ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ಗಿಯ ಸಂಭ್ರಮ ಕಸಿದ ಅಕಾಲಿಕ ಮಳೆ

ಜಿಲ್ಲೆಯಾದ್ಯಂತ ಮಳೆ; ಆತಂಕದಲ್ಲಿ ರೈತರು; ಧಾನ್ಯ, ಮೇವು ಸಂರಕ್ಷಣೆಗೆ ಹರಸಾಹಸ
Last Updated 17 ಮಾರ್ಚ್ 2018, 9:57 IST
ಅಕ್ಷರ ಗಾತ್ರ

ಗದಗ: ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದ ಪರಿಣಾಮ ಜಿಲ್ಲೆಯಾದ್ಯಂತ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಸಂಜೆ ಸಾಮಾನ್ಯ ಮಳೆಯಾಗಿದೆ.

ನರಗುಂದ, ಮುಂಡರಗಿ, ನರೇಗಲ್‌ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗದಗ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಂಡರಗಿಯಲ್ಲಿ ತುಂತುರು ಮಳೆ ಸುರಿದಿದೆ.

ಅಕಾಲಿಕ ಮಳೆಯು ರೈತರ ಹಿಂಗಾರು ಸುಗ್ಗಿಯ ಸಂಭ್ರಮ ಕಸಿದಿದ್ದು, ಬೆಳೆ ನಷ್ಟದ ಆತಂಕ ಎದುರಿಸಿದ್ದಾರೆ.

ನರಗುಂದ ವರದಿ: ತಾಲ್ಲೂಕಿನಲ್ಲಿ ಹಿಂಗಾರು ಬೆಳೆಗಳು, ಕಟಾವು ಹಂತಕ್ಕೆ ಬಂದು ತಲುಪಿದ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಗುರುವಾರ ರಾತ್ರಿ ಹಾಗೂ ಶುಕ್ರವಾರ ಸಂಜೆ ಜೋರಾಗಿ ಮಳೆ ಸುರಿದಿದ್ದು, ಅನ್ನದಾತರನ್ನು ಆತಂಕಕ್ಕೀಡು ಮಾಡಿದೆ. ಜೋಳ,ಗೋಧಿ ಹಾಗೂ ಕಡಲೆ ಬೆಳೆಗಳು ಮಳೆಗೆ ಸಿಲುಕಿವೆ. ಅವುಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿರುವ ದೃಶ್ಯ ಶುಕ್ರವಾರ ಸಂಜೆ ಕಂಡು ಬಂತು. ರೈತರು ಹೊದಿಕೆಗಳೊಂದಿಗೆ ಹೊಲದತ್ತ ಧಾವಿಸಿದರು.

‘ಮಳೆ ಆಗಿ ಕೆಡಸ್ತು, ಹೋಗಿ ಕೆಡಸ್ತು’ ಎಂಬಂತೆ ಹೊಲದಲ್ಲಿಯೇ ಜೋಳ ಕಿತ್ತು, ಗೋಧಿ ಕಟಾವು ಮಾಡಿ ಬಿಡಲಾಗಿದೆ. ಕೈಗೆ ಬಂದ ತುತ್ತು ಮನೆಗೆ ಬಾರದಂತಾಗಿದೆ. ಇದಕ್ಕೆ ಧಾರಣೆಯೂ ಕಡಿಮೆಯಾಗುತ್ತದೆ’ ಎಂದು ಭೈರನಹಟ್ಟಿಯ ರೈತ ಅಯ್ಯಪ್ಪ ಖಾನಾಪೂರ ನೋವು ತೋಡಿಕೊಂಡರು.

ಮೇವು ಸಂರಕ್ಷಣೆಗೆ ಹರಸಾಹಸ: ಹಿಂಗಾರು ಬೆಳೆ ಕಟಾವಿನ ಸಂದರ್ಭದಲ್ಲಿ ಜಾನುವಾರುಗಳಿಗೆ ಬೇಕಾದ ಮೇವು, ಹೊಟ್ಟು ಸಂಗ್ರಹಣೆ ಆಗುತ್ತದೆ. ಆದರೆ, ಈಗ ಮಳೆಯಿಂದ ಮೇವು ಸಂಪೂರ್ಣ ಹಾನಿಯಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ನರೇಗಲ್: ಹೋಬಳಿಯ ಸುತ್ತಮುತ್ತ ಗುರುವಾರ ರಾತ್ರಿಯಿಂದ ಮೋಡ ಕವಿದ ವಾತಾವರಣವಿದ್ದು ಶುಕ್ರವಾರ ಅಲ್ಲಲ್ಲಿ ತುಂತುರು ಮಳೆ ಸುರಿಯಿತು.

ಜಮೀನಿನಲ್ಲಿ ಬೆಳೆದಿದ್ದ ಹಿಂಗಾರು ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪರದಾಡಿದರು. ಹೋಬಳಿಯ ಜಕ್ಕಲಿ, ಮಾರನಬಸರಿ, ಹೊಸಳ್ಳಿ, ಡ.ಸ.ಹಡಗಲಿ, ಬೂದಿಹಾಳ, ಹಾಲಕೆರೆ, ನಿಡಗುಂದಿ ಗ್ರಾಮಗಳಲ್ಲಿ ಸಾಮಾನ್ಯ ಮಳೆಯಾಗಿದೆ.

ಪಟ್ಟಣದ ಹೊರ ವಲಯದ ಗದಗ ರಸ್ತೆ, ವೀರಪ್ಪಜ್ಜನಮಠದ ರಸ್ತೆ, ಗಜೇಂದ್ರಗಡ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ರಾಶಿ ಮಾಡಲು ಸಂಗ್ರಹಿಸಿದ್ದ ಬೆಳೆಗಳನ್ನು ರಕ್ಷಿಸಲು ರೈತರು ಹೊದಿಕೆಯೊಂದಿಗೆ ಧಾವಿಸಿದ ದೃಶ್ಯ ಕಂಡು ಬಂತು.

ಸುಗ್ಗಿಯ ಸಮಯದಲ್ಲಿ ಆಗುತ್ತಿರುವ ಮಳೆಯಿಂದ ಅಪಾರ ನಷ್ಟವಾಗುತ್ತದೆ. ಮಳೆಗೆ ಸಿಕ್ಕ ಬೆಳೆಗಳಿಗೆ ಸೂಕ್ತವಾದ ಬೆಲೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ’ ಎಂದು ರೈತ ಶರಣಪ್ಪ ಮಾರನಬಸರಿ ಆತಂಕ ವ್ಯಕ್ತಪಡಿಸಿದರು.

ಚರಂಡಿ ನೀರು ಮನೆ ನುಗ್ಗಿ ಹಾನಿ
ಶಿರಹಟ್ಟಿ:
ಶುಕ್ರವಾರ ಸಂಜೆ ಸುರಿದ ರಭಸದ ಮಳೆಗೆ ಅಂಬೇಡ್ಕರ್‌ ನಗರದಲ್ಲಿ ಚರಂಡಿ ನೀರು ಹಲವು ಮನೆಗಳಿಗೆ ನುಗ್ಗಿತು.

ಇಲ್ಲಿನ ದೇವಪ್ಪ ಫಕೀರಪ್ಪ ತಳವಾರ ಮನೆ ಹಾಗೂ ಅಕ್ಕಪಕ್ಕದ ಆಶ್ರಯ ಮನೆಗಳಿಗೆ ನೀರು ನುಗ್ಗಿ ಗೃಹಬಳಕೆ ವಸ್ತುಗಳು, ಧಾನ್ಯಗಳು ನೀರು ಪಾಲಾದವು.

ಚರಂಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇರದ ಕಾರಣ ಕೊಳಚೆ ನೀರು ಮನೆಗಳಿಗೆ ನುಗ್ಗಿತು.

ಬಡಾವಣೆಯ ನಿವಾಸಿಗಳು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT