ಬುಧವಾರ, ಮೇ 25, 2022
29 °C
ಅಂತರ ಜಿಲ್ಲಾ ಆರು ವಾಹನ ಕಳ್ಳರ ಬಂಧನ, ನಕಲಿ ಕೀ ಬಳಸಿ ಕೃತ್ಯ

₹44 ಲಕ್ಷ ಮೌಲ್ಯದ 20 ವಾಹನ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಕಲಿ ಕೀ ಬಳಸಿ ಹಳೆಯ ಕಾರು, ಜೀಪ್‌ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರು ಅಂತರ
ಜಿಲ್ಲಾ ವಾಹನ ಕಳ್ಳರನ್ನು ಬಂಧಿಸಿರುವ ಸಕಲೇಶಪುರ ನಗರ ಠಾಣೆ ಪೊಲೀಸರು, ಒಟ್ಟು 20 ವಾಹನಗಳನ್ನು
ವಶಪಡಿಸಿಕೊಂಡಿದ್ದಾರೆ.

ಹುಣಸೂರು ಪಟ್ಟಣದ ಶಬ್ಬೀರ್‌ ನಗರದ ನಿವಾಸಿಗಳಾದ ಮೊಯ್ದು ಕುನ್ನಿ, ಮಹಮದ್‌ ರಫೀಕ್‌,
ಕೆ.ಆರ್‌.ನಗರದ ಚಿಕ್ಕಮಸೀದಿ ರಸ್ತೆಯ ಅಫ್ರೋಜ್‌ ಖಾನ್‌, ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರ
ಗ್ರಾಮದ ಖಾದರ ಷರೀಫ್‌, ಸೈಯದ್‌ ಅಜ್ಮಲ್‌, ಮಹಮದ್ ಮುಬರಾಕ್‌ ನನ್ನು ಬಂಧಿಸಲಾಗಿದೆ ಎಂದು
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ತಿಳಿಸಿದರು.

ಆರೋಪಿಗಳು ಸಕಲೇಶಪುರ, ಹಾಸನ, ಹೊಳೆನರಸೀಪುರ, ಸುಬ್ರಹ್ಮಣ್ಯ, ಪುತ್ತೂರು ಸೇರಿದಂತೆ ನಾನಾ
ಕಡೆ ಕಳ್ಳತನ ಮಾಡಿದ್ದ ಒಂದು ಆಲ್ಟೊ, ಎರಡು ಮಾರುತಿ 800, ಮೂರು ಮಾರುತಿ ಓಮಿನಿ ಸೇರಿ 20 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ ₹44 ಲಕ್ಷ ಆಗಿದೆ ಎಂದರು.

ಸಕಲೇಶಪುರ ವೃತ್ತದಲ್ಲಿ 2018ರಿಂದಲೂ ವಾಹನಗಳ ಕಳವು ಪ್ರಕರಣ ವರದಿಯಾಗಿತ್ತು. ಆರೋಪಿಗಳ
ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪ್ರಮುಖ ಆರೋಪಿಗಳಾದ ಮೊಯ್ದು ಕುನ್ನಿ ಹಾಗೂ
ಮಹಮ್ಮದ್ ರಫೀಕ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೆನರಸೀಪುರ ಹಾಗೂ ಯಾತ್ರಾ
ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರನ್ನು ಗುರಿಯಾಗಿಸಿಕೊಂಡು ನಕಲಿ ಕೀ
ಬಳಸಿ ಕಳವು ಮಾಡುತ್ತಿದ್ದರು. ನಂತರ ಆಫ್ರೋಜ್‌ ಖಾನ್‌ ಮೂಲಕ ಗುಜರಿ ಅಂಗಡಿಗಳಲ್ಲಿ ಇರುತ್ತಿದ್ದ
ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್‌ಗಳನ್ನು ಕಳವು ವಾಹನಗಳಿಗೆ
ಪಂಚಿಂಗ್‌ ಮಾಡಿಸಿ, ವಿಮೆ ಪಾವತಿಸಿ, ನಕಲಿ ನೋಂದಣಿ ಪ್ರಮಾಣ ಪತ್ರ ಸಿದ್ದಪಡಿಸಿ ಮಾರಾಟ
ಮಾಡುತ್ತಿದ್ದರು ಎಂದು ವಿವರಿಸಿದರು.

ಆರ್‌ಟಿಒ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಖಾದರ್ ಶರೀಫ್, ಸೈಯದ್ ಅಜಮಲ್,
ಮಹಮ್ಮದ್ ಮುಬಾರಕ್ ಸಹ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದರು.

ಹಳೆಯ ವಾಹನಗಳಿಗೆ ಹೆಚ್ಚು ಬೇಡಿಕೆ ಇದ್ದ ಕಾರಣ ಕಳವು ವಾಹನಗಳನ್ನು ಆರೋಪಿಗಳು ಗ್ರಾಮೀಣ
ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸಕಲೇಶಪುರ ವೃತ್ತದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ
ಸಂದರ್ಭದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಬರುತ್ತಿದ್ದ ಮಾರುತಿ 800 ತಡೆದು ವಿಚಾರಣೆಗೆ ಒಳಪಡಿಸಿದಾಗ
ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.

ಆರೋಪಿ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಡಿವೈಎಸ್‌ಪಿ ಗೋಪಿ, ಸಿಪಿಐ ಗಿರೀಶ್‌, ಪೊಲೀಸ್‌
ಸಬ್ ‌ಇನ್‌ಸ್ಪೆಕ್ಟರ್‌ಗಳಾದ ಬಸವರಾಜ ಚಿಂಚೋಲಿ, ಕೆ.ಎನ್.ಚಂದ್ರಶೇಖರ್‌ ಹಾಗೂ ಸಿಬ್ಬಂದಿಗಳಾದ
ನಗರಾಜ್‌, ಲೋಕೇಶ್‌, ಸತೀಶ್‌, ಸುನಿಲ್‌, ಪೃಥ್ವಿ, ಹೇಮಂತ ಕುಮಾರ್‌, ಪೀರ್‌ಖಾನ್‌, ಹರೀಶ್‌, ಮಧು,
ಅಶೋಕ್‌ ಅವರಿಗೆ ವಿಶೇಷ ಬಹುಮಾನ ಘೋಷಿಸಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.