ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕ್ರೀಡಾಪಟುಗಳ ಉಪಯೋಗಕ್ಕೆ ಬಾರದ ಕ್ರೀಡಾಂಗಣ

ಸಮರ್ಪಕ ಟ್ರ್ಯಾಕ್‌, ನಿರ್ವಹಣೆ ಇಲ್ಲ: ಮೂಲಸೌಕರ್ಯಗಳ ಕೊರತೆ: ಕ್ರೀಡಾ ಚಟುವಟಿಕೆಗೆ ಹಿನ್ನಡೆ
Last Updated 22 ಆಗಸ್ಟ್ 2022, 2:38 IST
ಅಕ್ಷರ ಗಾತ್ರ

ಹಾಸನ: ಕೋವಿಡ್–19 ನಿರ್ಬಂಧ ಗಳು ಇದೀಗ ತೆರವಾಗಿದ್ದು, ಈ ವರ್ಷದಿಂದ ಕ್ರೀಡಾಕೂಟಗಳು ಎಲ್ಲೆಡೆ ಶುರುವಾಗುತ್ತಿವೆ. ದಸರಾ ಕ್ರೀಡಾಕೂಟ ಗಳಿಗೆ ವೇದಿಕೆ ಸಿದ್ಧವಾಗಿದೆ. ಜಿಲ್ಲೆಯ ಹಲವೆಡೆ ಕ್ರೀಡಾಂಗಣಗಳಿದ್ದರೂ, ಸೌಕರ್ಯಗಳಿಗಾಗಿ ಕಾಯುತ್ತಿವೆ.

ಜಿಲ್ಲಾ ಕೇಂದ್ರವಾದ ಹಾಸನ ನಗರದ ಹೃದಯ ಭಾಗದಲ್ಲಿ ಸುಸಜ್ಜಿತ ಕ್ರೀಡಾಂಗಣವಿದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳಿದ್ದು, ಕ್ರೀಡಾ ಚಟುವಟಿಕೆಗೆ ಪೂರಕವಾಗಿದೆ. ಆದರೆ, ನಿರ್ವಹಣೆಯ ಕೊರತೆ ಎದುರಾಗಿದೆ. ಮಳೆ ಬಂದರಂತೂ ಕ್ರೀಡಾಂಗಣವು ಕೆಸರು ಗದ್ದೆಯಂತಾಗುತ್ತದೆ.

ಪ್ರತಿ ವರ್ಷದ ಧ್ವಜಾರೋಹಣ, ಕ್ರೀಡಾಕೂಟಗಳನ್ನು ಇಲ್ಲಿಯೇ ನಡೆಸಲಾಗುತ್ತಿದೆ. ಇದೀಗ ಈ ಕ್ರೀಡಾಂಗಣದಲ್ಲಿ ಅಗ್ನಿಪಥ ನೇಮಕಾತಿ ರ‍್ಯಾಲಿಯೂ ನಡೆಯುತ್ತಿದೆ. ಆದರೆ, ಮಳೆ ಬಂದಿದ್ದರಿಂದ ಕ್ರೀಡಾಂಗಣದ ಹೊರ ಆವರಣದಲ್ಲಿ ಹೆಜ್ಜೆ ಇಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅರಸೀಕೆರೆ ಪಟ್ಟಣದ ಯಾದಾಪುರ ರಸ್ತೆಯಲ್ಲಿ ಜೇನುಕಲ್ಲು ಕ್ರೀಡಾಂಗಣವಿದ್ದು, ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ನಿತ್ಯ ಹಲವು ಆಟೋಟಗಳಲ್ಲಿ ತೊಡಗಿಕೊಂಡರೆ, ಬೆಳಗಿನ ವಾಯು ವಿಹಾರಕ್ಕೆ ನೂರಾರು ಜನರು ಬರುತ್ತಾರೆ.

ನಗರಸಭೆಯಿಂದ ಕ್ರೀಡಾಂಗಣ ವನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಿದ್ದರೂ, ಮಳೆಗಾಲದಲ್ಲಿ ಕ್ರೀಡಾಂಗಣದಲ್ಲಿ ಮಳೆ ನೀರು ಸಂಗ್ರಹವಾಗಿ ಕೆರೆಯಂತಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾತ್ರಿ ವೇಳೆ ಕೆಲವು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಇದರ ಬಗ್ಗೆ ನಗರಸಭೆ ಇನ್ನೂ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ.

‘ರಾತ್ರಿ ವೇಳೆ ಕೆಲವರು ಮದ್ಯಪಾನ ಮಾಡಿ ಬಾಟಲಿಗಳನ್ನು ಕ್ರೀಡಾಂಗಣದಲ್ಲಿ ಎಸೆದು ಹೋಗುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತಿದೆ. ಶೀಘ್ರವೇ ಈ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾಗುವುದು’ ಎಂದು ಪೌರಾಯುಕ್ತ ಬಸವರಾಜ್ ಕಾಕಪ್ಪ ಶಿಗ್ಗಾವಿ ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದ ಶಾಲಾ ಕ್ರೀಡಾಕೂಟಗಳು ಮಾತ್ರವಲ್ಲದೆ, ದಸರಾ ಹಾಗೂ ಗ್ರಾಮೀಣ ಕ್ರೀಡಾಕೂಟ ಹಳೇಬೀಡು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತವೆ. ಮಹಿಳಾ ಹಾಗೂ ಪುರುಷರ ರಾಷ್ಟ್ರೀಯ ವಾಲಿಬಾಲ್ ಪಟುಗಳಿಗೆ 6 ತಿಂಗಳ ಹಿಂದೆ ತರಬೇತಿ ಸಹ ನಡೆಯಿತು. ಮೈದಾನ ತಗ್ಗು ದಿಣ್ಣೆಯಿಂದ ಕೂಡಿದೆ.

ಕ್ರೀಡಾಕೂಟ ನಡೆಸುವುದಕ್ಕೆ ಹಾಗೂ ಪ್ರತಿನಿತ್ಯ ಕ್ರೀಡಾಪಟುಗಳು ಅಭ್ಯಾಸ ಮಾಡುವುದಕ್ಕಾಗಿ ಕ್ರೀಡಾಂಗಣ ಸಮತಟ್ಟು ಆಗಬೇಕಾಗಿದೆ. 8 ವರ್ಷದ ಹಿಂದೆ ನರೇಗಾ ಯೋಜನೆಯಡಿ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಸಂಬಂಧ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಈವರೆಗೂ ಕಾಮಗಾರಿ ನಡೆದಿಲ್ಲ.

ಹಿರೀಸಾವೆ ಹೋಬಳಿ ಕೇಂದ್ರದಲ್ಲಿ 10 ವರ್ಷಗಳ ಹಿಂದೆ ಕ್ರೀಡಾಂಗಣ ನಿರ್ಮಾಣಕ್ಕೆ 2 ಎಕರೆ ಸರ್ಕಾರಿ ಜಾಗ ಗುರುತಿಸಿ, ಮಾಜಿ ಶಾಸಕ ಎನ್. ಗಂಗಾಧರ್ ಕ್ರೀಡಾಂಗಣ ಎಂದು ಉದ್ಘಾಟನೆ ಮಾಡಲಾಯಿತು. ಆದರೆ ಇದುವರೆಗೆ ಮೂಲಸೌಲಭ್ಯ ಕಲ್ಪಿಸಿಲ್ಲ.

ಪ್ರತಿ ವರ್ಷ ಇಲ್ಲಿ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ನಡೆಯುತ್ತದೆ. ಈ ವರ್ಷದ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಶಾಸಕರು ₹10 ಲಕ್ಷ ಅನುದಾನ ನೀಡುವುದಾಗಿ ಹೇಳಿದ್ದಾರೆ.

ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಕೆ.ಪಿ.ಎಸ್. ಶಾಲೆಗೆ ಕ್ರೀಡಾಂಗಣದ ವ್ಯವಸ್ಥೆಯಿಲ್ಲ. ಕ್ರೀಡಾಂಗಣ ನಿರ್ಮಿಸಲು ಸೂಕ್ತ ಜಾಗವೂ ಇದೆ. ಆದರೆ, ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹೋಬಳಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗವಿಲ್ಲ. ಇದು ಮಕ್ಕಳ ಕ್ರೀಡಾ ಮನೋಭಾವವನ್ನು ಕುಗ್ಗಿಸುವಂತಾಗಿದೆ.

ಬೇಲೂರಿನ ಗೆಂಡೇಹಳ್ಳಿ ರಸ್ತೆಯಲ್ಲಿರುವ ಕ್ರೀಡಾಂಗಣ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಕ್ರೀಡೆಗೆ ಉಪಯೋಗವಾಗದೆ ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲೇ ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತಿದೆ.

ಕೋಟ್ಯಂತರ ಹಣ ಖರ್ಚು ಮಾಡಿ, ಕ್ರೀಡಾಂಗಣ ನಿರ್ಮಿಸಲಾಗಿದೆ. ಅದಕ್ಕೆ ಬೇಕಾದ ಸವಲತ್ತುಗಳನ್ನು ನೀಡಲು ಜನ
ಪ್ರತಿನಿಧಿಗಳು ವಿಫಲರಾಗಿದ್ದಾರೆ. ಮಳೆ
ಗಾಲದಲ್ಲಿ ಕ್ರೀಡಾಂಗಣ ಕೆಸರುಮಯ
ವಾಗಿರುತ್ತದೆ. ಮೂಲ ಸೌಲಭ್ಯ ನೀಡಿ ಕ್ರೀಡಾಸಕ್ತರಿಗೆ ಅನುಕೂಲ ಮಾಡಿಕೊಡ
ಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಉಪಾಧ್ಯಕ್ಷ ಅಕ್ಕಿರಾಜು ಒತ್ತಾಯಿಸಿದ್ದಾರೆ.

ಆಲೂರು ತಾಲ್ಲೂಕಿನಲ್ಲಿರುವ ಮಿನಿ ಕ್ರೀಡಾಂಗಣ ಸೂಕ್ತ ನಿರ್ವಹಣೆಯಿಲ್ಲದೆ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದ್ದು, ಕ್ರೀಡಾಪಟುಗಳು ದೈಹಿಕ ಚಟುವಟಿಕೆಯಿಂದ ವಂಚಿತರಾಗುತ್ತಿದ್ದಾರೆ.

11 ವರ್ಷಗಳ ಹಿಂದೆ ₹75 ಲಕ್ಷ ವೆಚ್ಚದಲ್ಲಿ 200 ಮೀಟರ್‌ ಓಟದ ಮಿನಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಟ್ರ್ಯಾಕ್‌, ಶೌಚಾಲಯ, ಡ್ರೆಸ್ಸಿಂಗ್ ಕೊಠಡಿ ಸೇರಿದಂತೆ ಕ್ರೀಡಾಪಟುಗಳಿಗೆ ಬೇಕಾಗುವ ಸೌಲಭ್ಯ ಕಲ್ಪಿಸಲಾಗಿತ್ತು. ಕ್ರೀಡಾಂಗಣದ ಸಮೀಪದಲ್ಲಿ ಈಜುಕೊಳ ನಿರ್ಮಾಣಕ್ಕೆ ಅವಕಾಶವಿದ್ದರೂ ನಿರ್ಮಾಣವಾಗಿಲ್ಲ.

ಮಳೆಯಾದರೆ ಕ್ರೀಡಾಂಗಣದಲ್ಲಿ ನೀರು ನಿಲ್ಲುತ್ತದೆ. ನೀರಿನ ಸಮಸ್ಯೆ ಇದ್ದು, ಕ್ರೀಡೆಗಳು ನಡೆಯುವ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಟ್ಯಾಂಕರ್ ಮೂಲಕ ನೀರು ಬಳಸಲಾಗುತ್ತಿದೆ. ಶೌಚಾಲಯಗಳಿದ್ದರೂ ಬಳಕೆಗೆ ಇಲ್ಲವಾಗಿವೆ. ಹೈಮಾಸ್ಟ್ ದೀಪ ಅಳವಡಿಸಿದ್ದರೂ, ವಿದ್ಯುತ್ ಸಂಪರ್ಕ ಪಡೆದಿಲ್ಲ. ಕ್ರೀಡಾಂಗಣದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುವುದರಿಂದ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದೆ.

ಚನ್ನರಾಯಪಟ್ಟಣದ ತಾಲ್ಲೂಕು ಕ್ರೀಡಾಂಗಣ 1999ರಲ್ಲಿ ಉದ್ಘಾಟನೆ ಯಾಯಿತು. ಮುಖ್ಯ ದ್ವಾರದಲ್ಲಿ ಪೆವಿಲಿಯನ್ ನಿರ್ಮಿಸಲಾಗಿದೆ. ಪ್ರತಿ ವರ್ಷ ಶಾಲೆಗಳ ಕ್ರೀಡಾಕೂಟ ಜರುಗುತ್ತದೆ. ಕ್ರೀಡಾಂಗಣದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಕುಡಿಯಲು ಕ್ಯಾನ್‌ ನೀರು ತರಿಸಲಾಗುತ್ತದೆ. ಪುರಸಭೆಯ ಟ್ಯಾಂಕರ್‌ನಿಂದ ನೀರು ಒದಗಿಸಲಾಗುತ್ತಿದೆ. ಶೌಚಾಲಯದ ವ್ಯವಸ್ಥೆ ಇಲ್ಲ. ಕ್ರೀಡಾಂಗಣದ ಸುತ್ತ ಪೆವಿಲಿಯನ್ ನಿರ್ಮಿಸಬೇಕು. ತಂತಿ ಬೇಲಿ ಅಳವಡಿಸಬೇಕು ಎನ್ನುತ್ತಾರೆ ಕ್ರೀಡಾಪಟುಗಳು.

‘ಸಭೆ, ಸಮಾರಂಭಗಳಿಗೆ ಮೀಸಲು’

ಅರಕಲಗೂಡು ಪಟ್ಟಣದ ಹೃದಯ ಭಾಗದಲ್ಲಿದ್ದ ದೊಡ್ಡಕೆರೆಯ ಅರ್ಧ ಭಾಗವನ್ನು ಮುಚ್ಚಿ 4 ಎಕರೆ ಪ್ರದೇಶದಲ್ಲಿ 2006ರಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಹರಿದು ಹೋಗದೆ ಕ್ರೀಡಾಂಗಣದಲ್ಲೇ ನಿಂತು ಕೆರೆಯಾಗಿ ಮಾರ್ಪಡುತ್ತಿದೆ. ಇಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಜಾತ್ರಾ ಕಾರ್ಯಕ್ರಮಗಳಿಗೆ ಮೀಸಲಾಗಿದೆ.

ಕೆಲವು ಕ್ರೀಡಾಸಕ್ತ ಸಂಘ ಸಂಸ್ಥೆಗಳು ಕ್ರೀಡೆಗೆ ಅಗತ್ಯವಾದ ಪಿಚ್, ಟ್ರ್ಯಾಕ್, ನೆಟ್‌ಗಳನ್ನು ನಿರ್ಮಿಸಿಕೊಂಡು ಕ್ರೀಡಾ ಅಭ್ಯಾಸ ನಡೆಸುತ್ತಿವೆ. ಸಭೆ ಸಮಾರಂಭಗಳಿಗೆ ಬಾಡಿಗೆ ಪಡೆಯುವವರು ಇದನ್ನು ಹಾಳುಗೆಡಹುತ್ತಿದ್ದಾರೆ. ಇದರಿಂದ ಕ್ರೀಡಾಪಟುಗಳು ಸಂಕಟ ಅನುಭವಿಸುವಂತಾಗಿದೆ. ಕ್ರೀಡಾ ಪ್ರತಿಭೆಗಳಿದ್ದರೂ ಕ್ರೀಡಾಂಗಣದ ಉಪಯೋಗ ದೊರಕದೆ ಪ್ರತಿಭೆಗಳು ಕಮರಿ ಹೋಗುತ್ತಿವೆ.

‘₹1.25 ಕೋಟಿ ವೆಚ್ಚ’

‘ಎಸ್‍ಇಎಫ್‌ಸಿ ಯೋಜನೆಯಡಿ ₹1.25 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದಲ್ಲಿ ಎರಡು ಹೈಟೆಕ್ ಶೌಚಾಲಯ ನಿರ್ಮಾಣ, ಕುಡಿಯುವ ನೀರು, ತಂತಿ ಬೇಲಿ ಅಳವಡಿಕೆ, ಟ್ರ್ಯಾಕ್ ನಿರ್ಮಿಸಲಾಗುವುದು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಯಾರು ಏನಂತಾರೆ?

‘ಮಿನಿ ಕ್ರೀಡಾಂಗಣ ನಿರ್ಮಿಸಿ’

ಹಳೇಬೀಡು ಭಾಗದಲ್ಲಿ ಕ್ರೀಡಾಸಕ್ತರ ಸಂಖ್ಯೆ ಹೆಚ್ಚುತ್ತಿದೆ. ಕೆಪಿಎಸ್ ಶಾಲೆಯ ಮೈದಾನ ಅಭಿವೃದ್ಧಿ ಪಡಿಸಬೇಕು. ಹಳೇಬೀಡಿನಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಬೇಕು.

–ನಿಖಿತ್ ಎಚ್.ಎಚ್, ಕ್ರೀಡಾಪಟು, ಹಳೇಬೀಡು

‘ನರೇಗಾದಡಿ ಅಭಿವೃದ್ಧಿ’

ಹಳೇಬೀಡು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನವನ್ನು ಅಭಿವೃದ್ಧಿ ಪಡಿಸಲು ನರೇಗಾ ಯೋಜನೆಯಿಂದ ₹21 ಲಕ್ಷ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ.

–ಸಿ.ಕೆ.ಹರೀಶ್, ಯುವ ಸಬಲೀಕರಣ ಕ್ರೀಡಾ ಅಧಿಕಾರಿ

‘ಶೀಘ್ರ ಮೂಲಸೌಕರ್ಯ’

ಕ್ರೀಡಾಂಗಣದ ಸುತ್ತ ಚರಂಡಿ, ಆಟದ ಅಂಕಣಗಳು, 200 ಮೀಟರ್ ಟ್ರ್ಯಾಕ್ ಸೇರಿದಂತೆ ಕ್ರೀಡೆಗಳಿಗೆ ಬೇಕಾದ ಸೌಕರ್ ಕಲ್ಪಿಸಲಾಗುವುದು.

–ಸುನೀತಾ ಬೋರೇಗೌಡ, ಗ್ರಾ.ಪಂ ಅಧ್ಯಕ್ಷೆ, ಹಿರೀಸಾವೆ

‘ಮೂಲಸೌಲಭ್ಯ ಒದಗಿಸಿ’

ಹಿರೀಸಾವೆ ಕ್ರೀಡಾಂಗಣದಲ್ಲಿ ಮೂಲಸೌಲಭ್ಯ ಕಲ್ಪಿಸಿದರೆ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಹಾಗೂ ತರಬೇತಿ ನೀಡಲು ಸಹಕಾರಿಯಾಗುತ್ತದೆ.

–ದೇವರಾಜು, ದೈಹಿಕ ಶಿಕ್ಷಣ ಶಿಕ್ಷಕ, ಹಿರೀಸಾವೆ

‘ಕ್ರೀಡಾ ಸಾಮಗ್ರಿ ಇಲ್ಲ’

ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕಡೆ ಶಿಕ್ಷಣ ಸಿಗುತ್ತಿದ್ದು, ಮಕ್ಕಳ ಆಟೋಟಗಳಿಗೆ ಕ್ರೀಡಾ ಕಲಿಕಾ ಸಾಮಗ್ರಿಗಳು ಇಲ್ಲ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ.

–ರಾಕೇಶ್, ನುಗ್ಗೇಹಳ್ಳಿ ನಿವಾಸಿ

‘ಕ್ರೀಡಾಪಟುಗಳಿಗೆ ನೆರವು ಕೊಡಿ’

ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕ್ರೀಡಾಪಟುಗಳಿಗೆ ನೆರವು ಕಲ್ಪಿಸಬೇಕು.

–ಎನ್.ರವಿಕುಮಾರ್,

ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ, ಅರಕಲಗೂಡು

‘ಹೆಸರಿಗಷ್ಟೇ ಕ್ರೀಡಾಂಗಣ’

ಪಟ್ಟಣದಲ್ಲಿ ಹೆಸರಿಗಷ್ಟೆ ಕ್ರೀಡಾಂಗಣವಿದ್ದು, ಕ್ರೀಡಾ ಚಟುವಟಿಕೆಗಳಿಗೆ ಉಪಯೋಗಕ್ಕೆ ಬಾರದಂತಾಗಿದೆ. ಸಂಬಂಧಿಸಿದ ಇಲಾಖೆ ಕ್ರೀಡಾಂಗಣದ ಅಭಿವೃದ್ಧಿಗೆ ಗಮನ ಹರಿಸಬೇಕು.

–ಶಂಕರಯ್ಯ, ವಕೀಲ, ಅರಕಲಗೂಡು

‘400 ಮೀ. ಟ್ರ್ಯಾಕ್‌ ನಿರ್ಮಿಸಿ’

ಆಲೂರು ಕ್ರೀಡಾಂಗಣದಲ್ಲಿ 400 ಮೀಟರ್ ಟ್ರ್ಯಾಕ್‌ ನಿರ್ಮಿಸಬೇಕು. ನೀರು, ದೀಪ ಇತರೆ ಸೌಲಭ್ಯ ಕಲ್ಪಿಸಬೇಕು.

–ಎಚ್.ವಿ. ರಾಘವೇಂದ್ರ, ಕ್ರೀಡಾಪಟು, ಆಲೂರು

‘ಶೌಚಾಲಯವಿಲ್ಲ’

ಆಲೂರು ಕ್ರೀಡಾಂಗಣದಲ್ಲಿ ಕಲ್ಲು, ಮಣ್ಣು ಇರುವುದರಿಂದ ಓಡಲು ಸಾಧ್ಯವಾಗುತ್ತಿಲ್ಲ. ಯಾವುದೇ ಟ್ರ್ಯಾಕ್‍ಗಳು ಇಲ್ಲ. ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಿಸಬೇಕು.

–ದೀಪಿಕಾ, ಎಸ್.ವಿ. ಪಬ್ಲಿಕ್ ಸ್ಕೂಲ್ ಕ್ರೀಡಾಪಟು, ಆಲೂರು

****

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ರಂಗನಾಥ್‌ ಜೆ.ಎನ್‌, ಎಚ್‌.ಎಸ್‌. ಅನಿಲ್‌ಕುಮಾರ್‌, ಹಿ.ಕೃ. ಚಂದ್ರು, ಮಲ್ಲೇಶ್‌, ಜಿ.ಚಂದ್ರಶೇಖರ್‌, ಪ್ರದೀಪ್‌ಕುಮಾರ್‌, ಎಂ.ಪಿ. ಹರೀಶ್, ಸಿದ್ದರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT