ಗಿರಿಧಾಮ, ಸಾವನದುರ್ಗದ ಅಭಿವೃದ್ಧಿಗೆ ಸಂಕಲ್ಪ

7
300 ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ಶಾಸಕ ಎ.ಮಂಜು

ಗಿರಿಧಾಮ, ಸಾವನದುರ್ಗದ ಅಭಿವೃದ್ಧಿಗೆ ಸಂಕಲ್ಪ

Published:
Updated:
Deccan Herald

ಮಾಡಬಾಳ್‌(ಮಾಗಡಿ): ‘ಗಿರಿಧಾಮ ಹಾಗೂ ಸಾವನದುರ್ಗವನ್ನು ನಂದಿದುರ್ಗದಂತೆ ಅಭಿವೃದ್ಧಿ ಪಡಿಸುತ್ತೇವೆ’ ಎಂದು ಶಾಸಕ ಎ. ಮಂಜುನಾಥ ತಿಳಿಸಿದರು.

ಸಾವಂಧಿ ವೀರಭಧ್ರ ಸ್ವಾಮಿ ದೇಗುಲದಿಂದ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ವರೆಗೆ 300 ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಲೋಕೋಪಯೋಗಿ ಇಲಾಖೆಯ ವತಿಯಿಂದ ₹1 ಕೋಟಿ ವೆಚ್ಚದಲ್ಲಿ ಸಿಸಿ ಡ್ರೈನ್‌ ಮತ್ತು ತಡೆಗೋಡೆ ಹಾಗೂ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುತ್ತಿದೆ. ಹೈಮಾಸ್ಟ್‌ ದೀಪ ಹಾಕಿಸುತ್ತೇವೆ. ರಸ್ತೆಯ ಎರಡು ಬದಿಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ದೀಪ ಅಳವಡಿಸಲಿದ್ದಾರೆ’ ಎಂದು ಹೇಳಿದರು.

‘ನಾಯಕನ ಪಾಳ್ಯ ಗೇಟ್‌ ಬಳಿ ಉಪ ಪೊಲೀಸ್‌ ಠಾಣೆ ಆರಂಭಿಸಲಾಗುವುದು. ಪ್ರವಾಸಿ ತಾಣಕ್ಕೆ ಬರುವವರ ವಿವರಗಳನ್ನು ದಾಖಲು ಮಾಡಿ, ಅವಘಡಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಿಸಿ ಟಿವಿ ಅಳವಡಿಸುವ ಆಲೋಚನೆಯೂ ಇದೆ’ ಎಂದು ವಿವರಿಸಿದರು.

‘ಇಲ್ಲಿ ನಡೆಯುತ್ತಿವೆ ಎನ್ನಲಾದ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕುತ್ತೇವೆ. ಯಾತ್ರಿ ನಿವಾಸ ಕಟ್ಟಡ ಕಟ್ಟಿಸಿ, ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು. ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಒದಗಿಸುವ ಯೋಜನೆಯ ಕುಂಠಿತವಾಗಿರುವ ಬಗ್ಗೆ ಪರಿಶೀಲನೆ ನಡೆಸುವೆ. ಪ್ರವಾಸಿಗರು ಸಂಸಾರ ಸಮೇತ ಇಲ್ಲಿಗೆ ಬಂದು ಸುಂದರ ಪ್ರಕೃತಿಯನ್ನು ನೋಡಿ ಆನಂದಿಸುವ ಜತೆಗೆ ಅರಣ್ಯ ಮತ್ತು ಬೆಟ್ಟ ಹಾಗೂ ದೇವರ ದರ್ಶನ ಪಡೆದು ಇಲ್ಲಿಯೇ ವಿಶ್ರಾಂತಿ ಪಡೆಯಲು ಬೇಕಾದ ಅನುಕೂಲ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್‌, ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮ್ಮ ಕೆಂಚಪ್ಪ, ಹಂಚಿಕುಪ್ಪೆ ಪಂಚಾಯಿತಿ ಸದಸ್ಯರಾದ ನಸೀಮ ಗುಲ್ಜಾರ್‌ ಶರೀಫ್‌, ನಜೀರ ಅಹಮದ್‌, ಜೆಡಿಎಸ್‌ ಮುಖಂಡ ರಹಮತ್‌ ಉಲ್ಲಾಖಾನ್‌, ಮಂಚನಬೆಲೆ ನರಸೇಗೌಡ, ವಿ.ಜಿ. ದೊಡ್ಡಿ ಶಶಿ, ಮಾರೇಗೌಡನ ದೊಡ್ಡಿ ಪಂಚಣ್ಣ, ಕೆ.ವಿ. ತಾಂಡ್ಯದ ರಾಜಣ್ಣ, ಪ್ರಕಾಶ್‌, ಪುಟ್ಟಣ್ಣ, ಮಂಜು, ದಬ್ಬಗುಳಿ ಶಿವಣ್ಣ, ಗವಿನಾಗಮಂಗಲ ಹೇಮಂತ್‌, ಜೋಡಗಟ್ಟೆ ನರಸೇಗೌಡ, ಕರಲಮಂಗಲ ಮಂಜು, ಸತ್ಯನಾರಾಯಣ ರಾವ್‌ ಸಾವನದುರ್ಗದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಕೆಂಪರಾಜು, ಮೂರ್ತಿ ಜಿ.ಕೆ., ಸುರೇಶ್‌, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಟಗೊಂಡನಹಳ್ಳಿ ರಾಮಣ್ಣ, ಕಿರಿಯ ಎಂಜಿನಿಯರ್‌ ಇಂದುಧರ ಇದ್ದರು. ಮೂರ್ತಿ ಮತ್ತು ಸುರೇಶ್‌ ಶಾಸಕರನ್ನು ಸನ್ಮಾನಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !