ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಕಾರ್ಯಕ್ರಮ: ಪ್ರಯಾಣಿಕರ ಪರದಾಟ

Published 1 ಮಾರ್ಚ್ 2024, 15:18 IST
Last Updated 1 ಮಾರ್ಚ್ 2024, 15:18 IST
ಅಕ್ಷರ ಗಾತ್ರ

ಹಾಸನ: ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದ ಬಿಸಿ, ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ತಟ್ಟಿತು.

ಮುಖ್ಯಮಂತ್ರಿ ಸೇರಿದಂತೆ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಜನರನ್ನು ಕರೆತರಲು ಜಿಲ್ಲಾಡಳಿತ 700 ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ನಿಯೋಜಿಸಿತ್ತು. ಇದರಿಂದಾಗಿ ನಿಯೋಜಿತ ಮಾರ್ಗದಲ್ಲಿ ಬಸ್‌ಗಳು ಇಲ್ಲದೇ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ನಿತ್ಯ ಖಾಸಗಿ, ಸರ್ಕಾರಿ ಕಚೇರಿಗೆ ತೆರಳುವ ಪ್ರಯಾಣಿಕರು ಮತ್ತು ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಗಂಟೆಗಟ್ಟಲೆ ಬಸ್‌ಗಳಿಗಾಗಿ ಕಾಯುತ್ತ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಂದಿನಂತೆ ಸಮಯಕ್ಕೆ ಬರುತ್ತಿದ್ದ ಬಸ್‌ಗಳು ಬಾರದೇ ವಿದ್ಯಾರ್ಥಿಗಳು ಚಡಪಡಿಸುತ್ತಿದ್ದರು. ಕೆಲಸಕ್ಕೆ ಹೋಗುವವರು ಖಾಸಗಿ ವಾಹನಗಳು, ಮ್ಯಾಕ್ಸಿ ಕ್ಯಾಬ್‌ಗಳನ್ನು ಅವಲಂಬಿಸುತ್ತಿದ್ದು, ಜನರ ಒತ್ತಡಕ್ಕೆ ತಕ್ಕಷ್ಟು ವಾಹನಗಳು ಸಂಚರಿಸದೇ ಅವರೂ ಪರಿತಪಿಸುವಂತಾಯಿತು.

ಮುಖ್ಯಮಂತ್ರಿ ಕಾರ್ಯಕ್ರಮಕ್ಕಾಗಿ ನಿತ್ಯದ ಓಡಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಿಕೊಳ್ಳುವುದು ಎಷ್ಟು ಸರಿ? ಸಮಾವೇಶಕ್ಕೆ ಬೇಕಾದರೆ, ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಿ. ಜನರಿಗಾಗಿ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳುವ ಜನಪ್ರತಿನಿಧಿಗಳು ತಮ್ಮ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಗೆ ಈ ರೀತಿ ತೊಂದರೆ ಕೊಡುವುದು ಯಾವ ಲೆಕ್ಕ ಎಂದು ಪ್ರಯಾಣಿಕ ಗಿರೀಶ್‌ ಖಾರವಾಗಿ ಪ್ರಶ್ನಿಸಿದರು.

ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಬಸ್ ನಿಲ್ದಾಣಕ್ಕೆ ಬಂದು ನಿಂತಿದ್ದಾರೆ. ಗಂಟೆಯಾದರೂ ಬಸ್‌ ಸಿಗುತ್ತಿಲ್ಲ. ಪರೀಕ್ಷೆಗೆ ಹಾಜರಾಗಬೇಕು. ತಪ್ಪಿದರೆ, ಮತ್ತೆ ಪರೀಕ್ಷೆ ಬರೆಯಬೇಕು. ಪರೀಕ್ಷೆ ಶುರುವಾಗುವುದು ಗೊತ್ತಿದ್ದರೂ, ಅದೇ ದಿನ ಸಮಾವೇಶ ಆಯೋಜಿಸುವ ಅಗತ್ಯ ಏನಿತ್ತು ಎಂದು ವಿದ್ಯಾರ್ಥಿಯೊಬ್ಬರ ತಾಯಿ ಮಾಲತಿ ಪ್ರಶ್ನಿಸಿದರು.

ಈಚೆಗೆ ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ನಡೆದ ಮುಖ್ಯಮಂತ್ರಿ ಕಾರ್ಯಕ್ರಮದ ಸಂದರ್ಭದಲ್ಲೂ ಬಸ್ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡಿದ್ದರು. ಶುಕ್ರವಾರವೂ ಅದೇ ವಾತಾವರಣ ಸೃಷ್ಟಿಯಾಗಿತ್ತು. ನಾಲ್ಕೈದು ಗಂಟೆಗಳ ಕಾರ್ಯಕ್ರಮಕ್ಕೆ ಜನರ ಇಡೀ ದಿನವನ್ನೇ ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಶೇ 96.82 ರಷ್ಟು ಹಾಜರಾತಿ

ಜಿಲ್ಲೆಯಲ್ಲಿ ಶುಕ್ರವಾರ ಆರಂಭವಾದ ದ್ವಿತೀಯ ಪಿಯುಸಿಯ ಪ್ರಥಮ ಭಾಷೆ ಪರೀಕ್ಷೆಗೆ ಶೇ 96.82 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಗೆ ನೋಂದಾಯಿಸಿದ್ದ 14172 ವಿದ್ಯಾರ್ಥಿಗಳ ಪೈಕಿ 13722 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT