ಬುಧವಾರ, ಮೇ 18, 2022
23 °C
ಮೋಹ, ಆಸೆ, ಮಾತ್ಸರ್ಯಗಳಿಂದ ದೂರವಿರಲು ಸಲಹೆ

'ಬದುಕು ಹೀಗೇನೇ' ಸಿಡಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪ್ರತಿಯೊಬ್ಬರಲ್ಲೂ ಗುಣ ಹಾಗೂ ಅವಗುಣಗಳಿದ್ದು, ನೆಮ್ಮದಿ ಬದುಕು ನಮ್ಮದಾಗಬೇಕೆಂದರೆ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಪಗ್ರಹ ನಿಯಂತ್ರಣ ಕೇಂದ್ರ (ಎಂಸಿಎಫ್‍)ದ ಹಿರಿಯ ನೌಕರ ಬಿ.ಎನ್. ಅಶೋಕ್ ಕುಮಾರ್ ಹೇಳಿದರು.

ಹೇಮಾವತಿ ನಗರದ ಗಾಯಿತ್ರಿ ಭವನದಲ್ಲಿ ಏರ್ಪಡಿಸಿದ್ದ ಚಂದ್ರಲೇಖ ಎಚ್.ಎಸ್. ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್‌ನ ದ್ವಿತೀಯ ವಾರ್ಷಿಕೋತ್ಸವ ಹಾಗೂ ಡಿ.ವಿ.ಜಿ.ಯವರ 'ಬದುಕು ಹೀಗೇನೇ' ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾನವರಾಗಿ ಬದುಕಲು ಮುಖ್ಯವಾಗಿ ಮಾನವತೆ ಬೇಕಾಗುತ್ತದೆ. ಗುಣ ಮತ್ತು ಅವಗುಣಗಳಲ್ಲಿ ಬದುಕಿಗೆ ನೆರವಾಗುವ ಅಂಶಗಳನ್ನು ತೆಗೆದುಕೊಳ್ಳಬೇಕು. ಕಷ್ಟ, ಸುಖಗಳು ಎಲ್ಲರ ಜೀವನದಲ್ಲೂ ಇರುತ್ತವೆ. ಭೂಮಿಯ ಮೇಲೆ ಜನಿಸಿದ ಯಾವ ವ್ಯಕ್ತಿಯು ಜೀವಿತದ ಕೊನೆಯವರೆಗೆ ಸುಖವಾಗಿರುತ್ತೇನೆ ಎನ್ನುವುದಿಲ್ಲ. ಆದರೆ, ಎದುರಾಗುವ ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಸುಖವಾಗಿ ಬಾಳುತ್ತೇನೆ ಎಂಬ ದೃಢ ಸಂಕಲ್ಪ ಮಾಡಬೇಕಾಗುತ್ತದೆ’ ಎಂದು ಡಿವಿಜಿಯವರ ಕಗ್ಗಗಳ ಮೂಲಕ ವಿವರಿಸಿದರು.

‘ಭೂಮಿ ಮೇಲೆ ಹುಟ್ಟಿರುವ ನಾವು ಏನಾದರೊಂದು ಸಾಧಿಸಬೇಕು. ಉಸಿರಿರುವ ವರೆಗೆ ಹೊಸದನ್ನು ಯೋಚಿಸುವ, ಮಾಡುವ ಮನೋಧರ್ಮ ನಮ್ಮದಾಗಬೇಕು. ಜೀವನವೇ ಒಂದು ಪರಿಭ್ರಮಣೆ. ಬದುಕು ಎಂದರೆ ಎರಡು ಆಶ್ಚರ್ಯ ಸೂಚಕ ಚಿನ್ಹೆಗಳ ಮಧ್ಯೆ ಪ್ರಶ್ನಾರ್ಥಕ ಚಿಹ್ನೆ ಇದ್ದಂತೆ. ಅದರ ಸುತ್ತಲೂ ಶೂನ್ಯ ಆವರಿಸಿಕೊಂಡಿರುತ್ತದೆ. ಜನನ ಹಾಗೂ ಮರಣ ಆಶ್ಚರ್ಯಗಳಾದರೆ ಬದುಕು ಪ್ರಶ್ನಾರ್ಥಕವಾಗಿರುತ್ತದೆ. ಆ ಜೀವನವನ್ನು ಶೂನ್ಯ ಆವರಿಸಿಕೊಂಡಿರುತ್ತದೆ’ ಎಂದು ಹೇಳಿದರು.

‘ಮಾನವನ ಪ್ರಯತ್ನಗಳೆಲ್ಲ ಆತ್ಮೋನ್ನತಿಯ ಮಾರ್ಗ ಎಂಬುದನ್ನು ಯಾರೂ ಮರೆಯಬಾರದು. ಸಿಕ್ಕಿರುವ ಬಾಳನ್ನು ಸುಖ, ಸಂತೋಷದಿಂದ ಕಳೆಯಬೇಕು. ಬದುಕು ಆದರ್ಶಮಯ ಆಗಿರಬೇಕು ಎಂದರೆ ಮೋಹ, ಆಸೆ, ಮಾತ್ಸರ್ಯಗಳಿಂದ ದೂರವಿರಬೇಕು. ಜೀವನದಲ್ಲಿ ಏನಾದರೊಂದು ಸಾಧನೆ ಮಾಡುತ್ತೇನೆಂಬ ಹಠ ಇರಬೇಕು’ ಎಂದು ಕಿವಿಮಾತು ಹೇಳಿದರು.

ಸಕಲೇಶಪುರ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ.ಆರ್. ಮಂಜುನಾಥ್ ಮಾತನಾಡಿ, ಅತ್ಯುತ್ತಮ ಸಂಸ್ಕಾರ ಸಿಕ್ಕ ವ್ಯಕ್ತಿ ಭಗವಂತನಾಗುತ್ತಾನೆ ಇಲ್ಲದಿದ್ದರೆ ರಾಕ್ಷಸನಾಗುತ್ತಾನೆ ಎಂದರು.

‘ನಾವು ಕೈಗೊಳ್ಳುವ ಯಾವುದೇ ಮಹತ್ತರ ಕಾರ್ಯಕ್ಕೆ ಗುರುಗಳ ಆಶೀರ್ವಾದ ಮುಖ್ಯವಾಗಿ ಬೇಕಾಗುತ್ತದೆ. ಗುರುವಿನ ಗುಲಾಮರಾಗುವ ತನಕ ಯಾವ ಕಾರಣಕ್ಕೂ ಮುಕ್ತಿ ದೊರೆಯುವುದಿಲ್ಲ. ಆದ್ದರಿಂದ ಗುರು, ತಂದೆ ತಾಯಿ, ಹಿರಿಯರನ್ನು ಗೌರವಿಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ತಹಸೀಲ್ದಾರ್ ಕೆ.ವಿ. ನಾಗರಾಜ್ ವಾರ್ಷಿಕ ವರದಿ ಮಂಡಿಸಿದರು. ಬಾಳ್ಳುಪೇಟೆ ಬಿ. ಸಿದ್ದಣ್ಣಯ್ಯ ಸರ್ಕಾರಿ ಶಾಲೆಯ ಶಾಂತರಾಜು, ಟ್ರಸ್ಟ್ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.