ಗುರುವಾರ , ಜೂನ್ 24, 2021
23 °C
ಸ್ವಾತಂತ್ರ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಸಚಿವ ಗೋಪಾಲಯ್ಯ

ಕೋವಿಡ್‌: ಸಾವಿರ ಹಾಸಿಗೆ ಹೆಚ್ಚಳಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದಲ್ಲಿ ಸ್ವಾತಂತ್ರ್ಯ ದಿನವನ್ನು ಶನಿವಾರ ಸರಳವಾಗಿ ಆಚರಿಸಲಾಯಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಧ್ವಜಾರೋಹಣವನ್ನು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ
ನೆರವೇರಿಸಿದರು. ತೆರೆದ ವಾಹನದಲ್ಲಿ ತೆರಳಿ ತಂಡಗಳ ಪರಿವೀಕ್ಷಣೆ ನಡೆಸಿ, ಪೊಲೀಸ್‌ ಸಶಸ್ತ್ರಪಡೆ, ಕೆಎಸ್‌ಆರ್‌ಪಿ, ಗೃಹರಕ್ಷಕ ದಳ, ಸೇವಾದಳ, ಸ್ಕೌಟ್ಸ್‌, ಗೈಡ್ಸ್‌, ಎನ್‌ಸಿಸಿ ಯಿಂದ ಗೌರವ ರಕ್ಷೆ ಸ್ವೀಕರಿಸಿದರು.

ಕೊರೊನಾ ಕಾರಣದಿಂದ ಹೆಚ್ಚಿನ ಸಾರ್ವಜನಿಕರು ಪಾಲ್ಗೊಳ್ಳಲಿಲ್ಲ. ವಿವಿಧ ಇಲಾಖೆ ಅಧಿಕಾರಿಗಳು,ಪೊಲೀಸರು, ಮಾಧ್ಯಮ ಪ್ರತಿನಿಧಿಗಳಷ್ಟೇ ಭಾಗವಹಿಸಿದ್ದರು.

ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಗೋಪಾಲಯ್ಯ, ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಪ್ರಾಣ ತ್ಯಾಗ ಮಾಡಿ ತಂದುಕೊಟ್ಟ ಸ್ವಾತಂತ್ರವನ್ನು ಜವಾಬ್ದಾರಿಯಿಂದ ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕಿದೆ ಎಂದರು.

ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ 500 ರಿಂದ 1000 ಸಾವಿರ ಹಾಸಿಗೆಗಳನ್ನು ಹೆಚ್ಚಳ
ಮಾಡಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಸೋಂಕು ನಿಯಂತ್ರಣಕ್ಕೆ ಜನರೂ ಜಾಗೃತರಾಗಬೇಕು ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ 2019–20ನೇ ಸಾಲಿನಿಂದ ಈವರೆಗೆ 63,17,687 ಮಾನವ ದಿನಗಳನ್ನು
ಸೃಜನೆ ಮಾಡಲಾಗಿದ್ದು, ₹ 270 ಕೋಟಿ ವೆಚ್ಚ ಭರಿಸಲಾಗಿದೆ. 2.51 ಲಕ್ಷ ಜಾಬ್‌ ಕಾರ್ಡ್‌ ವಿತರಿಸಲಾಗಿದೆ. 9,141 ವೈಯಕ್ತಿಕ , 2,698 ಸಮುದಾಯ ಆಧಾರಿತ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.

ಸಚಿವರು ಬೆಳೆ ಸಮೀಕ್ಷೆ ಕುರಿತು ಪೋಸ್ಟರ್ ಬಿಡುಗಡೆ ಮಾಡಿದ ನಂತರ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ಜಿಲ್ಲೆಯ ವಸತಿ ನಿಲಯಗಳಲ್ಲಿ ಉಳಿದು, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ
ಅರಸೀಕೆರೆ ತಳಲುತೊರೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಟಿ.ಆರ್. ಉದಯ್ (ಶೇ. 95.20) ಚನ್ನರಾಯಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಎ.ಎಸ್‌. ಚಿರಂತ್‍ಗೌಡ, (ಶೇ. 96), ಹೊಳೆನರಸೀಪುರ ಮಾಲೇಕಳೇನಹಳ್ಳಿ ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯ ಎಂ.ಎಸ್, ಚಂದನ (ಶೇ. 85.76) ಅವರನ್ನು ಗೌರವಿಸಲಾಯಿತು.

ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ಆರ್. ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್, ಉಪವಿಭಾಗಾಧಿಕಾರಿ ನವೀನ್ ಭಟ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜರಾಂ, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ತಹಶೀಲ್ದಾರ್‌ ಶಿವಶಂಕರಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.