ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕೊಟ್ಟಿದ್ದರೆ ಜೋಳಿಗೆ ತುಂಬಿಸುತ್ತಿದ್ದೆವು

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅಭಿಮತ
Last Updated 9 ಮೇ 2018, 11:02 IST
ಅಕ್ಷರ ಗಾತ್ರ

ಬನ್ನೂರು: ‘ಇಂದಿರಾ ಕ್ಯಾಂಟಿನ್‌ಗೆ ಯಾರು ಹೋಗುತ್ತಾರೆ ಸ್ವಾಮಿ, ಅಲ್ಲಿಗೆ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ... ಸಿದ್ದರಾಮಯ್ಯನವರೇ..., ನಮಗೆ ಸರಿಯಾಗಿ ನೀರಿನ ಅನುಕೂಲ ಮಾಡಿಕೊಟ್ಟಿದ್ದರೆ ನಾವೇ ನಿಮ್ಮ ಜೋಳಿಗೆಗೆ ಭತ್ತ ತುಂಬಿಸುತ್ತಿದ್ದೆವು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.

ಪಟ್ಟಣದ ಹಾಲಿನ ಡೈರಿ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ತಿ.ನರಸೀಪುರ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‌ಕುಮಾರ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

‘ದೇಶದ ಇಂದಿನ ಪರಿಸ್ಥಿತಿಯನ್ನು ಕಂಡು ಬಹಳಷ್ಟು ಮರುಕವಿದೆ. ನಾವು ಪಕ್ಕದ ತಮಿಳುನಾಡು ಜನರನ್ನು ನೋಡಿ ಸಾಕಷ್ಟು ಕಲಿಯಬೇಕಿದೆ. ಅಲ್ಲಿ ಅಣ್ಣಾ ಡಿಎಂಕೆ ಮತ್ತು ಡಿಎಂಕೆಯಂತಹ ಪ್ರಾದೇಶಿಕ ಪಕ್ಷದ ಆಡಳಿತ ಇದೆಯೇ ಹೊರತು ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ಆಡಳಿತ ಇಲ್ಲ. ಆದ್ದರಿಂದ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರುವ ಯಾವುದೇ ಸರ್ಕಾರ ತಮಿಳುನಾಡಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಾರೆ ಎಂದು ಹೇಳಿದರು.

‘ನಮ್ಮಲ್ಲೂ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚು ಬೆಂಬಲವನ್ನು ನೀಡುವ ಮೂಲಕ ರೈತರ ಪರವಾಗಿ ಕಾರ್ಯ ನಿರ್ವಹಿಸಲು ಸಿದ್ಧರಿರುವ ಎಚ್‌.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಅಶ್ವಿನ್‌ಕುಮಾರ್‌ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದ ಅವರು, ಈ ಭಾಗದಲ್ಲಿ ಅಶ್ವಿನ್‌ಕುಮಾರ್‌ ಬಗ್ಗೆ ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹರಡಿದ್ದು, ಅವುಗಳನ್ನು ನಂಬಬೇಡಿ’ ಎಂದರು.

‘ಕಾವೇರಿ ಅಣೆಕಟ್ಟು ರಾಜ್ಯದ ಜನತೆಯ ಹಣದಿಂದ ಕಟ್ಟಿದ್ದೇವೆಯೇ ಹೊರತು ತಮಿಳುನಾಡಿನ ಹಣದಿಂದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತಮಿಳುನಾಡಿನಲ್ಲಿ ಶಾಸಕರು ಸಂಸದರು ಎಲ್ಲರು ಸೇರಿ ನೀರಿಗಾಗಿ ಧರಣಿ ಮಾಡುತ್ತಾರೆ. ಆ ವ್ಯವಸ್ಥೆ ನಮ್ಮಲ್ಲಿ ಏಕೆ ಇಲ್ಲ. ಇಲ್ಲಿನ ಜಪಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲವೆ? ಎಂದು ಪ್ರಶ್ನಿಸಿದರು. ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಬಗ್ಗೆ ಮಾತನಾಡದೆ ಯಾಕೆ ಮೌನವಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇಡೀ ದೇಶದಲ್ಲಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದ ವ್ಯಕ್ತಿ ಇದ್ದರೆ ಅದು ದೇವೇಗೌಡ ಮಾತ್ರ ಎಂದು ತಿಳಿಸಿದ ಅವರು, ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಯವತಿ ಅವರಿಗೆ ಹಿಂದುಳಿದ ಜನದ ಬಗ್ಗೆ ಅಪಾರವಾದ ಕಾಳಜಿ ಇದ್ದು, ಅವರು ರಾಜ್ಯದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಅಗಬೇಕು ಎಂದು ಆಶಿಸಿ ನಮ್ಮೊಂದಿಗೆ ಕೈ ಜೋಡಿಸಿದ್ದು, ಅದನ್ನು ಲೋಕಸಭೆಯಲ್ಲೂ ಮುಂದುವರೆಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಮಂಜುನಾಥ್, ಕೃಷ್ಣೇಗೌಡ, ರಾಹುಲ್, ಚಿಕ್ಕಯ್ಯ, ಅನಂತ್, ಪಾರ್ಥಸಾರಥಿ, ವೈ.ಎಸ್‌.ರಾಮಸ್ವಾಮಿ, ಚಿಕ್ಕಜವರಪ್ಪ, ರಮೇಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT