ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಸೋಂಕಿತರಿಗೆ ಹೆಚ್ಚುವರಿ 1939 ಹಾಸಿಗೆ

ಕೊರೊನಾ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಕ್ರಮ
Last Updated 2 ಆಗಸ್ಟ್ 2020, 11:19 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚುವರಿಯಾಗಿ ಜಿಲ್ಲಾದಾದ್ಯಂತ ವಸತಿ ನಿಲಯಗಳ 1939 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.

ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ 400 ಹಾಸಿಗೆಗಳ
ಸೌಲಭ್ಯವಿದೆ. ಅದರಲ್ಲಿ 50 ಹಾಸಿಗೆಗಳನ್ನು ಐಸಿಯುಗೆ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಏಳು ಖಾಸಗಿ ಆಸ್ಪತ್ರೆಗಳಿಂದ 280 ಹಾಸಿಗೆ ಲಭ್ಯ ಇದೆ. ಈಗಾಗಲೇ ಹಲವು ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಿವೆ.

ಕಳೆದ ಇಪ್ಪತ್ತು ದಿನಗಳಿಂದ ಪಾಸಿಟಿವ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಕೋವಿಡ್‌ ಪೀಡಿತರ ಸಂಖ್ಯೆ ನಿತ್ಯ ಶತಕ ದಾಟುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಎಸ್‌ಡಿಎಂ ಆಸ್ಪತ್ರೆಯಲ್ಲಿ 300, ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌, ಕೃಷಿ ಮಹಾವಿದ್ಯಾಲಯದಲ್ಲಿ 300 ಹಾಸಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 1,939 ಹಾಸಿಗೆಗಳನ್ನು ಕಾಯ್ದಿರಿಸಿದೆ.

ಮೇ 12ರಂದು ಜಿಲ್ಲೆಯಲ್ಲಿ ಮೊದಲ ಪಾಸಿಟಿವ್‌ ಪ್ರಕರಣ ದಾಖಲಾಯಿತು. ಆರಂಭದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ
ಮುಂಬೈನಿಂದ ಮರಳಿದವರದ್ದೇ ಸಿಂಹಪಾಲು. ಈಗ ಸೋಂಕಿನ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಬಳಿಕ ರೋಗ ದೃಢಪಡುತ್ತಿದೆ. ಯಾವುದೇ ಪ್ರಯಾಣ ಇತಿಹಾಸ ಇಲ್ಲದ ಸ್ಥಳೀಯರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಉಂಟು ಮಾಡಿದೆ.

ಪ್ರಸ್ತುತ ಹಿಮ್ಸ್‌ನಲ್ಲಿ 29 ವೆಂಟಿಲೇಟರ್‌ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್‌ ಲಭ್ಯ ಇದೆ. ಈವರೆಗೆ
26,168 ಜನರಿಗೆ ನಡೆಸಿದ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ 1933 ಮಂದಿಗೆ ಪಾಸಿಟಿವ್‌ ಬಂದಿದೆ. ನಾಲ್ಕು
ಸಾವಿರ ಜನರಿಗೆ ನಡೆಸಿದ ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 245 ಜನರಿಗೆ ಪಾಸಿಟಿವ್‌ ಬಂದಿದೆ. ನಿತ್ಯ 500 ಟೆಸ್ಟ್‌ಗಳು ಆಸ್ಪತ್ರೆಯಲ್ಲಿ ನಡೆಯುತ್ತಿದೆ.

‘ಸೋಂಕಿತರ ಚಿಕಿತ್ಸೆಗೆ ತೊಂದರೆ ಆಗದಂತೆ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಹೆಚ್ಚಿಸಲಾಗುತ್ತಿದೆ. ಅಗತ್ಯ ಸಿಬ್ಬಂದಿ
ನಿಯೋಜನೆ ಹಾಗೂ ತಾಲ್ಲೂಕಿಗೆ ಒಂದರಂತೆ ಹೆಚ್ಚುವರಿಯಾಗಿ ಆಂಬುಲೆನ್ಸ್ ನೀಡಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಆಂಬುಲೆನ್ಸ್‌ ತೆಗೆದುಕೊಳ್ಳಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ರೋಗಿಗಳಿಗೆ ಹಾಸಿಗೆ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ. ಅಗತ್ಯ ಔಷಧ ಸಾಮಗ್ರಿ, ವೆಂಟಿಲೇಟರ್‌ ಇದೆ. ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ. ವದಂತಿಗಳಿಗೆ ಕಿವಿಗೊಡಬಾರದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗ ಲಕ್ಷಣಗಳಲ್ಲದೆ ಕೋವಿಡ್‌ ದೃಢಪಟ್ಟಿರುವವರಿಗೆ ಹೋಂ ಐಸೋಲೇಷನ್‌ಗೆ ಒಳಪಡಿಸಲಾಗುತ್ತಿದೆ. ಮನೆಯಲ್ಲೇ ಪ್ರತ್ಯೇಕ ಶೌಚಗೃಹ ಹಾಗೂ ಕೊಠಡಿ ಇರುವುದನ್ನು ಖಚಿತಪಡಿಸಿಕೊಂಡು, ಈವರೆಗೆ 279 ಜನರಿಗೆ ಅನುಮತಿ ನೀಡಲಾಗಿದೆ. ಅವರಿಗೆ ಥರ್ಮೋ ಮೀಟರ್‌, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ಕಿಟ್‌ ನೀಡಲಾಗಿದೆ. ಅವರ ಮೇಲೆ ಅಧಿಕಾರಿಗಳು ನಿಗಾ ಇಟ್ಟಿರುತ್ತಾರೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT