ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆ ಹೋದ ಜನ: ಬಿಕೋ ಎನ್ನುವ ಗ್ರಾಮ

ಬರಗಾಲದಿಂದ ತತ್ತರಿಸಿದ ಹಳ್ಳಿಗರು; ಮನೆಗಳಿಗೆ ಬೀಗ, ವಯೋವೃದ್ಧರು– ಮಕ್ಕಳಷ್ಟೇ ವಾಸ್ತವ್ಯ; ನೀರಿಗೂ ಸಂಕಷ್ಟ
Last Updated 27 ಮಾರ್ಚ್ 2017, 8:16 IST
ಅಕ್ಷರ ಗಾತ್ರ
ಗಜೇಂದ್ರಗಡ: ಭೈರಾಪುರ ಗ್ರಾಮದಲ್ಲಿ ಲಂಬಾಣಿ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಾಲ್ಮೀಕಿ ಜನರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೆ ಭೈರಾಪುರ ತಾಂಡಾದ ಬಹುತೇಕ ಯುವಜನರು ಕೆಲಸಕ್ಕಾಗಿ ಬೇರೆಡೆ ಗುಳೆ ಹೋಗಿದ್ದರಿಂದ ಈ ಊರು ಜನರಿಲ್ಲದೇ ಬಿಕೋ ಎನ್ನುತ್ತಿದೆ. 
 
ಕೆಲವು ಮನೆಗಳಲ್ಲಿ ಒಬ್ಬಿಬ್ಬರಿದ್ದು, ಇನ್ನು ಕೆಲವು ಮನೆಗಳಿಗೆ ಕೀಲಿ ಹಾಕಲಾಗಿದೆ. ಈಗ ಈ ತಾಂಡಾದಲ್ಲಿ ವಯಸ್ಸಾದವರು, ಮಕ್ಕಳು ಮಾತ್ರ ಕಾಣ ಸಿಗುತ್ತಾರೆ. 
 
ರಾಜೂರ ಪಂಚಾಯಿತಿ ವ್ಯಾಪ್ತಿಗೆ ಸೇರಿದ, ಕಾಲಕಾಲೇಶ್ವರ ಕ್ಷೇತ್ರದ ಗುಡ್ಡದಲ್ಲಿರುವ ಭೈರಾಪುರ ಒಂದು ಕಾಲಕ್ಕೆ ನಾಗರಿಕ ಜಗತ್ತಿನಿಂದ ಗಾವುದ ದೂರದಲ್ಲಿತ್ತು. ಆದರೆ ಈಗ ಅಲ್ಲಿ ರಸ್ತೆ ನಿರ್ಮಾಣಗೊಂಡಿದ್ದು,  ಒಂದೆರಡು ಸಲ ಬಸ್ ಹೋಗಿ ಬರುವುದರಿಂದ ಜನರು ಸಲೀಸಾಗಿ ಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ.

ಆದರೆ ಅಲ್ಲಿನ ಜನರಿಗೆ ಇಂದಿಗೂ ವೈದ್ಯಕೀಯ ಸೌಲಭ್ಯ ಗಗನಕುಸುಮವಾಗಿದೆ. ಜನರು ಕಾಯಿಲೆಯಿಂದ ಬಳಲಿದರೆ, ಗುಡ್ಡವನ್ನಿಳಿದು ಸುಮಾರು 10–12 ಕಿ.ಮೀ ದೂರದ ಪಟ್ಟಣಕ್ಕೆ ಹೋಗಬೇಕಾಗ ಅನಿವಾರ್ಯತೆ ಇದೆ.
 
ಇಲ್ಲಿ ಸುಮಾರು 100 ಲಂಬಾಣಿ ಮನೆಗಳಿದ್ದು,  500 ಜನರಿದ್ದಾರೆ. ಇವರ ಪೈಕಿ ಸುಮಾರು 300ಕ್ಕೂ ಹೆಚ್ಚು ಜನ ದೂರದ ತುಮಕೂರು, ಗೋವಾ, ದಾಂಡೇಲಿ, ಮಂಗಳೂರಿಗೆ ಕೆಲಸಕ್ಕಾಗಿ ಗುಳೆ ಹೋಗಿದ್ದಾರೆ. ಮನೆಯಲ್ಲಿ ಅಸಹಾಯಕರಾದ ವೃದ್ಧರು. ಅವರನ್ನು ನೋಡಿಕೊಳ್ಳಲು ಸಣ್ಣ ಮಕ್ಕಳು ಮಾತ್ರ ಇದ್ದಾರೆ.  ಗುಳೆ ಹೋದವರು ಮರಳಿ ಮಳೆಗಾಲ ಆರಂಭಕ್ಕೆ ಬರುತ್ತಾರೆ. 
 
‘ಪ್ರತಿ ವರ್ಷ ಗುಳೆ ಹೋಗುವುದು ಇವರ ಪಾಲಿಗೆ ತಪ್ಪಿಲ್ಲ. ಯಾವ ಜನನಾಯಕರೂ ಈ ಬಗ್ಗೆ ಚಿಂತಿಸಿಲ್ಲ. ಅವರು ಬರುವುದು ಕೇವಲ ವೋಟು ಕೇಳಲು ಮಾತ್ರ. ಉಳಿದ ದಿನ ಯಾರೂ ನಮ್ಮನ್ನು ಕೇಳುವುದೇ ಇಲ್ಲ. ಇದು ನಮ್ಮ ಕರ್ಮ...’ ಎಂದು ಭೋಜಪ್ಪ ಪಮ್ಮಾರ ಅವರು ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡರು.
 
ಭೈರಾಪುರ ತಾಂಡಾದ ಸಮೀಪದಲ್ಲಿಯೇ ಗುಡ್ಡದಿಂದ ಹರಿದು ಬರುವ ನೀರನ್ನು ನಿಲ್ಲಿಸಲು ತಡೆಗೋಡೆ ನಿರ್ಮಿಸಲಾಗಿದೆ. ಬರಗಾಲದಲ್ಲಿಯೂ ಇಲ್ಲಿ ನೀರು ನಿಂತಿದೆ. 
 
‘ಈ ತಡೆಗೋಡೆಯನ್ನು ಇನ್ನಷ್ಟು ಎತ್ತರಿಸಿದರೆ ಈ ಭಾಗ ಸಮೃದ್ಧಿಯಾಗುತ್ತದೆ. ಆಗ ನಮ್ಮ ಜನರು ಗುಳೆ ಹೋಗುವುದೇ ಇಲ್ಲ. ಆದರೆ ಆ ಕೆಲಸಕ್ಕೆ ಯಾರೂ ಮುಂದೆ ಬರುತ್ತಿಲ್ಲ’ ಎಂದು ಕುಮಾರ ರಾಠೋಡ ಹತಾಶೆ ವ್ಯಕ್ತಪಡಿಸಿದರು.
 
‘ಇಲ್ಲಿಗೆ ಯಾವ ಜನನಾಯಕರೂ ಬರುವುದಿಲ್ಲ. ಆಕಸ್ಮಾತ್ತಾಗಿ ಒಮ್ಮೆ ಬಂದು ಹೋದರೆ ಮತ್ತೆ ಬರುವುದೇ ಇಲ್ಲ. ಇದು ಹೀಗೆಯೇ ನಡೆದುಕೊಂಡು ಬಂದಿದೆ. ಈ ಸಲ ನಾವೂ ಗಟ್ಟಿಯಾಗೀವಿ. ಪಕ್ಷ, ಪಂಗಡ ಮರೆತು  ತಡೆಗೋಡೆ ಎತ್ತರಿಸಿ, ನಮ್ಮನ್ನು ಉಳಿಸಿ ಎಂದು ಕೇಳುತ್ತೇವೆ.

ಯಾರು ನಮ್ಮ  ಅಹವಾಲನ್ನು ಕೇಳ್ತಾರೆಯೋ ಅವರನ್ನು ಬೆಂಬಲಿಸುತ್ತೇವೆ’ ಎಂದು ಪಂಚಾಯಿತಿಯ ಮಾಜಿ ಸದಸ್ಯೆ ದೇವವ್ವ ರಾಠೋಡ ಹೇಳುತ್ತಾರೆ.
ಈ ಊರಲ್ಲಿ ಬೇಸಿಗೆಯಲ್ಲೂ ಸಾಕಷ್ಟು ನೀರಿದೆ. ಆದರೆ ಊರಲ್ಲಿ ಮಾತ್ರ ಹೆಚ್ಚು ಜನರಿಲ್ಲದೇ ಬಿಕೋ ಎನ್ನುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT