ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ಪಟ್ಟಿಗೆ ಮುಂಡರಗಿ: ಆಗ್ರಹ

Last Updated 3 ಜನವರಿ 2014, 8:12 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂ­ಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಮುಂಡರಗಿ ತಾಲ್ಲೂಕು ಪ್ರಗತಿಪರ ಸಂಘಟನೆ ಕಾರ್ಯ­­ಕರ್ತರು ಗುರುವಾರ ಪ್ರತಿ­ಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮುಖಂಡ ವೈ.ಎನ್‌.ಗೌಡರ ನೇತೃತ್ವದಲ್ಲಿ ಜಮಾವಣೆಗೊಂಡ ರೈತ­ರು ಸರ್ಕಾರದ ವಿರುದ್ಧ ಘೋಷಣೆ­ಗಳನ್ನು ಕೂಗಿದರು.

ಸರ್ಕಾರ 98 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕು­ಗಳನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿದೆ. ಆದರೆ ಅತಿ ಹಿಂದುಳಿದ ತಾಲ್ಲೂಕಗಳಲ್ಲಿ ಒಂದಾ­ಗಿರುವ ಮುಂಡರಗಿಯನ್ನು ಪಟ್ಟಿ­ಯಿಂದ ಕೈ ಬಿಡಲಾಗಿದೆ. ಮುಂಡ­ರಗಿಯಲ್ಲಿ ಹಿಂಗಾರು, ಮುಂಗಾರು ಎರಡು ಕೈ ಕೊಟ್ಟಿದ್ದರಿಂದ ರೈತರು ಬಿತ್ತಿದ ಬೆಳೆಗಳು ಸಂಪೂರ್ಣ ಹಾನಿ­ಯಾಗಿದೆ. ರೈತರು ಹಾಗೂ ಕೂಲಿ ಕಾರ್ಮಿಕರು ತೊಂದರೆಯಲ್ಲಿ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡದಿರುವು­ದಕ್ಕೆ ಪ್ರತಿಭಟನಾಕಾರರು ಆಕ್ರೋ ಶ ವ್ಯಕ್ತಪಡಿಸಿದರು.

ಕೂಡಲೇ ಮುಂಡರಗಿ ತಾಲ್ಲೂಕು ಅನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳ­ಬೇಕು. ಸರ್ಕಾರ ಹದಿನೈದು ದಿನದಲ್ಲಿ ಘೋಷಣೆ ಮಾಡದಿದ್ದಲ್ಲಿ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾಧಿಕಾರಿ ಎನ್‌.ಎಸ್‌.­ಪ್ರಸನ್ನ­ಕುಮಾರ್‌ ಅವರ ಮೂಲಕ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ ನವಲಗುಂದ, ಮುಂಜು ಮುಧೋಳ, ಯಲ್ಲಪ್ಪ, ನಾರಾಯಣ, ಬಸವ­ರಾಜ, ಎ.ಕೆ.ಬೆಲ್ಲದ, ಕರಿಬಸಪ್ಪ ಹಂಚಿನಾಳ ಭಾಗವಹಿಸಿದ್ದರು.

ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
ಮುಂಡರಗಿ:
ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸು­ವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾದ ಕಾರ್ಯ­ಕರ್ತರು ಗುರುವಾರ ಪಟ್ಟಣ­ದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಬೆಳಿಗ್ಗೆ ಕೋಟೆಭಾಗದ ಆಂಜನೇಯ ದೇವಸ್ಥಾನದಿಂದ ಹೊರಟ ಪ್ರತಿ­ಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾ­ರದ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ನಂತರ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದೇವಪ್ಪ ಇಟಗಿ ಮಾತನಾಡಿ, ‘ಮುಂಡ­ರಗಿ ತಾಲ್ಲೂಕು ಸತತವಾಗಿ ಬರಗಾಲಕ್ಕೆ ಈಡಾಗುತ್ತಿದೆ. ಆದರೆ ಮುಂಡರಗಿ­ಯನ್ನು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸುವ ಮೂಲಕ ರಾಜ್ಯ ಸರ್ಕಾರ ತಾಲ್ಲೂಕಿನ ರೈತರಿಗೆ ತೀವ್ರ ಅನ್ಯಾಯ ಎಸಗಿದೆ’ ಎಂದು ದೂರಿದರು.

ಪುರಸಭೆ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ’ತಾಲ್ಲೂಕು ಬರಗಾಲಕ್ಕೆ ಈಡಾಗಿ ರೈತರು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಷ್ಟಗಳನ್ನು ನಿವಾರಿಸುವುದನ್ನು ಬಿಟ್ಟು, ಸ್ಥಳೀಯ ಶಾಸಕರು ವಿದೇಶಿ ಪ್ರವಾಸಕ್ಕೆ ತೆರಳಿ ಇಲ್ಲಯ ಜನತೆಯನ್ನು ಮರೆತಿದ್ದಾರೆ. ತಾಲ್ಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಿ ತಕ್ಷಣ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರೈತರಿಗೆ 2011–12ರ ಬೆಳೆ ವಿಮೆ ನೀಡಬೇಕು. ಕಾಲು ಬೇನೆ ಬಾಯಿ ಬೇನೆಗಳಿಂದ ಸಾವಿಗೀಡಾದ ಜಾನು­ವಾರುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಬಿದಾಯಿ ಯೋಜನೆ­ಯನ್ನು ಎಲ್ಲ ವರ್ಗದವರಿಗೂ ವಿಸ್ತ­ರಿಸಬೇಕು. ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ, ಬಿ.ಎಸ್‌.ಶಶಿಮಠ ಮೊದಲಾದವರು ಮಾತನಾಡಿ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಪುರಸಭೆ ಸದಸ್ಯರಾದ ಸುರೇಶ ಮಾಳೆಕೊಪ್ಪ, ಶಂಕರಗೌಡ ಪಾಟೀಲ, ಬಿಜೆಪಿ ಮುಖಂಡರಾದ ಬಸವರಾಜ ಬಿಳಿಮಗ್ಗದ, ಶಿವು ನಾಡಗೌಡರ, ಮಂಜುನಾಥ ಇಟಗಿ, ಫಕ್ಕಿರೇಶ ಬಳಿಗಾರ, ದೇವರಾಜ ಕಲಕೇರಿ, ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT