ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ ಚಲನಚಿತ್ರ ಸಹಕಾರಿ

5

ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ ಚಲನಚಿತ್ರ ಸಹಕಾರಿ

Published:
Updated:
Deccan Herald

ಹಾಸನ: ‘ಮೌಲ್ಯಧಾರಿತ ಮಕ್ಕಳ ಚಲನಚಿತ್ರ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ನೆರವಾಗಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ತಿಳಿಸಿದರು.

ನಗರದ ಪೃಥ್ವಿ ಚಲನಚಿತ್ರ ಮಂದಿರದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿರುವ ಮಕ್ಕಳ ಚಲನಚಿತ್ರೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಚಲನಚಿತ್ರೋತ್ಸವವು ಆಗಸ್ಟ್ 3 ರಿಂದ 9ರ ವರೆಗೆ ನಡೆಯಲಿದೆ. ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ 2018–19ನೇ ಶೈಕ್ಷಣಿಕ ವರ್ಷದ ಮಕ್ಕಳ ಚಲನ ಚಿತ್ರೋತ್ಸವ ಏರ್ಪಡಿಸಲಾಗಿದೆ. ಪಠ್ಯದ ಜೊತೆ ಅರಿವು ಮೂಡಿಸುವ ಇದರ ಸದುಪಯೋಗ ಮಕ್ಕಳು ಪಡೆಯಬೇಕು ಎಂದು ಹೇಳಿದರು.

ಚಲನಚಿತ್ರ ಮಾಧ್ಯಮವು ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಉತ್ತಮ ಆಯಾಮವಾಗಿದೆ. ಉತ್ತಮ ಚಲನಚಿತ್ರವೂ ಮಕ್ಕಳಲ್ಲಿ ಜ್ಞಾನ ವೃದ್ಧಿಸುತ್ತದೆ ಎಂದು ಡಿಡಿಪಿಐ ಅಭಿಪ್ರಾಯಪಟ್ಟರು.

ಪೋಷಕರು ಮಕ್ಕಳಿಂದ ಸ್ಮಾರ್ಟ್‌ ಫೋನ್ ದೂರ ಇಡಬೇಕು. ಉತ್ತಮ ಸಂದೇಶವುಳ್ಳ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಿ, ದೇಶ ಭಕ್ತಿ, ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಸಬೇಕು ಎಂದರು.

ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್‌ಮೂರ್ತಿ ಅವರು, ‘ಚಲನಚಿತ್ರ ಪರಿಣಾಮಕಾರಿ ಮಾಧ್ಯಮವಾಗಿದೆ. ಪಠ್ಯದ ಜತೆಗೆ ಮನರಂಜನೆಯು ಅತೀ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳ ಕಲಿಕೆಗೆ, ಪರೀಕ್ಷೆಗೆ ಪೂರಕವಾದ ಮಕ್ಕಳ ಚಲನಚಿತ್ರವನ್ನು ಸರ್ಕಾರ ಹಮ್ಮಿಕೊಂಡಿರುವುದು ಒಳ್ಳೆಯ ಸಂಗತಿ’ ಎಂದರು.

ಚಲನಚಿತ್ರದಲ್ಲಿ ಬರುವ ಒಳ್ಳೆಯ ಸನ್ನಿವೇಶ ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕಬೇಕು. ಸೇವಾ ಮನೋಭಾವ, ನಾಯಕನ ಗುಣ ಮೂಡಬೇಕು ಎಂದು ತಿಳಿಸಿದರು.

ಹಾಸನದ ಪೃಥ್ವಿ, ಸಹ್ಯಾದ್ರಿ, ಗುರು, ಎಸ್.ಬಿ.ಜಿ, ಪಿಚ್ಚರ್ ಪ್ಯಾಲೇಸ್ ಚಲನಚಿತ್ರ ಮಂದಿರ, ಚನ್ನರಾಯಪಟ್ಟಣದ ಬಾಲಾಜಿ, ಧನಲಕ್ಷ್ಮಿ, ಲಕ್ಷ್ಮಿ, ಹೊಳೆನರಸೀಪುದ ಎಸ್.ಎಲ್.ಎನ್., ಚೆನ್ನಾಂಬಿಕ, ಅರಕಲಗೂಡು ಹಾಗೂ ಕೇರಳಾಪುರದ ಮಂಜುನಾಥ ಚಲನಚಿತ್ರ ಮಂದಿರ, ಬಸವಾಪಟ್ಟಣದ ಮಹದೇಶ್ವರ ಚಲನಚಿತ್ರ ಮಂದಿರ, ಅರಸೀಕೆರೆಯ ರತ್ನ, ಸಾಧನ, ಬಾಣಾವರದ ವೆಂಕಟೇಶ್ವರ, ಬೇಲೂರಿನ ರೇಣುಕ, ಸಕಲೇಶಪುರದ ತೇಜಸ್ವಿ, ಜೈ ಮಾರುತಿ ಚಲನ ಚಿತ್ರ ಮಂದಿರಗಳಲ್ಲಿ ಆಗಸ್ಟ್ 3 ರಿಂದ 9ರ ವರೆಗೆ ಪ್ರತಿದಿನ ಬೆಳಗ್ಗೆ 8 ರಿಂದ 10ರ ವರೆಗೆ ಮಕ್ಕಳ ಚಲನ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ, ರಮೇಶ್, ಮಂಜುನಾಥ್, ವೆಂಕಪ್ಪ, ಶೇಖರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !