ಶನಿವಾರ, ನವೆಂಬರ್ 28, 2020
19 °C
ಬೇಲೂರು ತಾಲ್ಲೂಕಿನ ದೇವರಾಜಪುರದ ಸರ್ಕಾರಿ ಜಮೀನು ಉಳಿಸಲು ಆಗ್ರಹ

ಟವರ್‌ ಏರಿ ದಂಪತಿ ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ‘ಗ್ರಾಮದ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ರಕ್ಷಿಸಲು ಮುಂದಾದ ನಮಗೆ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಗಂಡ–ಹೆಂಡತಿ ಇಬ್ಬರೂ ಪಟ್ಟಣದ ನೆಹರೂನಗರದಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿ ಕೆಲ ಕಾಲ ಆತಂಕ ಸೃಷ್ಟಿಸಿದರು.

ತಾಲ್ಲೂಕಿನ ದೇವರಾಜಪುರದ ಮೋಹನ್‌ರಾಜ್ ಮತ್ತು ಚಂದನ ದಂಪತಿ ಶುಕ್ರವಾರ ಮುಂಜಾನೆ ಟವರ್ ಏರಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೇದರಿಕೆ ಹಾಕಿದರು.

‘ಗ್ರಾಮದ ಸರ್ವೇ ನಂಬರ್‌ 101ರಲ್ಲಿ ಮೂರು ಎಕರೆ ಭೂಮಿಯಿದೆ. ಇದರಲ್ಲಿ 1.70 ಎಕರೆ ಒತ್ತುವರಿಯಾಗಿದೆ. ಉಳಿದ 1.30 ಎಕರೆ ಭೂಮಿಯಲ್ಲಿ ಸ್ಮಶಾನ, ಸಮುದಾಯ ಭವನ, ದೇಗುಲ, ಅಂಗನವಾಡಿ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಂದು ಕುಟುಂಬದಿಂದ ₹500 ರಿಂದ ₹2 ಸಾವಿರದವರಗೆ ಹಣ ಸಂಗ್ರಹಿಸಿದ್ದೆವು. ಆದರೆ, ಕೆಲವರು ನಮಗೆ ತಿಳಿಯದಂತೆ ಮೋಸ ಮಾಡಿ ತಮ್ಮ ಹೆಸರಿಗೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ಮೋಹನ್‌ರಾಜ್ ಆರೋಪಿಸಿದರು.

‘ಸ್ಥಳದಲ್ಲಿ ಮನೆಯನ್ನೂ ಅಕ್ರಮವಾಗಿ ಕಟ್ಟಿಕೊಂಡಿದ್ದರು. ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರಿಂದ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳು ಆ ಮನೆ ಕೆಡವಿಸಿದರು. ಇದರಿಂದ ಸಿಟ್ಟಾಗಿ ಅವರು ನಮ್ಮ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ. ನಮಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ತಹಶಿಲ್ದಾರ್ ಎನ್.ವಿ.ನಟೇಶ್, ಟವರ್‌ ಮೇಲಿದ್ದ ಮೋಹನ್‌ರಾಜ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿ, ‘ಸರ್ಕಾರಿ ಭೂಮಿಯನ್ನು ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಭರವಸೆ ನೀಡಿ, ಮನವೊಲಿಸಿದ ನಂತರ ದಂಪತಿ ಟವರ್ ಮೇಲಿಂದ ಕೆಳಗೆ ಇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.