ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರದಲ್ಲಿ ಜಮೀನು ವಿಚಾರಕ್ಕೆ ಘರ್ಷಣೆ: ನಾಲ್ವರ ಸಾವು

ಮಾರಗೌಡನಹಳ್ಳಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್
Last Updated 24 ಮೇ 2021, 15:06 IST
ಅಕ್ಷರ ಗಾತ್ರ

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ, ಆಸ್ತಿ ವಿಚಾರವಾಗಿ ಸೋಮವಾರ ನಡೆದ ಘರ್ಷಣೆಯು ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ.

ಗ್ರಾಮದ ಮಲ್ಲೇಶ್‌ ಹಾಗೂ ಸ್ವಾಮಿಗೌಡ ಎಂಬ ದಾಯಾದಿಗಳ ನಡುವೆ ಜಮೀನು ವಿಚಾರಕ್ಕೆ ಹಿಂದಿನಿಂದಲೂ ವ್ಯಾಜ್ಯ ನಡೆದಿತ್ತು. ಜಮೀನು ವಿಚಾರವು ನ್ಯಾಯಾಲಯದಲ್ಲಿ ತೀರ್ಮಾನವಾಗಿ ಮಲ್ಲೇಶ್‌ ಪರ ತೀರ್ಪು ಬಂದಿದೆ. ಹಾಗಾಗಿ ಮಲ್ಲೇಶ್ ಮಗ ಬಸವರಾಜು ಬೆಳಿಗ್ಗೆ ಉಳುಮೆ ಮಾಡಲು ಜಮೀನಿಗೆ ಹೋದಾಗ ಸ್ವಾಮಿಗೌಡ ಅವರ ಮಗ ಪಾಪಣ್ಣಿ , ಪ್ರದೀಪ, ಶಶಿ ಗಲಾಟೆ ಮಾಡಿ, ಹೆದರಿಸಿ ಕಳುಹಿಸಿದ್ದರು. ಈ ಸಂಬಂಧ ಮಲ್ಲೇಶ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮತ್ತೆ ಮಧ್ಯಾಹ್ನ ಜಮೀನಿನ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಹರಿತವಾದ ಆಯುಧದಿಂದ ಇರಿದ ಪರಿಣಾಮ ಮಲ್ಲೇಶ (60), ಮಲ್ಲೇಶನ ಚಿಕ್ಕಪ್ಪನ ಮಗ ಮಂಜೇಶ (35), ಮಲ್ಲೇಶನ ಅಳಿಯ ರವಿ (35) ಮತ್ತು ಎದುರು ಗುಂಪಿನ ಸ್ವಾಮಿಗೌಡರ ಮಗ ಪಾಪಣ್ಣಿ (42) ಸಾವನ್ನಪ್ಪಿದ್ದಾರೆ.

‘ಸ್ವಾಮಿಗೌಡ, ಪಾಪಣ್ಣಿ, ಪ್ರದೀಪ, ಶಶಿ, ಸಚಿನ್, ಯೋಗೇಶ್ ಅವರು ಸೇರಿಕೊಂಡು ನನ್ನ ತಂದೆ, ಬಾವ, ಅಣ್ಣನನ್ನು ಹತ್ಯೆ ಮಾಡಿದ್ದಾರೆ’ ಎಂದು ಮಲ್ಲೇಶನ ಮಗ ಬಸವರಾಜು ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ತರಲಾಗಿದೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಡಿವೈಎಸ್‌ಪಿ ಲಕ್ಷ್ಮೇಗೌಡ, ಸಿಪಿಐ ಆರ್‌.ಅಶೋಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ. ಕೈಗೆ ಸಿಕ್ಕ ಆಯುಧದಿಂದ ಬಡಿದಾಡಿಕೊಂಡು ನಾಲ್ವರು ಮೃತಪಟ್ಟಿದ್ದಾರೆ. ಪ್ರಕರಣದ ತನಿಖೆ ನಂತರ ಸತ್ಯಾಂಶ ಗೊತ್ತಾಗಲಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT