ಭಾನುವಾರ, ಫೆಬ್ರವರಿ 28, 2021
23 °C
ಪ್ರಕೃತಿ ವಿಕೋಪ ಮುಂಜಾಗ್ರತಾ ಕ್ರಮ ವಹಿಸಲು ಡಿಸಿ ಸೂಚನೆ

ಬಿಸಿಲೆ ಮಾರ್ಗದಲ್ಲಿ ವಾಹನ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ಅಧಿಕ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ಅಪಾಯ ಎದುರಿಸಲು ಪ್ರತಿ ತಾಲ್ಲೂಕಿನಲ್ಲಿ ವಿಶೇಷ ತಂಡ ರಚನೆಯಾಗಬೇಕು, ತುರ್ತು ನಿರ್ವಹಣೆಗೆ ಸಹಾಯವಾಣಿಗಳಲ್ಲಿ ದಿನದ 24 ಗಂಟೆಯೂ ಜಾಗೃತರಾಗಿದ್ದು, ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಅಗ್ನಿಶಾಮಕದಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು ಹೆಚ್ಚಿನ ಗಮನಹರಿಸಬೇಕಿದ್ದು, ವಿಕೋಪ ಸಂಭವಿಸಬಹುದಾದ ಸ್ಥಳಗಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದರು.

ಪ್ರಕೃತಿ ವಿಕೋಪದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಜನ ಜೀವನ ವ್ಯವಸ್ಥೆ ಗಮನಿಸಲು ಸ್ಥಾಪಿತವಾಗಿರುವ ಸಹಾಯವಾಣಿ ಕೇಂದ್ರಗಳು ಚಾಲ್ತಿಯಲ್ಲಿರುವಂತೆ ಗಮನ ಹರಿಸಬೇಕು. ಸಾರ್ವಜನಿಕರು ಹಾಗೂ ಸಹಾಯವಾಣಿ ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಲು ನೆಟ್‍ವರ್ಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮಳೆಯ ಪ್ರಮಾಣ ಹೆಚ್ಚಾಗಿರುವ ಪ್ರದೇಶದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು. ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಿಗೆ ರಬ್ಬರ್ ಬೋಟ್, ಲೈಟಿಂಗ್, ಪವರ್ ಗರಗಸ ಒದಗಿಸಿ ನಿರಾಶ್ರಿತ ಕೇಂದ್ರಗಳ ವ್ಯವಸ್ಥೆಗೆ ಸೂಕ್ತ ಪರ್ಯಾಯ ಆಯ್ಕೆ ಮಾಡಿಟ್ಟುಕೊಳ್ಳಬೇಕು ಎಂದರು.‌

ಬಿಸಿಲೆ ಮಾರ್ಗದಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆವರೆಗೆ ವಾಹನ ನಿಷೇಧಿಸಬೇಕು. ಶಿರಾಡಿ ಘಾಟ್‍ಗಳಲ್ಲಿ ಹೆಚ್ಚಿನ ಭೂಕುಸಿತಗಳು ಸಂಭವಿಸದಂತೆ ಹೆಚ್ಚುವರಿ ತಂಡಗಳು ಸನ್ನದ್ಧವಾಗಿರಬೇಕು. ಅಲ್ಲದೇ, ಹೇಮಾವತಿ ಅಣೆಕಟ್ಟಿಗೆ ಆಗಮಿಸುವ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಅಗ್ನಿ ಶಾಮಕ ಇಲಾಖೆಗೆ ಅಗತ್ಯವಿರುವ ರಕ್ಷಣ ಸಾಧನ ಒದಗಿಸಲಾಗುವುದು. ಆರೋಗ್ಯ ಇಲಾಖೆ ಎಲ್ಲಾ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಔಷಧೋಪಚಾರಗಳೊಂದಿಗೆ ಸಿದ್ದರಾಗಿರಬೇಕು ಎಂದು ಅಕ್ರಂ ಪಾಷ ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಗಾಗಲೇ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ಒದಗಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.