ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ಜಲಾಶಯ ಭರ್ತಿಗೆ 3 ಅಡಿ ಬಾಕಿ: 29 ಸಾವಿರ ಕ್ಯುಸೆಕ್‌ ನೀರು ನದಿಗೆ

ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ನೀರಿನ ನಿರೀಕ್ಷೆ
Last Updated 11 ಜುಲೈ 2022, 3:16 IST
ಅಕ್ಷರ ಗಾತ್ರ

ಹಾಸನ: ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಯಗಚಿ, ವಾಟೆಹೊಳೆ ಭರ್ತಿಯಾಗಿದ್ದರೆ, ಹೇಮಾವತಿ ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿ ಬಾಕಿ ಇದೆ.

ಮುಂಗಾರು ಮಳೆ ಆರಂಭ ವಾಗಿದ್ದು, ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಧಾರಾಕಾರ ಮಳೆ ಬೀಳುತ್ತಿದೆ. ಇದರಿಂದಾಗಿ ಹೇಮಾವತಿ ನದಿಯ ಒಳಹರಿವು ಹೆಚ್ಚಾಗಿದೆ. ಸುಮಾರು 24,509 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ.

ಹೇಮೆ ಒಡಲು ತುಂಬಲು 4 ಅಡಿ ಬಾಕಿ ಇರುವಾಗಲೇ 29 ಸಾವಿರ ಕ್ಯುಸೆಕ್ ನೀರನ್ನು ಭಾನುವಾರ ಸಂಜೆಯಿಂದಲೇ ಹೊರಬಿಡಲಾಗಿದೆ. 2,922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ 2,919.27 ಅಡಿ ನೀರು ಸಂಗ್ರಹವಾಗಿದೆ. 37.103 ಟಿಎಂಸಿ ಅಡಿ ನೀರು‌ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 34.493 ಟಿಎಂಸಿ ಅಡಿ ನೀರು ಸಂಗ್ರಹವಿದೆ.

ವಾರದ ಅಂತರದಲ್ಲಿ ಹೇಮಾವತಿ ಜಲಾಶಯದಲ್ಲಿ ಸುಮಾರು 14 ಅಡಿಯಷ್ಟು ನೀರು ಏರಿಕೆಯಾಗಿದ್ದು, 10 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಮಳೆ ಮುಂದುವರಿದಿರುವುದರಿಂದ ಒಳಹರಿವು ಮತ್ತಷ್ಟು ಹೆಚ್ಚಾಗಲಿದ್ದು, ಹೊರ ಹರಿವಿನ ಪ್ರಮಾಣವನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ಜಿಲ್ಲೆಯ ಜೀವನ ನದಿ ಈ ಬಾರಿಯೂ ಅವಧಿಗೂ ಮುನ್ನವೇ ಭರ್ತಿಯಾಗುವ ಆಶಾಭಾವ ಮೂಡಿಸಿದೆ.

ಹೇಮೆಯ ಒಡಲು ತುಂಬಿರುವುದ ರಿಂದ ಅಚ್ಚುಕಟ್ಟು ಭಾಗದ ರೈತರು ಬೆಳೆ ಬೆಳೆಯಲು ನೀರು ಸಿಗಲಿದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಯ 6.55 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರನ್ನು ಹೇಮಾವತಿ ಜಲಾಶಯದಿಂದ ಪೂರೈಸಲಾಗುತ್ತದೆ.

‘35 ಟಿಎಂಸಿ ಅಡಿಗೂ ಹೆಚ್ಚು ನೀರು ಸಂಗ್ರಹವಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಲ್ಲಿ ನೀರು ಹರಿಸಲಾಗುತ್ತದೆ. ಈಗಾಗಲೇ ಜಲಾಶಯದ ಭದ್ರತಾ ದೃಷ್ಟಿಯಿಂದ ಸ್ವಲ್ಪ ಪ್ರಮಾಣದ ನೀರನ್ನು ನಾಲೆ‌ ಹಾಗೂ 29 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ’ ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಂಜಿನಿಯರ್ ತಿಳಿಸಿದ್ದಾರೆ.

ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಡುವ ಸಂದರ್ಭದಲ್ಲಿ ನೂರಾರು ಜನರು ಈ ಕ್ಷಣವನ್ನು ಆನಂದಿಸಿದರು. ಕೇಕೇ ಹಾಕಿ, ಕುಣಿದು ಕುಪ್ಪಳಿಸಿದ ಜನರು, ಕ್ರಸ್ಟ್‌ ಗೇಟ್‌ಗಳ ಮೂಲಕ ಹರಿದು ಬಂದ ಹೇಮೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.

ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದಿಂದ ಭಾನುವಾರ ಸಂಜೆ 360 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯಕ್ಕೆ 787 ಕ್ಯುಸೆಕ್‌ ಒಳಹರಿವಿದೆ.

ಜಿಲ್ಲೆಗೆ ₹ 2 ಕೋಟಿ ಬಿಡುಗಡೆ

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಮನೆ, ಬೆಳೆ, ಜಾನುವಾರು ಹಾನಿಗೆ ಪರಿಹಾರ ಒದಗಿಸಲು ಹಾಗೂ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಹಾಸನ ಜಿಲ್ಲೆಗೆ ₹ 2 ಕೋಟಿ ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, 10 ಕ್ಕೂ ಹೆಚ್ಚು ಮನೆಗಳು ಪೂರ್ಣ ಹಾನಿಯಾಗಿವೆ. ಸಕಲೇಶಪುರ ತಾಲ್ಲೂಕಿನಲ್ಲಿಯೇ ರಸ್ತೆ, ಮನೆ, ಸೇತುವೆ ಸೇರಿದಂತೆ ₹ 25 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT