ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಹಿಂದೆ ಸರಿಯದಿದ್ದರೆ ಹೋರಾಟ; ಡಿಎಸ್ಎಸ್‌ಎಚ್ಚರಿಕೆ

ಮಠಾಧೀಶರ ನಡೆ ನಾಚಿಕೆಗೇಡಿನ ಸಂಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಜಾತಿ ಮುಂದಿಟ್ಟುಕೊಂಡು ರಾಜ್ಯದ ಮಠಾಧೀಶರು ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಸಿ.ಎಂ ಸ್ಥಾನದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಬೀದಿಗಿಳಿದಿರುವುದು ನಾಚಿಕೆಗೇಡಿನ ಸಂಗತಿ' ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣದಾಸ್‌ ಹೇಳಿದರು.

‘ಮೂರು ಬಾರಿ ವಾಮ ಮಾರ್ಗದಿಂದಲೇ ಸಿ.ಎಂ ಸ್ಥಾನಕ್ಕೇರಿದ ಯಡಿಯೂರಪ್ಪ ರಾಜ್ಯದ ರಾಜಕೀಯವನ್ನು ಕಲುಷಿತಗೊಳಿಸಿದರು. ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಆಪರೇಷನ್‌ ಕಮಲ ಮೂಲಕ ಮುಖ್ಯಮಂತ್ರಿಯಾದರು. ಅವರ ಈ ಕೃತ್ಯಕ್ಕೆ ಬಿಜೆಪಿ ಬೆನ್ನೆಲುಬಾಗಿ ನಿಂತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ರಾಜ್ಯದಲ್ಲಿ ಕೋವಿಡ್‌ನಿಂದ ಜನ ತತ್ತರಿಸಿ ಹೋಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ತುತ್ತು ಕೂಳಿಗಾಗಿ ಪರಿತಪಿಸುತ್ತಿದ್ದಾರೆ. ಜತೆಗೆ ಇಂಧನ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಲಾಕ್‌ಡೌನ್‌ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಜನ ಸಾಮಾನ್ಯರ ಈ ಯಾವುದೇ ಸಮಸ್ಯೆಗಳಿಗೆ ಧ್ವನಿ ಎತ್ತದ ಮಠಾಧೀಶರು ಈಗ ಯಡಿಯೂರಪ್ಪ ಪರವಾಗಿ ಒತ್ತಾಯ ಮಾಡುತ್ತಿರುವುದು ನೈತಿಕ ಮೌಲ್ಯಗಳ ಅಧಃಪತನದ ದ್ಯೋತಕ’ ಎಂದು ಆರೋಪಿಸಿದರು.

‘ಭೂ ಕಬಳಿಕೆ ಪ್ರಕರಣಗಳಲ್ಲಿ ಯಡಿಯೂರಪ್ಪ ಭಾಗಿಯಾಗಿರುವ ಆರೋಪಗಳಿವೆ. ಮಗ ವಿಜಯೇಂದ್ರ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ. ಹೀಗಿರುವಾಗ ಮಠಾಧೀಶರು ಈ ವಿಚಾರದ ಬಗ್ಗೆ ತುಟಿ ಬಿಚ್ಚದೆ, ಸಿ.ಎಂ ರಕ್ಷಣೆಗೆ ನಿಂತಿದ್ದಾರೆ. ಇವರು ರಾಜ್ಯದ ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ. ಇದು ತುಂಬಾ ಅಪಯಕಾರಿ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.

‘ತಮ್ಮ ಮಠಗಳಿಗೆ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿರುವ ಸ್ವಾಮೀಜಿಗಳು ಇನ್ನಷ್ಟು ಲಾಭ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಯಡಿಯೂರಪ್ಪ ಸಿ.ಎಂ ಆಗಲು ಇನ್ನಾವುದೇ ಜಾತಿ, ಜನಾಂಗದ ಬೆಂಬಲ ಇರಲಿಲ್ಲವೇ’ ಎಂದು ಪ್ರಶ್ನಿಸಿದರು.

ಮಠಾಧೀಶರು ಇಂತಹ ಅನುಚಿತ ನಡವಳಿಕೆಯಿಂದ ಹಿಂದೆ ಸರಿಯದಿದ್ದರೆ ದಲಿತ ಸಂಘಟನೆಗಳ ಒಕ್ಕೂಟದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಂಬುಗ ಮಲ್ಲೇಶ್‌, ನಾಗರಾಜ್‌ ಹೆತ್ತೂರು, ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಸತೀಶ್‌, ದಲಿತ ಮಾನವ ಹಕ್ಕುಗಳ ವೇದಿಕೆ ಸಂಚಾಲಕ ಆರ್‌.ಮರಿಜೋಸೆಫ್‌‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.