ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಎಚ್‌ಡಿಸಿಸಿ ಅಧ್ಯಕ್ಷ ಸ್ಥಾನ, ಹೊಸ ಮುಖಕ್ಕೆ ಮಣೆ?

ಎಚ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
Last Updated 8 ಅಕ್ಟೋಬರ್ 2020, 12:24 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಎಚ್‌ಡಿಸಿಸಿ) ನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಅ.9 ರಂದು ಚುನಾವಣೆ ನಡೆಯಲಿದ್ದು, ಮುಂದಿನ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೊದಲ ಅವಧಿಗೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಒಟ್ಟು 13 ನಿರ್ದೇಶಕರ ಸ್ಥಾನಗಳಿಗೂ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದು, ಇದರಿಂದಾಗಿ ಬ್ಯಾಂಕ್ ನಲ್ಲಿ ಜೆಡಿಎಸ್ ಪೂರ್ಣ ಬಹುಮತ ಸಾಧಿಸಿದೆ.

ಜೆಡಿಎಸ್ ಹಿರಿಯ ಮುಖಂಡ ಪಟೇಲ್ ಶಿವರಾಂ, ಮಾಜಿ ಉಪಾಧ್ಯಕ್ಷ ಬೇಲೂರಿನ ಎಂ.ಎ.ನಾಗರಾಜ್ ಮತ್ತು ಮೊದಲ ಬಾರಿಗೆ ನಿರ್ದೇಶಕರಾಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದ ಕುಡಿ ಡಾ.ಸೂರಜ್ ರೇವಣ್ಣ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದೆ.

ರಾಜಕೀಯ ಸಂಧ್ಯಾಕಾಲದಲ್ಲಿರುವ ಪಟೇಲ್ ಶಿವರಾಂ ಅವರಿಗೆ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ನೀಡಲು ಚಿಂತನೆ ನಡೆದಿದೆ. ಆದರೆ, ಅವರ ಆರೋಗ್ಯ ಸರಿಯಿಲ್ಲದ ಕಾರಣ ಬೇರೆಯವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಡಾ.ಸೂರಜ್ ಅವರನ್ನು ಮೊದಲ ಅವಧಿಗೆ ಅಧ್ಯಕ್ಷರನ್ನಾಗಿ ಮಾಡಿದರೆ 'ಕುಟುಂಬ ರಾಜಕಾರಣ' ಹಾಗೂ ಬೇರೆ ರೀತಿಯ ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ಅಧ್ಯಕ್ಷರಾಗುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಲಿ ನಿರ್ದೇಶಕರಾಗಿರುವವರ ಪೈಕಿ ಸಿ.ಎನ್.ಬಾಲಕೃಷ್ಣ, ಪಟೇಲ್ ಶಿವರಾಂ, ಸೋಮನಹಳ್ಳಿ ನಾಗರಾಜ್ ಅಧ್ಯಕ್ಷರಾಗಿರುವುದರಿಂದ ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನೆ ನಡೆದಿದೆ ಎನ್ನಲಾಗಿದೆ. ಇದರ ನಡುವೆ ಎಂ.ಎ.ನಾಗರಾಜ್ ಅವರಿಗೆ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ.

ಹಾಗೆಯೇ ಉಪಾಧ್ಯಕ್ಷ ಸ್ಥಾನಕ್ಕೂ ಹೊಸಬರಿಗೆ ನೀಡಲು ಮಾತುಕತೆ ನಡೆದಿವೆ ಎಂದು ಗೊತ್ತಾಗಿದೆ. ಸೂರಜ್‌ಗೆ ಉಪಾಧ್ಯಕ್ಷ ಸ್ಥಾನ ಕೊಡುವ ಮೂಲಕ ರಾಜಕೀಯ ನೆಲೆಗೆ ಬುನಾದಿ ಹಾಕಲು ರೇವಣ್ಣ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಎಚ್.ಡಿ.ದೇವೇಗೌಡ ನಿರ್ದೇಶನ ಮತ್ತು ಎಚ್.ಡಿ.ರೇವಣ್ಣ ಅವರ ನಿರ್ಧಾರವೇ ಅಂತಿಮವಾಗಿದೆ.

ಈಗಾಗಲೇ ನಿರ್ದೇಶಕರ ಜೊತೆ ರೇವಣ್ಣ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಗೊಂದಲ ಅಥವಾ ಅಸಮಾಧಾನಕ್ಕೆ ಅವಕಾಶ ಕೊಡದಂತೆ ನಡೆದುಕೊಳ್ಳುವಂತೆ ಹೇಳಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT