ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ವಾರಾಂತ್ಯದ ಲಾಕ್‌ಡೌನ್: ಪ್ರೇಕ್ಷಣೀಯ ಸ್ಥಳಗಳಲ್ಲಿ ಜನದಟ್ಟಣೆ

ಮಲೆನಾಡಿನತ್ತ ಪ್ರವಾಸಿಗರ ಹೆಜ್ಜೆ
Last Updated 9 ಆಗಸ್ಟ್ 2021, 4:29 IST
ಅಕ್ಷರ ಗಾತ್ರ

ಹೆತ್ತೂರು: ಮಲೆನಾಡಿನ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ವಾರಾಂತ್ಯಕ್ಕೆ ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ, ಮಾರ್ಗಸೂಚಿ ಪಾಲನೆಗೆ ನಿರ್ಲಕ್ಷ್ಯ, ಹೊರ ಜಿಲ್ಲೆ, ರಾಜ್ಯಗಳ ಪ್ರವಾಸಿಗರ ಓಡಾಟದಿಂದ ಇಲ್ಲಿ ಸೋಂಕು ವ್ಯಾಪಿಸುವ ಆತಂಕ ಹೆಚ್ಚಿದೆ.

ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆ ಪ್ರವಾಸಿಗರು ಭೇಟಿ ನೀಡುತ್ತಿದ್ದು ಇದರಿಂದ ಶನಿವಾರ, ಭಾನುವಾರ ವಾಹನಗಳು ದಟ್ಟಣೆ ಹೆಚ್ಚಿತ್ತು.

ಬಿಸ್ಲೆ, ಪಟ್ಲಬೆಟ್ಟ, ಮೂಕನಮನೆ ಫಾಲ್ಸ್, ಕಾಗಿನಹರೆ, ಎಡಕುಮರಿ ಟನಲ್, ಹೊಸಹಳ್ಳಿ ಬೆಟ್ಟ, ಕಿರ್ಕಳ್ಳಿ ಮಂಟಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ದಂಡಿ ದಂಡಿಯಾಗಿ ಬರುತ್ತಿದ್ದು ಮಾಸ್ಕ್‌ ಹಾಕುವುದಾಗಲಿ, ಅಂತರ ಪಾಲಿಸುವುದು ಮರತೆ ಬಿಟ್ಟಿದ್ದರು.

ಇತ್ತೀಚಿನ ದಿನಗಳಲ್ಲಿ ಹಲವರು ಪ್ರವಾಸಿ ತಾಣಗಳಲ್ಲಿ ಬರ್ತಡೇ, ಫ್ರೆಂಡ್‌ಶಿಪ್‌ ಡೇ’ ವಿವಾಹ ವಾರ್ಷಿಕೋತ್ಸವನ್ನು ಕೂಡಾ ಆಚರಿಸುತ್ತಾರೆ. ಆಚರಣೆ ಹೆಸರಿನಲ್ಲಿ ಕೇಕ್‌ ಕಟಿಂಗ್‌, ಹಾಡು, ಕುಣಿತಗಳು, ಪಾರ್ಟಿ ಮೋಜು ಮಸ್ತಿ ನಡೆಯುತ್ತವೆ. ಕೆಲವರು ರಸ್ತೆ ಸಮೀಪದ ತೋಟ, ದಿಣ್ಣೆ, ಬೆಟ್ಟ ಮುಂತಾದ ಕಡೆ ತೆರಳಿ ಮದ್ಯ ಸೇವಿಸಿ ಮೋಜು–ಮಸ್ತಿ ಮಾಡುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಸಂಚರಿಸುವ ವಾಹನಗಳನ್ನು ಬಿಸ್ಲೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಯಿತು. ಮೂಕನಮನೆ ಫಾಲ್ಸ್, ಪಟ್ಲಾ, ಬೆಟ್ಟ ಕಡೆಗೆ ತೆರಳುವ ವಾಹನಗಳಿಗೆ ಎಲ್ಲೂ ತಪಾಸಣೆ ಮಾಡುತ್ತಿರಲಿಲ್ಲ. ಅಲ್ಲಿ ಕೆಲ ಕೇರಳದ ವಾಹನಗಳು ಇದ್ದದ್ದು ಕಂಡುಬಂತು.

‘ಸ್ನೇಹಿತನ ಜನ್ಮದಿನ ಆಚರಣೆಗೆ ಬೆಂಗಳೂರಿನಿಂದ ಬಂದಿದ್ದೇವೆ. ಕಾಗಿನಹರೆ, ಪಟ್ಲಬೆಟ್ಟ ನಮ್ಮ ಮೆಚ್ಚಿನ ತಾಣ, ಹೀಗಾಗಿ ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ವಾತಾವರಣ ಬಹಳ ಹಿತಕರವಾಗಿದೆ’ ಎಂದು ಬೆಂಗಳೂರಿನ ಐಟಿ ಉದ್ಯೋಗಿ ರೋಹಿಣಿ ಹೇಳಿದರು.

‘ಪಟ್ಲಬೆಟ್ಟ ಸೇರಿದಂತೆ ಹಲವು ಕಡೆ ಪಡ್ಡೆಗಳು ಅವಾಗವಾಗ ಮೋಜುಮಸ್ತಿ ಮಾಡುತ್ತಾರೆ. ಮದ್ಯ ಸೇವಿಸಿ, ಸಿಗರೇಟ್ ಸೇದಿ ಎಲ್ಲೆಂದರಲ್ಲಿ ಬಾಟಲಿ, ಪೊಟ್ಟಣಗಳನ್ನು ಬಿಸಾಕುತ್ತಾರೆ. ಈ ಸ್ಥಳಗಳಲ್ಲಿ ಯಾವುದೇ ಭದ್ರತೆ ಇಲ್ಲದಿರುವುದು ಅವರಿಗೆ ಅನುಕೂಲವಾಗಿದೆ. ಇಂಥ ಚಟುವಟಿಕೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು’ ಎಂದು ಬೆಟ್ಟದ ಮನೆ ಗ್ರಾಮದ ರಾಮಣ್ಣ ಮನವಿ ಮಾಡಿದರು.

‘ಪ್ರವಾಸಿಗರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಆರ್ಥಿಕ ಲಾಭಕ್ಕಿಂತ ಈಗ ಜೀವ ಉಳಿಸಿಕೊಳ್ಳುವುದು ಮುಖ್ಯ. ಹೊರರಾಜ್ಯಗಳ ಪ್ರವಾಸಿಗರು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಮಲೆನಾಡು ಜನಜಾಗೃತಿ ವೇದಿಕೆ ಕಾರ್ಯದರ್ಶಿ ಜಾಗಟ ಪ್ರವೀಣ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT