ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಗಚಿ ಏತ ನೀರಾವರಿ ಯೋಜನೆಯಿಂದ 4 ಕೆರೆ ವಂಚಿತ

ಯಗಚಿ ಏತ ನೀರಾವರಿ ಜಾಕ್‌ವೆಲ್ ಮೋಟಾರ್ ಸ್ಥಗಿತ: ರೈತರ ಮಹದಾಸೆಗೆ ಕಲ್ಲು
Last Updated 15 ಡಿಸೆಂಬರ್ 2020, 7:55 IST
ಅಕ್ಷರ ಗಾತ್ರ

ಹಳೇಬೀಡು: ಯಗಚಿ ಏತ ನೀರಾವರಿ ಯೋಜನೆಯ ಜಾಕ್‌ವೆಲ್ ಮೋಟಾರ್ ಸ್ಥಗಿತಗೊಳಿಸಿರುವುದರಿಂದ 5 ಕೆರೆಗಳು ನೀರಾವರಿಯಿಂದ ವಂಚಿತವಾಗಿವೆ.

ನಾಲೆಯಲ್ಲಿ 15 ದಿನದಿಂದ ನೀರು ಹರಿಯುವುದು ನಿಂತಿರುವುದರಿಂದ ಕೆರೆಗಳಿಗೆ ನೀರು ಹರಿಯುತ್ತದೆಯೇ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಅಡಗೂರು ಹಾಗೂ ಗೋಣಿಸೋಮನಹಳ್ಳಿ ಭಾಗದ ರೈತರು ನೀರಿಗಾಗಿ ಪರಿತಪಿಸುವಂತಾಗಿದ್ದು ರೈತರ ಮಹಾದಾಸೆಗೆ ಕಲ್ಲು ಹಾಕಿದಂತಾಗಿದೆ.

ಅಡಗೂರು, ಗೋಣಿಸೋಮನ ಹಳ್ಳಿ, ಘಟ್ಟದಹಳ್ಳಿ ದಾಸಗೊಡ್ನಹಳ್ಳಿ, ದ್ಯಾವಪ್ಪನಹಳ್ಳಿ ಕೆರೆಗಳಿಗೆ ಯಗಚಿ ಅಣೆಕಟ್ಟೆಯ ನೀರು ಹರಿಯಬೇಕಾಗಿದೆ. ಈ ಭಾಗದಲ್ಲಿ ಮಳೆ ತೀರಾ ಕಡಿಮೆ ಬಿದ್ದಿರುವುದರಿಂದ ಕೆರೆಗಳಲ್ಲಿವೊಂದು ಹನಿಯೂ ನೀರು ಸಹ ಇಲ್ಲದಂತಾಗಿದೆ.

‘ಹಳೇಬೀಡಿನ ದ್ವಾರಸಮುದ್ರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಬಾಗಿನ ಅರ್ಪಿಸಿದಾಗ ಯಗಚಿ ಏತ ನೀರಾವರಿ ಯೋಜನೆಗೆ ಒಳಪಟ್ಟ ಎಲ್ಲ ಕೆರೆಗಳಿಗೂ ಅರ್ಧದಷ್ಟು ನೀರು ತುಂಬಿಸುವುದಾಗಿ ಭರವಸೆ ನೀಡಿದ್ದರು. ಕ್ಯಾತನಕೆರೆ ಗ್ರಾಮದ ಕೆರೆ ಮುಖಾಂತರ ಗೋಣಿಸೋಮನಹಳ್ಳಿ ಕೆರೆಗೆ ನೀರು ಹರಿಸಲು ಕೋಡಿಹಳ್ಳಿ ಗ್ರಾಮದಲ್ಲಿ ರೈತರ ಮನವೊಲಿಸಿ ಜಮೀನುಗಳಲ್ಲಿ ತಾತ್ಕಾಲಿಕ ನಾಲೆ ನಿರ್ಮಿಸಿದಾಗ ಶಾಸಕ ಕೆ.ಎಸ್.ಲಿಂಗೇಶ್ ಸಹ ಕೆರೆಗಳಿಗೆ ಅರ್ಧದಷ್ಟು ನೀರು ತುಂಬಿಸಲಾಗುವುದು ಎಂದು ತಿಳಿಸಿದ್ದರು. ಎಂಜಿನಿಯರ್‌ಗಳು ನಿರ್ಲಿಪ್ತರಾಗಿರುವುದರಿಂದ ಈ ವರ್ಷ ಕೆರೆಗಳಿಗೆ ನೀರು ಬರುವುದು ಅನುಮಾನವಾಗಿದೆ’ ಎಂದು ಅಡಗೂರು ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಅಡಗೂರು ಕೆರೆಯಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿ ನೀರಿದೆ. ಕೆರೆಗೆ ಅರ್ಧದಷ್ಟು ನೀರು ಬಾರದೆ ಇದ್ದರೆ ಬೇಸಿಗೆಯಲ್ಲಿ ದನ, ಕರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಅಂತರ್ಜಲ ಬತ್ತಿಹೋಗಿ ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆ ಆಗುವ ಸಾಧ್ಯತೆ ಇದೆ. ಎಂಜಿನಿಯರ್‌ಗಳು ತಕ್ಷಣ ಜಾಕ್‌ವೆಲ್‌ನಿಂದ ಕೆರೆಗಳಿಗೆ ನೀರು ಹರಿಸಬೇಕು’ ಎಂದು ನೀರಾವರಿ ಹೋರಾಟಗಾರ ವಿಜಯ್‌ಕುಮಾರ್ ಮುತ್ತಯ್ಯ ಒತ್ತಾಯಿಸಿದ್ದಾರೆ.

‘ಜಾಕ್‌ವೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡದ್ದರಿಂದ ಮೋಟಾರ್ ಚಾಲನೆ ಮಾಡುವವರೇ ಇಲ್ಲದಂತಾಗಿದೆ. ಜಾಕವೆಲ್‌ನಲ್ಲಿ ಕೆಲಸ ಮಾಡುವವರಿಗೆ ಕಾವೇರಿ ನೀರಾವರಿ ನಿಗಮದವರು ಒಂದು ವರ್ಷದಿಂದ ವೇತನ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಬೆಳವಣಿಗೆಯಿಂದ ಕೆರೆಗಳಿಗೆ ನೀರು ತಲುಪಿಲ್ಲ. ರೈತರು ಜಾನುವಾರುಗಳಿಗೆ ನೀರು ಕುಡಿಸಲು ಪರದಾಡುವಂತಾಗಿದೆ’ ಎಂದು ರೈತಮುಖಂಡ ಪದ್ಮಪ್ರಭು ಆರೋಪಿಸಿದ್ದಾರೆ.

‘ಕಳೆದ ವಾರ ಮಲೆನಾಡು ಭಾಗದಲ್ಲಿ ಮಳೆ ಬಿದ್ದಿದ್ದರಿಂದ ಯಗಚಿ ಅಣೆಕಟ್ಟೆಯಲ್ಲಿ ಒಂದು ಅಡಿ ನೀರು ಏರಿಕೆಯಾಗಿದೆ. ಹೀಗಾಗಿ ತರಕಾರಿ, ದಿನಸಿ ಸೇರಿದಂತೆ ಹೆಚ್ಚು ಆಹಾರ ಬೆಳೆಯುವ ಹಳೇಬೀಡು, ಮಾದಿಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿದರೆ ಬಯಲು ಸೀಮೆಯ ರೈತರ ಬದುಕು ಹಸನಾಗುತ್ತದೆ’ ಎಂದು ಅವರು ಹೇಳಿದರು.

ಎಂಜಿನಿಯರ್‌ಗಳ ವಿಭಿನ್ನ ಹೇಳಿಕೆ: ಅಸಮಾಧಾನ

‘ಕಾರ್ಯಪಾಲಕ ಎಂಜಿನಿಯರ್ ತಿಮ್ಮೇಗೌಡ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ನೀರನ್ನು ನಿಲ್ಲಿಸಿಲ್ಲ, ನಾಲೆಯಲ್ಲಿ ನೀರು ಹರಿಯುತ್ತಿದೆ ಎಂದು ಹೇಳಿದರು. ಸಹಾಯಕ ಎಂಜಿನಿಯರ್ ಬಾಲಕೃಷ್ಣ ಅವರು ಡಿಪಿಆರ್ ಪ್ರಕಾರ ನೀರು ಬಿಡುವ 70 ದಿನದ ಗಡುವು ಮುಗಿದಿದೆ ಎಂದು ಹೇಳಿದರು. ಮಂತ್ರಿಗಳು ಹಾಗೂ ಶಾಸಕರು ಅರ್ಧದಷ್ಟು ಕೆರೆ ತುಂಬಿಸುವುದಾಗಿ ಹೇಳಿದ್ದಾರೆ. ಎಂಜಿನಿಯರ್‌ಗಳು ವಿಭಿನ್ನ ಹೇಳಿಕೆ ಕೊಡುತ್ತಿದ್ದಾರೆ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

***

ಶೀಘ್ರವೇ ಜಾಕವೆಲ್ ಕೆಲಸಗಾರರಿಗೆ ವೇತನ ನೀಡಬೇಕು. ಜಾಕವೆಲ್‌ನ ಮೂರು ಮೋಟಾರ್‌ಗಳು ಸುಲಲಿತವಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಮಾದಿಹಳ್ಳಿ, ಹಳೇಬೀಡು ಹೋಬಳಿಯ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು. ರೈತರು ಬೀದಿಗೆ ಬಂದು ಹೋರಾಟ ಮಾಡಲು ಅವಕಾಶ ಕಲ್ಪಿಸಬಾರದು.

- ಜಿ.ವಿ.ಪ್ರಸನ್ನ, ಗ್ರಾ.ಪಂ. ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT