ಮಂಗಳವಾರ, ಆಗಸ್ಟ್ 16, 2022
29 °C
ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಆರ್‌.ಗಿರೀಶ್‌ಗೆ ಮನವಿ ಸಲ್ಲಿಕೆ

‘ಆರು ತಿಂಗಳಲ್ಲಿ ರೈಲ್ವೆ ಮೇಲ್ಸೇತುವೆ ಪೂರ್ಣಗೊಳಿಸಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಹೊಸ ಬಸ್‌ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಈ ಸಂಬಂಧ ಹಿರಿಯ ನಾಗರಿಕರ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಗಳ ಸದಸ್ಯರು, ನಗರದ ಎನ್.ಆರ್. ವೃತ್ತದಿಂದ ಚನ್ನಪಟ್ಟಣದ ಹೊಸ ಬಸ್ ನಿಲ್ದಾಣದ ವರೆಗೆ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಬಸ್ ನಿಲ್ದಾಣಕ್ಕೆ ಹಾಗೂ ಹೊಳೆನರಸೀಪುರ, ಮೈಸೂರು ರಸ್ತೆ ಕಡೆಗೆ ಹೋಗಿ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳು, ವರ್ತಕರು, ವಕೀಲರು, ಕೈಗಾರಿಕಾ ಕಾರ್ಮಿಕರು, ರೈತರು ಅಕ್ಕ-ಪಕ್ಕದ ನಿವಾಸಿಗಳಿಗೆ ನಿತ್ಯ ತೊಂದರೆ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.

2021ರ ಜೂನ್‌ 20ರೊಳಗೆ ಕಾಮಗಾರಿ ಪೂರ್ಣಗೊಳ್ಳಲು ಜಿಲ್ಲಾಡಳಿತ, ರೈಲ್ವೆ ಇಲಾಖೆ, ಲೋಕೋಪಯೋಗಿ ಹಾಗೂ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಮತ್ತು ಸ್ಥಳೀಯ ಶಾಸಕ ಪ್ರೀತಂ ಗೌಡ ಅವರು ಕಾಮಗಾರಿಗೆ ಮೊದಲ ಆದ್ಯತೆ ನೀಡಬೇಕು. ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಕಾನೂನು ತೊಡಕಿದ್ದರೆ ಅದನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಬೇಕು. ಸೇತುವೆ ನಿರ್ಮಾಣಕ್ಕೆ ಜಮೀನು ನೀಡಬೇಕಾಗಿರುವ ಸಂಸ್ಥೆ ಸಹ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಕೂಡಲೇ ಜಿಲ್ಲಾಡಳಿತದೊಂದಿಗೆ ರಾಜಿ ಸಂಧಾನಕ್ಕೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಹಿರಿಯ ನಾಗರಿಕ ವೇದಿಕೆಯ ವೈ.ಎಸ್. ವೀರಭದ್ರಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಜಿ.ಪಿ. ಶೇಖರ್, ಕಾರ್ಯದರ್ಶಿ ಕಾರ್ಲೆ ಮೊಗಣ್ಣಗೌಡ, ಖಾಸಗಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಬಷೀರ್, ಬಾಳೆಹಣ್ಣು ವ್ಯಾಪಾರಿಗಳ ಸಂಘ. ಎಪಿಎಂಸಿ ವರ್ತಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಹಸಿರು ಭೂಮಿ ಪ್ರತಿಷ್ಟಾನ, ಚನ್ನಪಟ್ಟಣ ಹೌಸಿಂಗ್ ಬೋರ್ಡ್‌‌ನ ಕ್ಷೇಮಾಭಿವೃದ್ಧಿ ಸಂಘ, ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ, ದಲಿತ ಸಂಘರ್ಷ ಸಮಿತಿ, ಖಬಾ ಮಸೀದಿ ಅಧ್ಯಕ್ಷ ಷಾಫೀರ್ ಅಹಮದ್, ಕರೀಗೌಡ ಕಾಲೋನಿ, ಭೀಮಯ್ಯ ಕಾಲೋನಿ, ವಿಶ್ವೇಶ್ವರಯ್ಯ ಕಾಲೋನಿ ನಿವಾಸಿಗಳು, ಚನ್ನಪಟ್ಟಣ ಕೆರೆ ಅಭಿವೃದ್ಧಿ ಸಮಿತಿಯ ತೌಫಿಕ್ ಅಹಮದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು