ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ಹಿನ್ನೋಟ: ಹಾಸನದಲ್ಲಿ ವಿಂಧ್ಯಗಿರಿ ವಿರಾಗಿಗೆ ಬಣ್ಣದೋಕುಳಿ

ಹೇಮೆ ಒಡಲು ಭರ್ತಿ, ಮಲೆನಾಡಿಗರ ಬದುಕು ಕಸಿದ ರಕ್ಕಸ ಮಳೆ
Last Updated 30 ಡಿಸೆಂಬರ್ 2018, 10:55 IST
ಅಕ್ಷರ ಗಾತ್ರ

ಹಾಸನ: ಹೊಸ ವರ್ಷವೊಂದು ಹೊಸ್ತಿಲಲ್ಲಿ ನಿಂತಿದೆ. ನೂರೆಂಟು ಸಿಹಿ, ಕಹಿ ಹೆಜ್ಜೆ ಗುರುತುಗಳನ್ನು ‘2018’ ಬಿಟ್ಟು ಹೊರಟಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಾವು, ನೋವು ಸಂಭವಿಸಿದವು. ಕೆಲವೆಡೆ ಮನುಷ್ಯ ನಿರ್ಮಿತ ದುರಂತಗಳಿಗೂ ಜನರು ಬಲಿಯಾಗಬೇಕಾಗಿ ಬಂದಿತು.

ರೈತರ ಮೇಲೆ ಪ್ರಕೃತಿ ಮುನಿಸು ಈ ವರ್ಷವೂ ಮುಂದುವರಿಯಿತು. ಅಪಘಾತದಲ್ಲಿ ಸತ್ತವರ ಸಂಖ್ಯೆಯೂ ಕಡಿಮೆ ಏನಿಲ್ಲ. ಮಹತ್ವದ ರಾಜಕೀಯ ವಿದ್ಯಮಾನಗಳು ನಡೆದವು. ಅವಧಿಗೆ ಮುನ್ನವೇ ಹೇಮೆ ಒಡಲು ತುಂಬಿ ಸಮಾಧಾನ ತಂದಿದೆ.

ಏಳು ಮಂದಿ ದುರ್ಮರಣ
ವರ್ಷದ ಆರಂಭದಲ್ಲಿ ಕಹಿ ಘಟನೆ ನಡೆಯಿತು. ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮುಂಜಾನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಪಲ್ಟಿಯಾಗಿ ಚಾಲಕ ಮತ್ತು ನಿರ್ವಾಹಕ ಸೇರಿ 7 ಮಂದಿ ದುರ್ಮರಣ ಹೊಂದಿದರು. ಬೆಳಗಿನ ಜಾವ 3.30ರ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ 20 ಅಡಿ ಆಳಕ್ಕೆ ಬಿದ್ದ ಪರಿಣಾಮ 38 ಮಂದಿ ಪ್ರಯಾಣಿಕರು ಗಾಯಗೊಂಡರು.

ಶತಮಾನದ 2ನೇ ಮಹಾಮಜ್ಜನ
12 ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕ ಅದ್ಧೂರಿಯಾಗಿ ನೆರವೇರಿತು. ಇದು 58.8 ಅಡಿ ಎತ್ತರದ ಮಂದಸ್ಮಿತನಿಗೆ ಶತಮಾನದ ಎರಡನೇ ಮಹಾಮಜ್ಜನ. ರಾಷ್ಟ್ರಪತಿ ರಾಮನಾಥ ಕೋವಿಂದ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಸಂಸದ ಎಚ್‌.ಡಿ.ದೇವೇಗೌಡ ಅವರು ಬರಿಗಾಲಲ್ಲಿ ವಿಂಧ್ಯಗಿರಿ ಬೆಟ್ಟವೇರಿ ಬಾಹುಬಲಿ ದರ್ಶನ ಪಡೆದರು.

₹11.63 ಕೋಟಿಗೆ ಕಳಸ ಹರಾಜು
ಜರ್ಮನ್‌ ತಂತ್ರಜ್ಞಾನದಲ್ಲಿ ₹ 12 ಕೋಟಿ ವೆಚ್ಚದಲ್ಲಿ ಸಿದ್ದಪಡಿಸಿದ ಅಟ್ಟಣಿಗೆಯಲ್ಲಿ ಐದು ಸಾವಿರ ಮಂದಿ ಮಹಾಮಜ್ಜನದ ಕ್ಷಣಗಳನ್ನು ಕಣ್ತುಂಬಿಕೊಂಡರು. ಪ್ರಥಮ ಕಳಸವನ್ನು ₹11.63 ಕೋಟಿಗೆ ಗುಜರಾತ್‌ನ ಆರ್.ಕೆ.ಮಾರ್ಬಲ್‌ ಗ್ರೂಪ್‌ನ ಮಾಲೀಕ ಅಶೋಕ್‌ ಜಿ.ಪಾಟ್ನಿ ಕುಟುಂಬ ಖರೀದಿಸಿತ್ತು. ತ್ಯಾಗಮೂರ್ತಿಗೆ 12 ಭಾಷೆಗಳಲ್ಲಿ ಗೀತೆಗಳನ್ನು ಹಾಡಿ ಗಾಯಕ ದಂಪತಿ ಸರ್ವೇಶ್‌ ಜೈನ್‌ ಮತ್ತು ಸೌಮ್ಯ ಅವರು ನುಡಿ ನಮನ ಸಲ್ಲಿಸಿದ್ದು ವಿಶೇಷ. ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜೈನ ಮುನಿಗಳು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಹಳಗನ್ನಡದ ಕಂಪು
ಕನ್ನಡ ಸಾಹಿತ್ಯ ಪರಿಷತ್‌ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಖಲಿ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ ನಡೆಸಿತು. ಹಿರಿಯ ಸಂಶೋಧಕ ಷ.ಶೆಟ್ಟರ್‌ ಅಧ್ಯಕ್ಷರಾಗಿದ್ದರು. ಪಠ್ಯದಲ್ಲಿ ಹಳಗನ್ನಡ ಅಳವಡಿಕೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಗೋಷ್ಠಿಗಳು ನಡೆದವು.

ಮರೆಯಾದ ಯೋಧ ಚಂದ್ರ
ನಾಲ್ಕು ವರ್ಷಗಳಿಂದ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಯೋಧನಾಗಿದ್ದ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ಚಂದ್ರ ಅವರು ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಸ್ಫೋಟಕ್ಕೆ ಬಲಿಯಾದರು.

ನೆನಪು ಬಿಟ್ಟು ಹೋದವರು
ಜೆಡಿಎಸ್‌ ಹಿರಿಯ ಮುಖಂಡ ಎಚ್‌.ಎಸ್‌.ಪ್ರಕಾಶ್‌, ಮಾಜಿ ಶಾಸಕ ಕೆ.ಎಚ್‌.ಹನುಮೇಗೌಡ, ಸಾಹಿತಿಗಳಾದ ಜ.ಹೋ.ನಾರಾಯಣ ಸ್ವಾಮಿ, ವಿಜಯಾ ದಬ್ಬೆ, ರೈತ ಮುಖಂಡ ಹೆರಗು ಪಾಂಡುರಂಗ ಇಹಲೋಕ ತ್ಯಜಿಸಿದರೂ ತಮ್ಮ, ಕೊಡುಗೆ, ನೆನಪುಗಳನ್ನು ಬಿಟ್ಟು ಹೋದರು.

ಜೆಡಿಎಸ್‌ ಪ್ರಾಬಲ್ಯ
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಜೆಡಿಎಸ್ ಆರು ಸ್ಥಾನ ಪಡೆದರೆ, ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್‌ ಒಂದು ಸ್ಥಾನವನ್ನೂ ಪಡೆಯಲು ಸಾಧ್ಯವಾಗಿಲ್ಲ.

ಘಟಾನುಘಟಿ ರಾಜಕಾರಣಿಗಳೆಸಿದ್ದ ಮಾಜಿ ಶಾಸಕರಾದ ಸಿ.ಎಸ್‌.ಪುಟ್ಟೇಗೌಡ, ಎಚ್‌.ಎಸ್‌.ಪ್ರಕಾಶ್‌ ಹಾಗೂ ಸಚಿವ ಎ.ಮಂಜು ಹೀನಾಯ ಸೋಲು ಕಂಡರು.

ಹಾಸನದಲ್ಲಿ ಗೌಡರ ಶಿಷ್ಯ ಎಚ್‌.ಎಸ್‌.ಪ್ರಕಾಶ್‌ ಅವರಿಗೆ ಬಿಜೆಪಿಯ ಹೊಸ ಮುಖ ಪ್ರೀತಂ ಜೆ. ಗೌಡ ಸೋಲಿನ ರುಚಿ ತೋರಿಸಿದರು. 19 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಿದರು.

ರೈತರ ಸರಣಿ ಆತ್ಮಹತ್ಯೆ
ಈ ವರ್ಷ ಜಿಲ್ಲೆಯಲ್ಲಿ ಬೆಳೆ ನಷ್ಟ, ಸಾಲಬಾಧೆಯಿಂದ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಅಲ್ಲದೇ ಕಾಡಾನೆ ದಾಳಿಯಿಂದ ಐದು ಜನರು ಬಲಿಯಾಗಿದ್ದಾರೆ.

ಅತಿವೃಷ್ಟಿ; ನಷ್ಟ
ಮಳೆನಾಡು ಭಾಗದಲ್ಲಿ ಸುರಿದ ರಕ್ಕಸ ಮಳೆಗೆ ಬೆಟ್ಟ, ಗುಡ್ಡಗಳು ಕುಸಿದು ಕಾಫಿ, ಏಲಕ್ಕಿ, ಮೆಣಸು, ಭತ್ತದ ಗದ್ದೆಗಳು ಸಂಪೂರ್ಣ ನಾಶವಾದವು. ಹಿಜ್ಜನಹಳ್ಳಿ, ಕಲ್ಲಹಳ್ಳಿಯ ಗ್ರಾಮ ಮೂಲ ಸ್ವರೂಪ ಕಳೆದುಕೊಂಡವು. ಮನೆಗಳು ಕುಸಿದು ಬಿದ್ದವು, ಸೇತುವೆಗಳು ಮುಳುಗಡೆಯಾದವು. ಅಲ್ಲಲ್ಲಿ ಭೂಕುಸಿತ, ರಸ್ತೆಗಳು ಬಿರುಕು ಬಿಟ್ಟವು.

ಕೃಷಿ, ತೋಟಗಾರಿಕೆ ಇಲಾಖೆ ಸಮೀಕ್ಷೆ ಪ್ರಕಾರ ₹ 150 ಕೋಟಿ ಹಾನಿ ಸಂಭವಿಸಿದೆ. ಕೊಡಗಿನ ಹಾರಂಗಿ ಜಲಾಶಯದಿಂದ ದಾಖಲೆ ಪ್ರಮಾಣದ ನೀರು ಹೊರ ಬಿಟ್ಟ ಪರಿಣಾಮ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿತು. ಅಪಾರ ಪ್ರಮಾಣದ ಬೆಳೆಗಳು ಹಾನಿಯಾದವು.

ಡಿಸೆಂಬರ್‌ ಅಂತ್ಯಕ್ಕೆ ಜಿಲ್ಲೆಯ ಎಂಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿತು.

ಸಿಬ್ಬಂದಿ ರಕ್ಷಣೆ
ಸಕಲೇಶಪುರ– ಮಂಗಳೂರು ಮಾರ್ಗದ ರೈಲ್ವೆ ಹಳಿ ಮೇಲೆ ಕುಸಿದ ಮಣ್ಣು ತೆರವಿಗೆ ತೆರಳಿ ಅಪಾಯದಲ್ಲಿ ಸಿಲುಕಿದ್ದ ರೈಲ್ವೆಯ 12 ಸಿಬ್ಬಂದಿಯನ್ನು ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದ ತಂಡ ಸ್ಥಳೀಯರ ನೆರವಿನಿಂದ ಸತತ ಆರು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿತು.

ಮೂವರು ಡಿ.ಸಿ ಕಂಡ ಜಿಲ್ಲೆ
ಮೂವರು ಜಿಲ್ಲಾಧಿಕಾರಿಗಳು ಈ ವರ್ಷ ಬಂದು ಹೋದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ನಿಲುವುಗಳಿಗೆ ವಿರುದ್ಧ
ವಾಗಿ ನಡೆದುಕೊಳ್ಳುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಜ.23ರಂದು ವರ್ಗಾವಣೆ ಮಾಡಲಾಗಿತ್ತು.

ಆದರೆ, ಚುನಾವಣಾ ಆಯೋಗ ತಾತ್ಕಾಲಿಕ ತಡೆ ನೀಡಿತು. ನಂತರ ರೋಹಿಣಿ ಅವರನ್ನು ಮತ್ತೆ ಸರ್ಕಾರ ವರ್ಗಾವಣೆ ಮಾಡಿತು. ಆಗ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಮೊರೆ ಹೋದರು.

ಈ ಅವಧಿಯಲ್ಲಿ ರಂದೀಪ್‌ ಹಾಗೂ ಪಿ.ಸಿ.ಜಾಫರ್‌ ಕೆಲ ದಿನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಿಎಟಿಯಲ್ಲಿ ಜಯ ಪಡೆದ ರೋಹಿಣಿ ಅವರನ್ನು ಸರ್ಕಾರ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ನಿಯೋಜಿಸಿತು.

52 ಜೀತದಾಳುಗಳು ಬಂಧಮುಕ್ತ
ಹೆಚ್ಚು ಕೂಲಿ ಕೊಡುವುದಾಗಿ ನಂಬಿಸಿ, ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 52 ಮಂದಿ ಬಡ ಕೂಲಿ ಕಾರ್ಮಿಕರನ್ನು ಜೀತದಾಳಾಗಿ ಇರಿಸಿಕೊಂಡಿದ್ದ ಅಮಾನವೀಯ ಪ್ರಕರಣವನ್ನು ಜಿಲ್ಲಾ ಪೊಲೀಸರು ಬೇಧಿಸಿದರು.

ಹಾಸನ ತಾಲ್ಲೂಕಿನ ಸಾವಂಕನಹಳ್ಳಿ ಗ್ರಾಮದ ತೋಟವನ್ನು ಅದೇ ಊರಿನ ಕೃಷ್ಣೇಗೌಡ ಅವರಿಂದ ಗುತ್ತಿಗೆ ಪಡೆದಿದ್ದ ಅರಸೀಕೆರೆ ತಾಲ್ಲೂಕಿನ ಮುನೇಶ್ ಅಲಿಯಾಸ್ ಮುರುಳಿ ಎಂಬಾತ 4 ಮಕ್ಕಳು, 17 ಮಹಿಳೆಯರು ಹಾಗೂ ಉಳಿದ ಪುರುಷರನ್ನು ಜೀತದಾಳಾಗಿ ಇಟ್ಟುಕೊಂಡಿದ್ದ.

ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ ಹಾಗೂ ಸಿಬ್ಬಂದಿ ದಾಳಿ ನಡೆಸಿ ನರಕಯಾತನೆ ಅನುಭವಿಸುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿ ಬಂಧ ಮುಕ್ತಗೊಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಸ್ತ್ರಿ ಮುನೇಶ್ ಮತ್ತು ಬಸವರಾಜ್‌ ರನ್ನು ಬಂಧಿಸಲಾಯಿತು. ಸೌಲಭ್ಯದ ಭರವಸೆಯೊಂದಿಗೆ ಜೀತ ವಿಮುಕ್ತರನ್ನು ಸ್ವಗ್ರಾಮಕ್ಕೆ ಜಿಲ್ಲಾಡಳಿತ ಕಳುಹಿಸಿತು.

ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಟ್ಟಾಗ ಕಂಡು ಬಂದ ದೃಶ್ಯ.
ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಟ್ಟಾಗ ಕಂಡು ಬಂದ ದೃಶ್ಯ.

ಗಮನ ಸೆಳೆದ ಸಂಗತಿಗಳು

*ಅರಕಲಗೂಡಿನಲ್ಲಿ ರಾಜ್ಯ ಮಟ್ಟದ ಪಶು ಮೇಳ.
*ಒಂಟಿ ಸಲಗದ ದಾಳಿಗೆ ಆಲೂರು. ತಾಲ್ಲೂಕಿನ ಕಡತ್ತವಳ್ಳಿ ಬಳಿ 15 ವರ್ಷದ ಭರತ್ ಬಲಿ.

*ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ, ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್.

*ಹಾಸನದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಭಾಗಿ.

*ಹಾಸನ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿ ಚಂದ್ರಕಾಂತ ಪಡೆಸೂರ ಅಧ್ಯಕ್ಷತೆಯಲ್ಲಿ ಆರಂಭ.

*ಹಾಸನ ನಗರಸಭೆಗೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್ ಅವರಿಂದ ₹ 113 ಕೋಟಿ ಬಜೆಟ್ ಮಂಡನೆ.

*ಹಾಸನದ ವರ್ತುಲ ರಸ್ತೆ ಬಳಿ ಜೆಡಿಎಸ್ ವಿಕಾಸ ಪರ್ವ ಸಮಾವೇಶ.

*ಜಿಲ್ಲೆಗೆ ಲೀಡ್ ಬ್ಯಾಂಕ್ ನಿಂದ ₹ 7076 ಕೋಟಿ ಸಾಲ ಯೋಜನೆ.

*ಹಾಸನ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭಾಗಿ.

* ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜುಗೆ ಜಿಲ್ಲಾಧಿಕಾರಿ ರೋಹಿಣಿ ನೋಟಿಸ್ ಜಾರಿ.

*ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಹಾಸನ ನಗರ ಠಾಣೆಯಲ್ಲಿ ಎ.ಮಂಜು ವಿರುದ್ಧ ಮೊಕದ್ದಮೆ.

*ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ 8ನೇ ಸ್ಥಾನ. ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಮೋಹನ್ ರಾಜ್ಯಕ್ಕೆ 2 ನೇ ಸ್ಥಾನ.

* ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ 7ನೇ ಸ್ಥಾನ. ಹಾಸನದ ಹಿಮಾ, ಕಾವೇರಿಯಪ್ಪ ರಾಜ್ಯಕ್ಕೆ 3ನೇ ಸ್ಥಾನ.

*ಎಚ್.ಡಿ.ರೇವಣ್ಣ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ.

*ಹಾಸನದ ರೈಲ್ವೆ ಮೇಲ್ಸೆತುವೆಗೆ ₹ 41.67 ಕೋಟಿ ವೆಚ್ಚದ ಟೆಂಡರ್.

*ಹಳೆಬೀಡು ಸಮೀಪ ಕಾರು ಅವಘಡದಲ್ಲಿ ಪ್ರೇಮಿಗಳಾದ ಬೇಲೂರಿನ ಗಿರೀಶ, ಕಾರ್ಕಳದ ಸಂಧ್ಯಾ ಬೆಂಕಿಗೆ ಆಹುತಿಯಾದರು.

*ಹಾಸನ - ಸೊಲ್ಲಾಪುರ ರೈಲು ಸಂಚಾರ ಆರಂಭ

*ಹಾಸನದ ದಾಸರಕೊಪ್ಪಲು ಬಳಿ ಹಾಡ ಹಗಲೇ ಸಂತೋಷ ಎಂಬ ಯುವಕನ ಬರ್ಬರ ಹತ್ಯೆ.

*ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಐಸ್‌ಕ್ರೀಂ ಉತ್ಪಾದನಾ ಘಟಕ ಹಾಸನ ಹಾಲು ಒಕ್ಕೂಟದಲ್ಲಿ ₹ 37 ಕೋಟಿ ವೆಚ್ಚದಲ್ಲಿ ಕಾರ್ಯಾರಂಭ.

*ಮಲೆನಾಡಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಹಾಸನ - ಮಂಗಳೂರು ರೈಲು ಸಂಚಾರ ಸ್ಥಗಿತ.

*ರಾಜ್ಯ ಬಜೆಟ್ನಲ್ಲಿ ಹಾಸನ ಅಭಿವೃದ್ಧಿಗೆ ₹ 400 ಕೋಟಿಗೂ ಅಧಿಕ ಅನುದಾನ ನಿಗದಿ.

*ಶಿರಾಡಿ ಘಾಟ್ ಕಾಂಕ್ರೀಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

*ಹೇಮಾವತಿ ಜಲಾಶಯ ಮೂರು ವರ್ಷಗಳ ನಂತರ ಭರ್ತಿ

*ನೀತಿ ಸಂಹಿತೆ ಉಲ್ಲಂಘಿಸಿ ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡಿದ್ದ ಎ.ಮಂಜು ಮೇಲಿನ ಆರೋಪ ಸಾಬೀತು.

*ಒಂಟಿ ಸಲಗದ ದಾಳಿಗೆ ಸಕಲೇಶಪುರ ತಾಲ್ಲೂಕು ಬೆಳಗೋಡು ಹೋಬಳಿ ಹೊಸಗದ್ದೆಯಲ್ಲಿ ವೃದ್ಧೆ ತಾಯಮ್ಮ ಬಲಿ.

*ಹರದನಹಳ್ಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಲದೇವರಿಗೆ ಪೂಜೆ

*ಶಿರಾಡಿಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪ್ರಪಾತಕ್ಕೆ ಬಿದ್ದು ಚಾಲಕ, ಕ್ಲೀನರ್ ಸಾವು

*ಬಿಸಿಲೆ ಘಾಟ್ ನಲ್ಲಿ ಭಾರೀ ಭೂ ಕುಸಿತ ಸಂಚಾರ ಬಂದ್.

*ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ.

*ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಯದುವೀರ್ ಕೃಷ್ಣದತ್ತ ಒಡೆಯರ್ ಭಾಗಿ

*ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎ.ಎನ್‌. ಪ್ರಕಾಶ್ ಗೌಡ ಅವರು ನಿರ್ಗಮಿತ ಎಸ್‌ಪಿ ರಾಹುಲ್‌ ಕುಮಾರ್ ಅವರಿಂದ ಅಧಿಕಾರ ಸ್ವೀಕಾರ

*ಕಾಚೇನಹಳ್ಳಿ ಏತ ನೀರಾವರಿ 3ನೇ ಹಂತಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಿಲಾನ್ಯಾಸ.

*ಹಾಸನದ ಹೊರ ವಲಯ ಹೊಯ್ಸಳ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ.

*ಹಾಸನದ ಕ್ರೀಡಾಂಗಣದಲ್ಲಿ

ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ₹ 1000 ಕೋಟಿ ಕಾಮಗಾರಿಗಳಿಗೆ ಕುಮಾರಸ್ವಾಮಿ ಚಾಲನೆ.

*ಹಾಸನಾಂಬೆಯ ಪವಾಡ ಬಯಲಿಗೆ ಪ್ರಗತಿಪರ ಸಂಘಟನೆಗಳ ಒತ್ತಾಯ.

*ಹಾಸನ - ಮಂಗಳೂರು ನಡುವೆ ಎರಡೂವರೆ ತಿಂಗಳ ನಂತರ ರೈಲು ಸಂಚಾರ ಪುನರಾರಂಭ.

*ಹಾಸನದ ಬಹುಮಹಡಿ ಕಟ್ಟಡಕ್ಕೆ ಹಾಸನ ನಗರಸಭೆ ಬೀಗ ಮುದ್ರೆ.
*ಹಾಸನಾಂಬೆ ದರ್ಶನ ಆರಂಭ.

*ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿ.ಎಂ ಅಧ್ಯಕ್ಷತೆಯಲ್ಲಿ ವಿಶ್ವ ಮಟ್ಟದ ಪ್ರವಾಸಿ ತಾಣದ ಬಗ್ಗೆ ಚರ್ಚೆ.

*ಹಾಸನ ವಿಮಾನ ನಿಲ್ದಾಣ ಭೂಮಿ ಪರಿಹಾರ ದರ ನಿಗದಿ ಹೊಣೆ ಸಚಿವ ರೇವಣ್ಣ ಹೆಗಲಿಗೆ

*ಹಾಸನದಲ್ಲಿ ₹ 1865 ಕೋಟಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ.

*ಟೂರ್ ಆಫ್ ನೀಲಗಿರೀಸ್‌ನಲ್ಲಿ ಸೈಕ್ಲಿಸ್ಟ್‍ಗಳು 125 ಕಿ.ಮೀ. ಕ್ರಮಿಸಿ ಹಾಸನ ತಲುಪಿದರು.
lಸಕಲೇಶಪುರ ತಾಲ್ಲೂಕಿನ ಕಾಕನಮನೆ ಬಳಿ ರೈಲಿಗೆ ಸಿಲುಕಿ ಒಂಟಿ ಸಲಗ ಸಾವು.

*ಪುಂಡಾಟ ನಡೆಸುತ್ತಿದ್ದ ಒಂಟಿ ಸಲಗ ಸೆರೆ.

*ವಿಶ್ವ ಕುಬ್ಜರ ಷಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ವಿಜೇತ ಆರ್‌.ಚೇತನ್‌ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

*ಎರಡನೇ ಮದುವೆಯಾಗಲು ಸಮ್ಮತಿ ಸೂಚಿಸಲಿಲ್ಲ ಎಂದು ಸಕಲೇಶಪುರ ತಾಲ್ಲೂಕಿನ

ಯಡುವರಹಳ್ಳಿಯಲ್ಲಿ ತಾಯಿ ಕೈಯನ್ನೇ ಕತ್ತರಿಸಿದ ಮಗ ಪ್ರದೀಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT