ಚಿಕಿತ್ಸೆಗಾಗಿ ರೋಗಿಗಳ ಅಲೆದಾಟ

ಭಾನುವಾರ, ಜೂಲೈ 21, 2019
22 °C
ಖಾಸಗಿ ಆಸ್ಪತ್ರೆಗಳು ಬಂದ್‌, ಸರ್ಕಾರಿ ಆಸ್ಪತ್ರೆ ಒಪಿಡಿ ಒಂದೂವರೆ ತಾಸು ಸ್ಥಗಿತ

ಚಿಕಿತ್ಸೆಗಾಗಿ ರೋಗಿಗಳ ಅಲೆದಾಟ

Published:
Updated:
Prajavani

ಹಾಸನ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ಮುಷ್ಕರ ಬೆಂಬಲಿಸಿದ ಪರಿಣಾಮ ಖಾಸಗಿ ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತುರ್ತು ಚಿಕಿತ್ಸೆ ಹೊರತು ಪಡಿಸಿ ಇತರೆ ಯಾವುದೇ ಸೇವೆ ನೀಡಲಿಲ್ಲ.

ಹೊರ ರೋಗಿಗಳ ವಿಭಾಗ (ಒಪಿಡಿ) ಪೂರ್ಣ ಬಂದ್‌ ಮಾಡಿ, ‘ಐಎಂಎ ನಡೆಸುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರ ಬೆಂಬಲಿಸಿ ಹೊರ ರೋಗಿ ವಿಭಾಗ ಬಂದ್‌ ಮಾಡಲಾಗಿದೆ’ ಎಂಬ ಚೀಟಿ ಅಂಟಿಸಲಾಗಿತ್ತು.

ನಗರದ ಎಸ್‌ಎಸ್‌ಎಂ ಆಸ್ಪತ್ರೆ, ಮಂಗಳಾ ಆಸ್ಪತ್ರೆ, ಜನಪ್ರಿಯ, ಹೊಯ್ಸಳ, ಸ್ಪರ್ಶ್, ಎನ್‌ಡಿಆರ್‌ಕೆ, ರಾಜೀವ್‌, ಸಂಜೀವಿನಿ ಸಹಕಾರಿ ಆಸ್ಪತ್ರೆ, ಹೇಮಾವತಿ, ಮಲ್ನಾಡು, ಮಣಿ ಆಸ್ಪತ್ರೆ ಸೇರಿದಂತೆ ಕ್ಲಿನಿಕ್‌ಗಳು ಸೇವೆ ಸ್ಥಗಿತಗೊಳಿಸಿದ್ದವು.

ದೂರದ ಊರುಗಳಿಂದ ಬಂದಿದ್ದ ರೋಗಿಗಳು ಆಸ್ಪತ್ರೆ ಎದುರು ಚಿಕಿತ್ಸೆಗಾಗಿ ಕಾದು ಕುಳಿತಿದ್ದರು. ಸಂಜೆ 6ರ ಬಳಿಕ ಸೇವೆ ಒದಗಿಸಲು ಆರಂಭಿಸಲಾಯಿತು.

ಖಾಸಗಿ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ವೈದ್ಯರಿಗೆ ನೀಡಲಾಗಿದ್ದ ರಜೆ ರದ್ದು ಗೊಳಿಸಿ ವಾಪಸ್‌ ಕರೆಸಲಾಗಿತ್ತು. ಆದರೆ, ಮುಷ್ಕರಕ್ಕೆ ಬೆಂಬಲ ನೀಡುವ ಸಲುವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಾಂಕೇತವಾಗಿ ಒಪಿಡಿ ಸೇವೆಯನ್ನು ಒಂದೂವರೆ ತಾಸು ಸ್ಥಗಿತಗೊಳಿಸಲಾಗಿತ್ತು.

ವೈದ್ಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಕಪ್ಪು ಪಟ್ಟಿ ಧರಿಸಿ, ‘ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವೈದ್ಯರ ಮೇಲೆ ಹಲ್ಲೆ ತಡೆಗೆ ಕಠಿಣ ಕಾನೂನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು. ಬಳಿಕ ಕರ್ತವ್ಯಕ್ಕೆ ಮರಳಿದರು.

ಮುಷ್ಕರದ ಮಾಹಿತಿ ಇಲ್ಲದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಸಾವಿರಾರು ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲೂ ಒಪಿಡಿ ಸೇವೆ ಸ್ಥಗಿತಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಹುಡುಕಿಕೊಂಡು ಹೋದರು. ಅಲ್ಲಿಯೂ ಒಪಿಡಿ ಬಂದ್‌ ಆದ ಕಾರಣ ಅನಿವಾರ್ಯವಾಗಿ ಮತ್ತೆ ಸರ್ಕಾರಿ ಆಸ್ಪತ್ರೆಗೆ ಬಂದು ತಾಸುಗಟ್ಟಲೇ ಕಾದು ಚಿಕಿತ್ಸೆ ಪಡೆದರು. ಚಿಕಿತ್ಸೆಗಾಗಿ ಅಲೆದಾಡಬೇಕಾದ ಸ್ಥಿತಿ ಉಂಟಾಯಿತು. ಒಪಿಡಿ ಮುಂದೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಮಾತನಾಡಿ, ‘ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ರೋಗಿಗಳಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ಮುಷ್ಕರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !