ಸೋಮವಾರ, ನವೆಂಬರ್ 30, 2020
21 °C
ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭವಿಷ್ಯ

ವರ್ಷಾಂತ್ಯಕ್ಕೆ ಸಿಎಂ ಬದಲಾವಣೆ: ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮುಂದಿನ ದಿನಗಳಲ್ಲಿ ಪ್ರಪಂಚವನ್ನು ಸ್ತ್ರಿಯರೇ ಆಳುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು
ಶರ್ಮಾ ಭವಿಷ್ಯ ನುಡಿದರು.

ಹಾಸನಾಂಬ ದೇವಿ ದರ್ಶನ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೂ ಮೂರು ವರ್ಷ ಪ್ರಪಂಚ
ಸಂಕಷ್ಟಗಳ ಸರಮಾಲೆಯಲ್ಲೇ ಇರಬೇಕಿದೆ. ಮೂರನೇ ಮಹಾಯುದ್ಧ ಆಗುವುದು ಶತ ಸಿದ್ಧ. ಸ್ತ್ರೀಯರು ಜಗತ್ತನ್ನು
ಆಳುತ್ತಾರೆ. ಅಮೆರಿಕಾ, ಲಂಡನ್, ಆಫ್ರಿಕಾ, ಜಪಾನ್, ನೇಪಾಳ ಹಾಗೂ ಸಿಂಗಪುರ ರಾಜಕೀಯ ಕ್ಷೇತ್ರದಲ್ಲಿ ಭಾರತದ
ಮಹಿಳೆಯರು ಮಿಂಚುತ್ತಾರೆ ಎಂದು ಹೇಳಿದರು.

ಮೂರು ಮುಖ್ಯಮಂತ್ರಿಗಳ ಆಡಳಿತಾವಧಿ ನಂತರ ಕರ್ನಾಟಕವೂ ಆಂಧ್ರ-ತೆಲಂಗಾಣದಂತೆ ಒಡೆದು ಹೋಳಾಗುತ್ತದೆ.
ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರ ಬಿಂದುವಾದರೆ ಬೆಂಗಳೂರು ದಕ್ಷಿಣದ ರಾಜಧಾನಿ ಆಗಿರುತ್ತದೆ.
ವರ್ಷಾಂತ್ಯದಲ್ಲಿ ರಾಜ್ಯದ ಸಿ.ಎಂ ಕೂಡ ಬದಲಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ
ಗೆಲುವು ಸಾಧಿಸಿದರೂ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ. ಅದಕ್ಕಾಗಿ ಒಂದು ತಂಡ
ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಅವರು ವೈರಾಗ್ಯದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು
ಪ್ರತಿಕ್ರಿಯಿಸಿದರು.

ಇಂದಿರಾ ಗಾಂಧಿ ಹತ್ಯೆಯಂತಹ ಅಪಾಯ ನರೇಂದ್ರ ಮೋದಿ ಅವರಿಗೂ ಕಾದಿದೆ. ಜಾತಕದ ಪ್ರಕಾರ ಅವರು ತಾಯಿ
ಅಥವಾ ಹೆಂಡತಿ ಜತೆಗೆ ಇರಬೇಕು. ಮೋದಿ ತಮ್ಮ ಸುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.

ಬೆಂಗಳೂರಿಗೆ ಜಲ ಗಂಡಾಂತರ ಇನ್ನೂ ತಪ್ಪಿಲ್ಲ. ಕೆರೆ ಕಟ್ಟೆಗಳನ್ನೆಲ್ಲ ನಾಶಪಡಿಸಿ ಮನೆ ಕಟ್ಟಿಕೊಂಡಿರುವ
ರಾಜಕಾರಣಿಗಳ ಹೀನ ಕೃತ್ಯಕ್ಕೆ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಕೆರೆ ಒಡೆಯುವ ಮನೆ ಹಾಳು
ಕೆಲಸಕ್ಕೆ ಯಾರೂ ಹೋಗಬಾರದಿತ್ತು. ಮುಂದಿನ ಒಂದೂವರೆ ವರ್ಷ ಜಲ ಅವಾಂತರಗಳಿಂದ ಎಚ್ಚರವಾಗಿರಬೇಕು
ಎಂದರು.

ಹಿಂದುಗಳ ಪಾಲಿನ ಪವಿತ್ರ ಧಾರ್ಮಿಕ ಸ್ಥಳವಾಗಿರುವ ತಿರುಪತಿಯಲ್ಲಿ ವೆಂಕಟರಮಣ ಬದಲಿಗೆ ನರಸಿಂಹ ಅಸ್ತಿತ್ವ
ತಾಳುತ್ತಾನೆ. ಲಕ್ಷ್ಮಿ ಹಾಗೂ ವಿಷ್ಣುವಿನ ಸೇರ್ಪಡೆಯಿಂದ ನರಸಿಂಹನ ಅವತಾರ ಕಾಣಬೇಕಾಗುತ್ತದೆ. ಗುಜರಾತ್‍ನಲ್ಲಿ
ನಿರ್ಮಿಸಿರುವ ಸರ್ದಾರ್ ವಲಭಾಯಿ ಪಟೇಲ್ ಪ್ರತಿಮೆಗೂ ಕಂಟಕ ತಪ್ಪಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.