ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾರ್ಗದರ್ಶನ

Last Updated 28 ಮಾರ್ಚ್ 2020, 10:05 IST
ಅಕ್ಷರ ಗಾತ್ರ

ಸಾಗರ: ಕೊರೊನಾ ಸೋಂಕು ಹರಡದಂತೆ ತಡೆಯಲು ಯಾವ ರೀತಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವ ಬಗ್ಗೆ ತಾಲ್ಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್. ಹೇಳಿದರು.

ಕೊರೊನಾ ಸೋಂಕು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸರ್ಕಾರ ಪ್ರಕಟಿಸಿರುವ ಭಿತ್ತಿಪತ್ರವನ್ನು ಶುಕ್ರವಾರ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎರಡರಿಂದ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಬ್ಬರು ತಾಲ್ಲೂಕು ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಈ ತಂಡವು ತಮಗೆ ನಿಗದಿಪಡಿಸಿದ ಗ್ರಾಮಗಳಿಗೆ ಹೋಗಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪರ ಊರಿನವರು ಪ್ರವೇಶಿಸದಂತೆ ರಸ್ತೆಗೆ ಬೇಲಿ ಹಾಕಿರುವುದು ಗಮನಕ್ಕೆ ಬಂದಿದೆ. ಇಂತಹ ಗ್ರಾಮಗಳ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿ ಬೇಲಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ನಗರ ವ್ಯಾಪ್ತಿಯಲ್ಲೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿಯಿಂದ ಜಾಗೃತಿ ಕಾರ್ಯಕ್ರಮ ಸಾಗಿದೆ ಎಂದರು.

ತಾಲ್ಲೂಕಿನ ಕೋಗಾರ್ ಹಾಗೂ ಚೂರಿಕಟ್ಟೆ ಗ್ರಾಮದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಈ ಮೂಲಕ ಬೇರೆ ಜಿಲ್ಲೆಗಳಿಂದ ಸಾಗರಕ್ಕೆ ಬಂದು ನೆಲೆಸುವವರ ಪಟ್ಟಿ ಮಾಡಲಾಗುವುದು ಎಂದು ಹೇಳಿದರು.

ತಾಲ್ಲೂಕಿಗೆ ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರ ಪಟ್ಟಿ ಮಾಡಲಾಗಿದೆ. ಅಂತಹವರನ್ನು ಗುರುತಿಸಿ ಅವರ ಮೇಲೆ ‘ಗೃಹ ನಿಗಾ’ ಇರಿಸಲಾಗಿದೆ. ಅಂತಹ ಮನೆಗಳಲ್ಲಿರುವ ಇತರ ಸದಸ್ಯರಿಗೆ ಹೊರಗಡೆಯಿಂದ ಬಂದಿರುವವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಎನ್.ಮೋಹನ್, ನಗರಸಭೆ ಪೌರಾಯುಕ್ತ ಎಸ್.ರಾಜು, ಪರಿಸರ ಅಭಿಯಂತರ ಪ್ರಭಾಕರ್, ಆರೋಗ್ಯ ನಿರೀಕ್ಷಕ ಸುರೇಶ್ ಎ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT