ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಡೆಗೆ ಬಗೆಬಗೆ ಜಾಗೃತಿ

ಜಿಲ್ಲಾಡಳಿತಕ್ಕೆ ಕೈ ಜೋಡಿಸಿದ ಸಾಮಾಜಿಕ ಕಾರ್ಯಕರ್ತ, ಸ್ಕೌಟ್ಸ್‌ ಗೈಡ್ಸ್‌, ಕಲಾವಿದರು
Last Updated 4 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಹಾಸನ: ಕೊರೊನಾ ವೈರಾಣು ಹರಡುವುದನ್ನು ತಡೆಯಲು ಸಾಮಾಜಿಕ ಕಾರ್ಯಕರ್ತ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಕಲಾವಿದರು ಕೈಜೋಡಿಸಿದ್ದಾರೆ.

ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಜನರು ಮಾತ್ರ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆಯಲ್ಲಿ ಓಡಾಡುವುದನ್ನು ಬಿಟ್ಟಿಲ್ಲ. ಹಾಗಾಗಿ ಈ ಎಲ್ಲರೂ ತಮ್ಮದೇ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೊರೊನಾ ವೈರಾಣು ಹುಟ್ಟಿಸಿರುವ ಭೀತಿ ಹಾಗೂ ದುಷ್ಪರಿಣಾಮದ ಕುರಿತು ಹಾಸನದ ಕಲಾವಿದರ ತಂಡ ಸಾಮೂಹಿಕ ಗಾಯನದ ಮೂಲಕ ಅರಿವು ಮೂಡಿಸುತ್ತಿದೆ.

ಕಲಾವಿದ ಗ್ಯಾರಂಟಿ ರಾಮಣ್ಣ, ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ವಾಸು, ವಿಜಯ್‍ ಕುಮಾರ್, ವಸಂತ್‍ ಕುಮಾರ್, ನಾಗರಾಜ್ ಹಾಗೂ ಇತರ ಒಡನಾಡಿಗಳು ಒಟ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡು ಹಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಎಲ್ಲರೂ ಸ್ಪಂದಿಸಬೇಕೆಂಬ ಅರ್ಥವುಳ್ಳ ಗಾಯನ ರಚಿಸಿದ್ದಾರೆ.

‘ಜನತಾ ಕರ್ಫ್ಯೂ ಬಂದೈತೆ, ಜನರಿಗೆ ನೆಮ್ಮದಿ ತಂದೈತೆ, ಕೊರೊನಾ ಸೋಂಕು ತಡೆಯಲು ನಮಗೆಲ್ಲರಿಗೂ ಬೆಳಕಾಗೈತೆ’ ಎನ್ನುವ ಹಾಡಿನ ಮೂಲಕ ಪ್ರಧಾನಿ ಮೋದಿ ಕರೆ ನೀಡಿರುವ ಕರ್ಫ್ಯೂ ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

‘ಕೊರೊನಾ ಬಂದಾತು ಎಚ್ಚರವಿರಲಣ್ಣ, ಎಚ್ಚರ ತಪ್ಪಿದರೆ ನಿನ್ನ ಕೊಲ್ಲೂ ತೈತಣ್ಣ’ ಎಂದು ಹಾಡು ಹೇಳುವ ಮೂಲಕ ಸೋಂಕಿನ ಕರಾಳತೆ ಬಿಚ್ಚಿಟ್ಟಿದ್ದಾರೆ. ತಾವೇ ಸಾಹಿತ್ಯ ಬರೆದು ರಾಗ ಸಂಯೋಜನೆ ಮಾಡಿರುವ ಕಲಾವಿದರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸ್ಕೌಟ್ಸ್‌, ಗೈಡ್ಸ್‌ ನ ಆರ್‌.ಜಿ.ಗಿರೀಶ್‌ ಅವರು ಸ್ನೇಹಿತ ಉಮೇಶ್ ಅತ್ನಿ ಹಾಗೂ ಸುನಿಲ್‌ ಕುಮಾರ್‌ ಜೈನ್ ಜತೆ ಸ್ವಯಂ ಪ್ರೇರಿತರಾಗಿ ಮೈಕ್‌ ಮೂಲಕ ರಾತ್ರಿ 10 ರ ವರೆಗೆ ಬೀದಿ ಬೀದಿಯಲ್ಲಿ ಮನೆಯಿಂದ ಹೊರಗೆ ಬರದಂತೆ ಮನವಿ ಮಾಡುತ್ತಿದ್ದಾರೆ.

ಮೆಡಿಕಲ್‌ ಸ್ಟೋರ್, ತರಕಾರಿ, ಆಸ್ಪತ್ರೆ, ಹಾಲಿನ ವ್ಯಾಪಾರ ಹೊರುತು ಪಡಿಸಿ ಉಳಿದಕ್ಕೆ ನಿರ್ಬಂಧ ಹೇರಿ, ಸಾಮಾಜಿಕ ಅಂತರ ಕಾಪಾಡಲು ಸೂಚಿಸಿದ್ದರೂ ಕೆಲವರು ಉಲ್ಲಂಘನೆ ಮಾಡುತ್ತಿದ್ದರು. ಹಾಗಾಗಿ ಧ್ವನಿವರ್ಧಕದ ಮೂಲಕ ಜನರಿಗೆ ಕೊರೊನಾ ವೈರಾಣು ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ನಗರಸಭೆ ಮಾಜಿ ಸದಸ್ಯ ಮನೋಹರ್‌ ಅವರು ಜನಸಂದಣಿ ಪ್ರದೇಶದಲ್ಲಿ ಉಚಿತವಾಗಿ ಸೋಂಕು ನಿವಾರಕ ಔಷಧ ಸಿಂಪಡಣೆ ಕಾಯಕ ಮಾಡುತ್ತಿದ್ದಾರೆ.

ವೈದ್ಯಾಧಿಕಾರಿ ಸಲಹೆ ಪಡೆದು ಸ್ವಂತ ಹಣದಲ್ಲಿ ₹ 2 ಸಾವಿರ ಬೆಲೆಯ ಯಂತ್ರ ಹಾಗೂ ಔಷಧ ಖರೀದಿಸಿ, ಬ್ಯಾಂಕ್‌, ಮೆಡಿಕಲ್ ಸ್ಟೋರ್‌, ಆಸ್ಪತ್ರೆ, ಕ್ಲಿನಿಕ್‌, ಮಾರುಕಟ್ಟೆಗಳಲ್ಲಿ ಉಚಿತವಾಗಿ ಔಷಧ ಸಿಂಪಡಣೆ ಮಾಡಿ, ಶುಚಿತ್ವ ಕಾಪಾಡುವಂತೆ ಮನವಿ ಮಾಡಿದರು.‌

‘ಹಾಸನ ಜಿಲ್ಲೆಯಲ್ಲಿ ಈ ವರೆಗೂ ಕೊರೊನಾ ಪಾಸಿಟಿವ್‌ ಪ್ರಕರಣ ಬಂದಿಲ್ಲ. ಜನರು ಮನೆಯಲ್ಲಿಯೇ ಇದ್ದು ಸೋಂಕು ಹರಡದಂತೆ ಸಹಕರಿಸಬೇಕು. ಲಾಕ್‌ಡೌನ್‌ ಇರುವುದರಿಂದ ಮೆಡಿಕಲ್‌ ಸ್ಟೋರ್‌, ಕ್ಲಿನಿಕ್‌, ಬ್ಯಾಂಕ್‌, ಮಾರುಕಟ್ಟೆ ಬಳಿ ಜನರು ಹೆಚ್ಚು ಜಮಾಯಿಸಿರುತ್ತಾರೆ. ಶುಚಿತ್ವ ಕಾಪಾಡುತ್ತಿಲ್ಲ. ಹಾಗಾಗಿ ಸ್ವಂತ ಹಣದಿಂದ ಯಂತ್ರ, ಔಷಧ ಖರೀದಿ ಜನಸಂದಣಿ ಪ್ರದೇಶಗಳಲ್ಲಿ ಸಿಂಪಡಣೆ ಮಾಡುತ್ತಿದ್ದೇನೆ’ ಎಂದು ಮನೋಹರ್ ‘ಪ್ರಜಾವಾಣಿ’ಗೆ ಹೇಳಿದರು. ಮಾಹಿತಿಗೆ ಮೊ. 9844060277 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT