಲ್ಲಿ ದಂಡಿನ ಕೂಡ ಒಬ್ಬರು.
-ಸಿದ್ದರಾಮಯ್ಯ,
ಮುಖ್ಯಮಂತ್ರಿ
 
**
ಕನಕದಾಸ ಶಿಕ್ಷಣ ಸಂಸ್ಥೆಯಿಂದ ಸಿದ್ದರಾಮಯ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿರುವುದು ಐತಿಹಾಸಿಕ ನಿರ್ಧಾರ. ಮುಂದೆ ಕೆಎಸ್‌ಎಸ್‌ ವಿಶ್ವವಿದ್ಯಾಲಯ ಆಗಲಿ.
-ಸಿದ್ಧಲಿಂಗ ಸ್ವಾಮೀಜಿ
ತೋಂಟದಾರ್ಯ ಮಠ
 
**
ಬಡತನದಲ್ಲೂ ಮಹತ್ವಾಂಕಾಂಕ್ಷೆ ಹೊಂದಿ ಅದನ್ನು ಕಾರ್ಯಗತಗೊಳಿಸುವುದು ಬಹು ದೊಡ್ಡ ಸಾಧನೆ. ಡಾ.ಬಿ.ಎಫ್‌. ದಂಡಿನ ಅದನ್ನು ಸಾಧಿಸಿ ತೋರಿಸಿದ್ದಾರೆ.
-ಗಿರಡ್ಡಿ ಗೋವಿಂದರಾಜ
ವಿಮರ್ಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT