ಹಾಸನ: ಕೊರೊನಾ ನಾಗಲೋಟ ಮುಂದುವರಿದಿದ್ದು, ಗುರುವಾರ 97 ಪ್ರಕರಣ ವರದಿಯಾಗುವ ಮೂಲಕ ಎರಡು ಸಾವಿರ ಗಡಿ ದಾಟಿದೆ. ಜತೆಗೆ ಆರು ಜನ ಮೃತಪಟ್ಟಿದ್ದಾರೆ.
ನಿತ್ಯ 500 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು, ಕನಿಷ್ಠ 90 ರಿಂದ 100 ಪಾಸಿಟಿವ್ ವರದಿ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2030ಕ್ಕೆ ಏರಿದೆ. ಇದುವರೆಗೆ 60 ಮಂದಿ ಸಾವಿಗೀಡಾಗಿದ್ದಾರೆ. 16 ಮಂದಿ ಸೇರಿ 901 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1069 ಸಕ್ರಿಯ ಪ್ರಕರಣಗಳಿವೆ. 23 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಸಿರಾಟದ ತೊಂದರೆಯಿಂದ ಅರಸೀಕೆರೆ ತಾಲ್ಲೂಕಿನ 55 ವರ್ಷದ ಮಹಿಳೆ, 60 ವರ್ಷದ ವ್ಯಕ್ತಿ, ಹಾಸನ ತಾಲ್ಲೂಕಿನ 26 ವರ್ಷದ ಮಹಿಳೆ, 68 ವರ್ಷದ ವೃದ್ಧ, 52 ವರ್ಷದ ಪುರುಷ ಹಾಗೂ 50 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಸರ್ಕಾರದ ನಿಯಮದ ಪ್ರಕಾರ ಎಲ್ಲರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದರು.
ಹೊಸ ಪ್ರಕರಣಗಳಲ್ಲಿ ಅರಸೀಕೆರೆ 14, ಚನ್ನರಾಯಪಟ್ಟಣ 17, ಹಾಸನ 32, ಹೊಳೆನರಸೀಪುರ 14, ಆಲೂರು ತಾಲೂಕಿನಲ್ಲಿ ಒಬ್ಬರು, ಅರಕಲಗೂಡು 7 , ಬೇಲೂರು ತಾಲ್ಲೂಕಿನ 11 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ
ಶೀತ ಜ್ವರ ಮಾದರಿ ಅನಾರೋಗ್ಯ, ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ, ಬೆಂಗಳೂರು, ಚಿಕ್ಕಮಗಳೂರು ಪ್ರಯಾಣ ಹಿನ್ನೆಲೆ ಹೊಂದಿರುವವರು ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಸೋಂಕು ತಗುಲಿದೆ. ಹಲವು ಪ್ರಕರಣಗಳ ಸೋಂಕಿನ ಮೂಲ ಪತ್ತೆ ಕಾರ್ಯ ನಡೆಯುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.