ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರಕ್ಕೆ ಹೋಗುವ ಬದಲು ಹೂ, ತರಕಾರಿ ಬೆಳೆಯುವುದೇ ಉತ್ತಮ’

Last Updated 7 ನವೆಂಬರ್ 2018, 14:56 IST
ಅಕ್ಷರ ಗಾತ್ರ

ಮಾಗಡಿ: ಅಕ್ಷರ ಕಲಿತ ಯುವಕರು ನಗರದತ್ತ ಮುಖ ಮಾಡದೆ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಭೂಮಿಯನ್ನು ನಂಬಿ ಶ್ರಮಪಟ್ಟು, ಹೂವು, ಹಣ್ಣು, ತರಕಾರಿ ಬೆಳೆದರೆ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ಪ್ರಗತಿಪರ ರೈತ ಹನುಮಾಪುರದ ಚಿಕ್ಕಣ್ಣ ತಿಳಿಸಿದರು.

‘ಹೂವಿನ ತೋಟದಲ್ಲಿ ನಿತ್ಯ ಕೆಲಸ ಮಾಡುವುದರಿಂದ ಮಾನಸಿಕ ನೆಮ್ಮದಿಯ ಜತೆಗೆ ರೋಗರಹಿತ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ನಮ್ಮ ಅಪ್ಪ ಗಿರಿಯಪ್ಪ ಅವರ ಆಶಯದಂತೆ ಹೂವು ಬೆಳೆಯಲು ಆರಂಭಿಸಿದ್ದೇವೆ. 1 ಎಕರೆ ಭೂಮಿಯಲ್ಲಿ 3 ತಿಂಗಳ ಹಿಂದೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಮಾರಿಗೋಲ್ಡ್‌ ಹೂವಿನ ಸಸಿಗಳನ್ನು ನೆಟ್ಟೆವು ಒಟ್ಟು ₹ 40 ಸಾವಿರ ಖರ್ಚಾಗಿದೆ’ ಎಂದರು.

‘ಹಬ್ಬದ ಸಮಯವಾಗಿದ್ದು 10 ದಿನಗಳಿಂದಲೂ ಹೂವನ್ನು ಕಟಾವು ಮಾಡಿ 1 ಕೆ.ಜಿಗೆ ₹ 200 ರಂತೆ ಮಾರಾಟ ಮಾಡುತ್ತಿದ್ದೇವೆ. ಬೇರೆ ದಿನಗಳಲ್ಲಿ ಕೆಜಿಯೊಂದಕ್ಕೆ ₹ 80 ರಂತೆ ಹೂವು ಮಾರಾಟವಾಗಿತ್ತು’ ಎಂದು ಹೇಳಿದರು.

ಮಾರಿಗೋಲ್ಡ್‌ ಹೂವು ಒಂದು ವಾರ ಕಳೆದರೂ ಒಣಗುವುದಿಲ್ಲ. ಬಣ್ಣ ಸಹ ಮಾಸುವುದಿಲ್ಲ. ದೀಪಾವಳಿ, ಕಾರ್ತಿಕ ಮಾಸದಲ್ಲಿ ಹೂವಿಗೆ ಬೇಡಿಕೆ ಇರುತ್ತದೆ. ಬಡತನ ಎಂದು ಬಸವಳಿಯದೆ ಇರುವ ಭೂಮಿಯಲ್ಲಿಯೇ ಶ್ರಮ ಪಟ್ಟರೆ ಬದುಕು ಕಟ್ಟಿಕೊಳ್ಳಬಹುದು ಎಂದರು.

‘ಉಳಿದ ಒಂದು ಎಕರೆ ಭೂಮಿಯಲ್ಲಿ ಸಿಲ್ವರ್‌, ಬಾಳೆಗಿಡ, ಅಡಿಕೆ ಸಸಿ ನೆಟ್ಟಿದ್ದೇವೆ. ಮನೆಯಲ್ಲಿ ನಮ್ಮ ತಾಯಿ ಮುನಿಯಮ್ಮ ಅವರ ಮಾರ್ಗದರ್ಶನದಲ್ಲಿ ಭೂಮಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದೇವೆ’ ಎಂದರು.

ಅರುಂಧತಿಯೊಂದಿಗೆ ನಿತ್ಯ ಹೊಲದಲ್ಲಿಯೇ ಮನೆ ಕಟ್ಟಿಕೊಂಡಿರುವ ಚಿಕ್ಕಣ್ಣ, ಸಾವಯವ ಕೃಷಿಯತ್ತ ಗಮನ ಹರಿಸಿದ್ದಾರೆ. ಅವರ ಹೊಲದಲ್ಲಿ ಒಂದು ಇಂಚು ಭೂಮಿಯನ್ನು ಬೀಳು ಬಿಡದೆ ಹಚ್ಚಹಸಿರಿನಿಂದ ಕಂಗೊಳಿಸುವಂತೆ ವಿವಿಧ ಸೊಪ್ಪು, ತರಕಾರಿ, ಹೂವು ಬೆಳೆಯುತ್ತಿದ್ದಾರೆ. ಹಸು, ಕೋಳಿ, ನವಿಲು, ಮೊಲ, ನಾಯಿ, ಎಮ್ಮೆ ಸಾಕಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವರ ತೋಟ ಮಾರ್ಗದರ್ಶಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT