ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆಗೆ ನೀರು: 20 ವರ್ಷದ ಕನಸು ನನಸು’

ಹುಳಿಗೆರೆ ಕೆರೆಗೆ ಬಾಗಿನ ಅರ್ಪಣೆಗೆ ಶಾಸಕರನ್ನು ಎತ್ತಿನ ಗಾಡಿ ಮೆರವಣಿಗೆ
Last Updated 20 ಅಕ್ಟೋಬರ್ 2020, 2:39 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ‘ಚನ್ನರಾಯಪಟ್ಟಣ ತಾಲ್ಲೂಕಿನ ನೀರಾವರಿ ಯೋಜನೆ ಅನುಷ್ಠಾನಗೊಂಡು ರೈತರ ಬದುಕು ಹಸನಾಗಲಿ ಎಂದು ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಿಸುತ್ತೇನೆಯೇ ಹೊರತು, ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲ’ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಭಾನುವಾರ ಹೇಳಿದರು.

ಹೋಬಳಿಯ ಏತನೀರಾವರಿ ಯೋಜನೆಯಿಂದ ಹುಳಿಗೆರೆ ಕೆರೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಸಮರ್ಪಿಸಿ ಮಾತನಾಡಿದರು.

‘ಜನರಲ್ಲಿ ಇಷ್ಟು ದಿನ ನೀರು ಬರುತ್ತೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ, ಈಗ ಹೋಬಳಿಯಾದ್ಯಂತ ಹಲವಾರು ಕೆರೆಗಳು ತುಂಬುತ್ತಿರುವುದರಿಂದ ರೈತರಲ್ಲಿ ವಿಶ್ವಾಸ ಬಂದಂತಾಗಿದ್ದು 20 ವರ್ಷದ ಕನಸು ನನಸಾಗಿದೆ’ ಎಂದರು.

‘ಏತನೀರಾವರಿ ಯೋಜನೆಯು ಸಮರ್ಥವಾಗಿ ಸಾಕಾರಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಕೆಲವರ ಹೇಳಿಕೆಗಳಿಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ’ ಎಂದು ಕಾಂಗ್ರೆಸ್ ಮುಖಂಡರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಇನ್ನು ಒಂದು ವಾರದೊಳಗೆ ಚನ್ನೇನಹಳ್ಳಿ, ಕೆಂಪಿನಕೋಟೆ, ಮರಿಶೆಟ್ಟಿಹಳ್ಳಿ, ಎನ್.ಜಿ.ಕೊಪ್ಪಲು, ಪರಮ ಹಾಗೂ ಹಳೆಬೆಳಗೊಳ, ಬೆಕ್ಕ ಕೆರೆಗಳು ತುಂಬಲಿದೆ. ಇದೇ 25 ರ ಹೊತ್ತಿಗೆ ಮತಿಘಟ್ಟ ಕೆರೆಗೆ ನೀರು ಹರಿಯಲಿದ್ದು, ನಂತರ ಹಿರೀಸಾವೆ ಭಾಗದ ಕೆರೆಗಳು ತುಂಬಲಿವೆ. ಡಿಸೆಂಬರ್ 31 ರವರೆಗೆ ನಾಲೆಯಲ್ಲಿ ನೀರು ಹರಿಯಲಿದ್ದು, ಈ ಭಾಗದ ಬಹುತೇಕ ಕೆರೆಗಳು ತುಂಬಲಿವೆ. ಮುಂದಿನ ಸಾಲಿನಲ್ಲಿ ಸುಂಡಹಳ್ಳಿ, ಕಂಡೇರಿಕಟ್ಟೆ, ಹೊಸಹಳ್ಳಿ, ಚಲ್ಯಾ, ಕುಂಭೇನಹಳ್ಳಿ ಕೆರೆಗಳಿಗೆ ನೀರು ಬರಲಿದೆ ಎಂದು ಹೇಳಿದರು.

‘13 ವರ್ಷಗಳ ನಂತರ ನಮ್ಮೂರಿನ ಕೆರೆಗೆ ಗಂಗಾದೇವಿ ಆಗಮನವಾಗಿದ್ದು, ಅತ್ಯಂತ ಸಂತೋಷಗೊಂಡಿದ್ದೇವೆ ಹಾಗಾಗಿ ಅಭಿವೃದ್ಧಿಯ ಹರಿಕಾರರಾದ ಹರಿಕಾರ ನಮ್ಮ ಶಾಸಕ ಸಿ.ಎನ್‌.ಬಾಲಕೃಷ್ಣ ನೂರ್ಕಾಲ ಬಾಳಲಿ’ ಎಂದು ಗ್ರಾಮದ ರಾಜಮ್ಮ, ಚಿಕ್ಕಮ್ಮ, ನಂಜುಂಡೇಗೌಡ, ನಾಗೇಗೌಡ ಹೇಳಿದರು.

‘ಹುಳಿಗೆರೆ ಕೆರೆಯು 25 ಎಕರೆ ಪ್ರದೇಶವನ್ನು ಹೊಂದಿದ್ದು, ಈಗ ಕೆರೆ ತುಂಬಿದ್ದರಿಂದ ನಮ್ಮ ಸುತ್ತಮುತ್ತಲಿನ ಜಮೀನಿನ ತೆಂಗಿನ ತೋಟ ಸಮೃದ್ಧಿಗೊಂಡಿದ್ದು, ಅಂತರ್ಜಲ ಹೆಚ್ಚಾಗಿದ್ದರಿಂದ ನಮ್ಮ ಸಂಕಷ್ಟಗಳು ದೂರವಾಗಲಿಕ್ಕೆ ಶಾಸಕರ ಕಾಳಜಿಯೇ ಕಾರಣ ಹಾಗಾಗಿ ಅವರನ್ನು ಅಭಿನಂದಿಸುತ್ತೇನೆ’ ಎಂದು ಎಂಜಿನಿಯರ್ ಗಜೇಂದ್ರ ಮಂಜಣ್ಣ, ಹೇಳಿದರು.

ಮೆರವಣಿಗೆಯಲ್ಲಿ ಬಂದು ಗಂಗೆಪೂಜೆ ನೆರವೇರಿಸಿ ಶಾಸಕರು, ಬಾಗಿನ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೇವರಾಜೇಗೌಡ, ಪರಮ ಕೃಷ್ಣೇಗೌಡ, ಮಾಜಿ ತಾ.ಪಂ. ಸದಸ್ಯ ಮಂಜೇಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್‌, ಪೂಮಡಿಹಳ್ಳಿ ಸೊಸೈಟಿ ಅಧ್ಯಕ್ಷ ಡಿ.ಎ.ದೊಡ್ಡೇಗೌಡ, ರಾಜಣ್ಣ, ಗಂಗಣ್ಣ, ಹುಳಿಗೆರೆ, ಬೊಮ್ಮೇನಹಳ್ಳಿ, ಕೆಂಪಿನಕೋಟೆ, ಚನ್ನೇನಹಳ್ಳಿ, ಜುಟ್ಟನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT