ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ಬಾರದ ಗರ್ಭಿಣಿಯರು

ಚಂದ್ರಗ್ರಹಣಕ್ಕೆ ಹೆದರಿ ಹಿಮ್ಸ್‌ ವಾರ್ಡ್‌ ಖಾಲಿ
Last Updated 28 ಜುಲೈ 2018, 13:03 IST
ಅಕ್ಷರ ಗಾತ್ರ

ಹಾಸನ: ಅತಿ ದೀರ್ಘ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಶುಕ್ರವಾರ ರಾತ್ರಿ ಬಹುತೇಕ ಖಾಲಿ ಹೊಡೆಯುತ್ತಿತ್ತು.

ವೈದ್ಯರು ಹೆರಿಗೆಗೆ ಸೂಚಿಸುವ ದಿನಾಂಕಕ್ಕೆ ಎರಡು ದಿನ ಮುಂಚೆಯೇ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಗ್ರಹಣ ಅವಧಿಯಲ್ಲಿ ಮಕ್ಕಳು ಜನಿಸಿದರೆ ಕೇಡು ಆದೀತು ಎಂಬ ಹೆದರಿಕೆಯಿಂದ ಜಿಲ್ಲಾಸ್ಪತ್ರೆಗೆ ಗರ್ಭಿಣಿಯರನ್ನು ಕರೆತರಲಿಲ್ಲ.

ಜಿಲ್ಲಾಸ್ಪತ್ರೆಗೆ ದಿನಕ್ಕೆ 20 ರಿಂದ 30 ಮಂದಿ ಗರ್ಭಿಣಿಯರು ಬರುತ್ತಾರೆ. ಆದರೆ ಚಂದ್ರಗ್ರಹಣ ದಿನದಂದು 12 ಮಕ್ಕಳು ಜನಿಸಿವೆ. ಗ್ರಹಣದ ಅವಧಿಯಲ್ಲಿ ಒಂದೇ ಮಗು ಜನ್ಮತಾಳಿದ್ದರೆ, ಮತ್ತೊಂದು ಮಗು ತಾಯಿ ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

ಜಿಲ್ಲಾಸ್ಪತ್ರೆಗೆ ಹಾಸನ ಮಾತ್ರವಲ್ಲದೆ, ಚಿಕ್ಕಮಗಳೂರು, ಮಂಡ್ಯ, ಮಡಿಕೇರಿ ಮೊದಲಾದ ಜಿಲ್ಲೆಗಳಿಂದಲೂ ದಿನಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಕಳೆದ ಶನಿವಾರ 2 ಸಾವಿರಕ್ಕೂ ಅಧಿಕ ರೋಗಿಗಳು ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಶುಕ್ರವಾರದಿಂದ ಶನಿವಾರದವರೆಗೆ 881 ಮಂದಿ ಬಂದು ಹೋಗಿದ್ದಾರೆ. ಇದಕ್ಕೆ ಗ್ರಹಣ ಪರಿಣಾಮ ಪ್ರಮುಖ ಎಂದು ಹೇಳಲಾಗುತ್ತಿದೆ.
‘ಗ್ರಾಮೀಣ ಜನರು, ಗ್ರಹಣದ ವೇಳೆಯಲ್ಲಿ ಮಕ್ಕಳು ಜನಿಸಿದರೆ ಅಶುಭ ಎಂದು ಭ್ರಮಿಸಿ ಹೆರಿಗೆ ನೋವು ಕಾಣಿಸಿಕೊಂಡರೂ ಜಿಲ್ಲಾಸ್ಪತ್ರೆಗೆ ಬಂದಿಲ್ಲ. ಬದಲಾಗಿ ಇಂದು ಬೆಳಿಗ್ಗೆ ಗರ್ಭಿಣಿಯರನ್ನು ಕರೆತಂದಿದ್ದಾರೆ. ಏಕೆ ಹೀಗೆ ಎಂದು ಪ್ರಶ್ನಿಸಿದರೆ, ಜ್ಯೋತಿಷಿಗಳು ಹಾಗಂದ್ರು, ನೆರೆಹೊರೆಯವರು ಹೀಗಂದ್ರು. ಇದೇ ಭಯದಿಂದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದು ಕೊಂಡು ಬರಲಿಲ್ಲ ಎಂದು ಪೋಷಕರು ಉತ್ತರಿಸಿದರು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್ ತಿಳಿಸಿದರು.

‘ತಾಯಿ ಅಥವಾ ಮಗುವಿನ ಜೀವಕ್ಕೆ ಕುತ್ತು ಬಂದರೆ ಇದಕ್ಕೆ ಹೊಣೆ ಯಾರು. ಗ್ರಹಣಗಳ ಬಗ್ಗೆ ಆತಂಕ ಹುಟ್ಟಿಸುವ, ಅಪ್ರಚಾರ ಮಾಡುವ ಸಮೂಹ ಸನ್ನಿ ದೂರವಾಗಬೇಕು’ ಎಂದು ಸ್ಥಳೀಯ ನಿವಾಸಿ ಜ್ಯೋತಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT