ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಯಲ್ಲಿ 19 ಎಚ್1 ಎನ್1 ಪ್ರಕರಣ ಪತ್ತೆ

ಸೋಂಕು ತಡೆಗೆ ಆಸ್ಪತ್ರೆಗಳಲ್ಲಿ ಔಷಧ ಲಭ್ಯ, ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌
Last Updated 20 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಎಚ್‌1ಎನ್1 ಜ್ವರ ಉಲ್ಬಣಿಸುತ್ತಿದ್ದು, ತಿಂಗಳಲ್ಲಿ ಒಟ್ಟು 19 ಜನರಿಗೆ ಸೋಂಕು ತಗುಲಿದೆ. ಕೆಲ ದಿನಗಳ ಹಿಂದೆಯಷ್ಟೇ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮಾಂತರ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಹೆಚ್ಚು ಸೋಂಕು ಕಂಡು ಬಂದಿರುವುದು ಆತಂಕ ಉಂಟು ಮಾಡಿದೆ. ಹಾಸನ ನಗರವೊಂದರಲ್ಲೆ 7 ಪ್ರಕರಣಗಳು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಏಳು ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಟ್ಯಾಮಿಫ್ಲ್ಯೂ ಮಾತ್ರೆ ಸಹಿತ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆ ಮಾಡಲಾಗಿದೆ. ರೋಗ ಪೀಡಿತರಿಂದ ಗಂಟಲಿನ ಸ್ರಾವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

2017ರಲ್ಲಿ 242 ಮಂದಿಯಿಂದ ದ್ರವ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ 49 ಜನರಲ್ಲಿ ಸೋಂಕು ಕಾಣಿಸಿಕೊಂಡು, ಆರು ಮಂದಿ ಮೃತಪಟ್ಟಿದ್ದರು. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ (ಪ್ರತಿ ತಾಲ್ಲೂಕಿಗೆ 100 ರಂತೆ) ಚಿಕಿತ್ಸೆಗೆ ಅಗತ್ಯವಿರುವ Oseltamivir 75mg ಮಾತ್ರೆಗಳನ್ನು ದಾಸ್ತಾನು ಇರಿಸಲಾಗಿದೆ.

ಶಂಕಿತರ ಗಂಟಲಿನ ದ್ರವ ಮಾದರಿ ಸಂಗ್ರಹಿಸಲು ಅಗತ್ಯವಿರುವ ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ (ವಿ ಟಿ ಮ್ ಅಂಡ್‌ ಸ್ವಾಬ್) ಗಳು ಆಸ್ಪತ್ರೆಯಲ್ಲಿ ಲಭ್ಯ ಇದೆ.

ಪ್ರಕರಣ ವರದಿಯಾದ ತಕ್ಷಣ ರೋಗಿಯ ಮನೆ ಮತ್ತು ಸುತ್ತಮುತ್ತ ಆರೋಗ್ಯ ಕಾರ್ಯಕರ್ತರು ಐಎಲ್ ಐ ಕಲ್ಚರ್ ಬಗ್ಗೆ ಸಕ್ರಿಯ ಸಮೀಕ್ಷೆ ನಡೆಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಗುತ್ತಿದೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್, ‘ಈ ವರೆಗೆ 19 ಎಚ್‌ 1 ಎನ್‌ 1 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 97 ರೋಗಿಗಳ ಮಾದರಿಯನ್ನು ಉಡುಪಿಯ ಮಣಿಪಾಲದ ವೈರಲ್‌ ಇನ್‌ಸ್ಟಿಟ್ಯೂಟ್‌ ಕಳಿಸಲಾಗಿತ್ತು. ಅ. 9 ರಂದು ಚನ್ನರಾಯಪಟ್ಟಣದಲ್ಲಿ ಚಿಕಿತ್ಸೆ ಪಡೆಯದೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜ್ವರ, ಕೆಮ್ಮು, ನೆಗಡಿ ಕಂಡು ಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿತರಿಂದ ಇತರರು ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದರು.

‘ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT