ಸೋಮವಾರ, ಅಕ್ಟೋಬರ್ 21, 2019
25 °C
ಗ್ರಾಮಕ್ಕೆ ನುಗ್ಗಿ ಕುರಿ, ಕರು, ನಾಯಿ ತಿಂದು ಭಯ ಹುಟ್ಟಿಸಿದ್ದ ಚಿರತೆ

ಬೋನಿಗೆ ಬಿದ್ದ ಎರಡನೇ ಚಿರತೆ

Published:
Updated:
Prajavani

ಹಾಸನ: ತಾಲ್ಲೂಕಿನ ಹಳೇಕೊಪ್ಪಲು ಸೇರಿದಂತೆ ಹಲವು ಹಳ್ಳಿಗಳಿಗೆ ರಾತ್ರಿ ವೇಳೆ ನುಗ್ಗಿ ಆಡು, ಕುರಿ, ಕರು ಹಾಗೂ ನಾಯಿಗಳನ್ನು ತಿಂದು ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದೆ ಬೋನಿಗೆ ಬಿದ್ದಿದೆ.

ಇದರಿಂದ ಹಲವು ಹಳ್ಳಿಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆರು ತಿಂಗಳ ಅಂತರದಲ್ಲಿ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ಇನ್ನೂ ಎರಡು ಚಿರತೆ ಈ ಭಾಗದಲ್ಲೇ ಓಡಾಡುತ್ತಿದ್ದು, ಅವುಗಳನ್ನೂ ಸೆರೆ ಹಿಡಿಯಬೇಕೆಂಬುದು ಜನರ ಒತ್ತಾಯವಾಗಿದೆ.

ಸೆರೆ ಸಿಕ್ಕಿರುವ ಎರಡೂವರೆ ವರ್ಷದ ಹೆಣ್ಣು ಚಿರತೆ ಹಳೇ ಕೊಪ್ಪಲು ವ್ಯಾಪ್ತಿಯ ಐದಾರು ಹಳ್ಳಿಗಳ ಜನರಲ್ಲಿ ಭಯ ಹುಟ್ಟಿಸಿತ್ತು. ಮಂಟಿ, ಕಲ್ಲುಕೋರೆಯಲ್ಲಿ ಅಡಗಿ ಕುಳಿತು ರಾತ್ರಿ ಗ್ರಾಮಗಳಿಗೆ ನುಗ್ಗಿ ಕುರಿ, ಆಡು, ಕರು ಹಾಗೂ ನಾಯಿಗಳನ್ನು ಬೇಟೆಯಾಡುತ್ತಿತ್ತು.

‘ಈ ಭಾಗದಲ್ಲಿ ಮೂರ್ನಾಲ್ಕು ಚಿರತೆಗಳಿವೆ. ಆರು ತಿಂಗಳ ಹಿಂದೆ ಒಂದು ಚಿರತೆ ಸೆರೆ ಹಿಡಿಯಲಾಗಿತ್ತು. ಅದಾದ ಬಳಿಕವೂ ತಾಯಿ ಹಾಗೂ ಮರಿ ಚಿರತೆ ಜನರಿಗೆ ತೊಂದರೆ ನೀಡುತ್ತಿವೆ. ಹಳೇಕೊಪ್ಪಲು, ಗೌರಿಪುರ, ದೊಡ್ಡ ಕೊಂಡಗೊಳ, ಚಿಟ್ಟನಹಳ್ಳಿ ಭಾಗದಲ್ಲಿ ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ಹತ್ತಾರು ಸಾಕು ಪ್ರಾಣಿಗಳನ್ನು ತಿಂದು ಹಾಕಿವೆ’ ಎಂದು ಸ್ಥಳೀಯ ನಿವಾಸಿ ಮೋಹನ್‌ ಅಳಲು ತೋಡಿಕೊಂಡರು.

‘ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಖಾಸಗಿ ಜಮೀನಿನಲ್ಲಿ ಬೋನಿಡಲಾಗಿತ್ತು. ಅದರೊಳಗೆ ನಾಯಿ ಕಟ್ಟಲಾಗಿತ್ತು. ನಾಯಿ ತಿನ್ನುವ ಆಸೆಯಿಂದ ರಾತ್ರಿ ಬೋನಿಗೆ ನುಗ್ಗಿದ ಚಿರತೆ ಬಂಧಿಯಾಗಿದೆ. ಸದ್ಯಕ್ಕೆ ಚಿರತೆ ಆರೋಗ್ಯವಾಗಿದ್ದು, ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಕಾಡಾನೆ, ಚಿರತೆ, ಕರಡಿ ಸೇರಿದಂತೆ ವನ್ಯ ಜೀವಿಗಳ ಕಾಟ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಕಾಡು ಪ್ರಾಣಿಗಳ ಕಾಟದಿಂದ ಗ್ರಾಮೀಣ ಜನರು ಭಯದಲ್ಲೇ ಬದುಕ ಬೇಕಾಗಿದೆ. ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಹಾಸನ, ಹೊಳೆನರಸೀಪುರ ಮೊದಲಾದ ಕಡೆ ಚಿರತೆ ಹಾವಳಿ ಮಿತಿ ಮೀರಿದ್ದು, ಇನ್ನಾದರೂ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂಬುದು ನೊಂದ ಜನರ ಆಗ್ರಹವಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)