ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಅಧಿಕಾರ ನೀಡದ ಜೆಡಿಎಸ್‌

ದೇವೇಗೌಡರ ಕುಟುಂಬದ ವಿರುದ್ಧ ಮಂಜು ಆಕ್ರೋಶ
Last Updated 11 ಏಪ್ರಿಲ್ 2019, 16:53 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ದೇಶ ಮತ್ತು ರಾಜ್ಯದ ಬಗ್ಗೆ ಚಿಂತನೆಯೇ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಟೀಕಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕು ಪಂಚಾಯಿತಿ ಕಚೇರಿ ಸಮೀಪ ಹಮ್ಮಿಕೊಂಡಿದ್ದ ದಲಿತ ಸಮಾವೇಶ ಉದ್ಘಾಟಿಸಿ ಮಾತನಾಡಿದರು

ದಲಿತರು ಹಾಗೂ ಅಲ್ಪಸಂಖ್ಯಾತರ ಪರ ಎನ್ನುತ್ತಾರೆ. ಆರು ಬಾರಿ ಗೆದ್ದಿರುವ ಎಚ್.ಕೆ. ಕುಮಾರಸ್ವಾಮಿ ಅವರನ್ನ ಮಂತ್ರಿ ಮಾಡಲಿಲ್ಲ. ಇನ್ನಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿ.ಎಂ ಮಾಡುತ್ತಾರೆಯೇ ಎಂದು ದೇವೇಗೌಡರನ್ನು ಜರಿದರು.

ದೇವಸ್ಥಾನಕ್ಕೆ ಪಾಯ ತೆಗೆಯೋದು ದಲಿತರು, ಕಲ್ಲು ಕಟ್ಟೋದು ದಲಿತರು. ದೇವರು ಎಲ್ಲರಿಗೂ ಇದ್ದಾನೆ. ಎಚ್. ಡಿ. ರೇವಣ್ಣ ತಮ್ಮ ಮಗನಿಗೆ ಮತ ಕೇಳಲು ದಲಿತರ ಮನೆಗೆ ಬರುವಂತೆ ಮಾಡಿರುವುದೇ ಮೊದಲನೇ ಗೆಲುವು ಎಂದು ಟೀಕಿಸಿದರು.

ಅಂತರ್ ಜಾತಿ ವಿವಾಹವಾದ ನನ್ನ ಮದುವೆಗೆ ದೇವೇಗೌಡರು ಬಂದು ಊಟು ಮಾಡಿಕೊಂಡು ಹೋಗಿದ್ದರು. ಆಗ ಇಲ್ಲದ ಜಾತಿ ಈಗ ಬಂದಿದೆಯೇ ಎಂದು ಪ್ರಶ್ನಿಸಿದರು.

ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್‌ಗೆ ₹ 9 ಕೋಟಿ ಎಲ್ಲಿಂದ ಬಂತು. ಆತ ಹಸು ಸಾಕಿ ಆದಾಯ ಗಳಿಸಿದೆ ಎನ್ನುತ್ತಾರೆ. ಆದರೆ,ಅದು ಕೆಎಂಎಫ್‌ನಿಂದ ಬಂದಿರಬೇಕು ಎಂದು ವ್ಯಂಗ್ಯವಾಡಿದರು.

ಹಾಸನ, ಮಂಡ್ಯ, ತುಮಕೂರಿನಲ್ಲಿ ಗೌಡರ ಕುಟುಂಬವಾದರೆ ಇನ್ನೂ ನಾವು ಎಲ್ಲಿ ಹೋಗಬೇಕು. ಬಿಜೆಪಿ ದಲಿತ ಮತ್ತು ಅಲ್ಪಸಂಖ್ಯಾತ ಜನಾಂಗದವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಆದರೆ, ಈ ಗೌಡರ ಕುಟುಂಬ ದಲಿತರಿಗೆ ಅಧಿಕಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಾತಿಗಳ ವಿರೋಧಿಯಲ್ಲ ಉಗ್ರರ ವಿರೋಧಿ, ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದಿದ್ದಾರೆ ಎಂದರೆ ಪಾಕ್‌ಗೆ ಎಷ್ಟು ಭಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಹಿರಿಯ ಮುಖಂಡ ಬಿ.ಸೋಮಶೇಖರ್ ಮಾತನಾಡಿ, ರಾಜಕೀಯ ಅಧಿಕಾರ ಸಿಗುವವರೆಗೂ ಅಸ್ತಿತ್ವವಿಲ್ಲ ಎಂದು ಬಿ.ಆರ್.ಅಂಬೇಡ್ಕರ್ ಹೇಳುತ್ತಿದ್ದರು. ಮೊದಲು ನಾವು ಗೌರವ ತಂದುಕೊಳ್ಳಬೇಕು. ದಬ್ಬಾಳಿಕೆ, ಕುಟುಂಬ ರಾಜಕಾರಣ, ಶೋಷಣೆಗೆ ಅಂತ್ಯವಾಡುವ ಕಾಲ ಬಂದಿದ್ದು, ದಲಿತರ ಹಿತ ಕಾಪಾಡುವವರನ್ನು ಚುನಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಬೆಂಬಲ ಪಡೆದು ಮೂರೇ ತಿಂಗಳಿಗೆ ಸಂಪುಟದಿಂದ ಎನ್‌.ಮಹೇಶ್‌ ಅವರನ್ನು ಹೊರಗೆ ಕಳುಹಿಸಿದರು. ಸ್ವಾಭಿಮಾನ ಎಂದರೆ ಬೇರೆಯವರಿಗೆ ಹೆದರುವುದಲ್ಲ ಎಂದರು.

ಶಾಸಕ ಪ್ರೀತಂ.ಜೆಗೌಡ, ಮುಖಂಡರಾದ ಎಚ್.ಎಂ.ವಿಶ್ವನಾಥ್, ಕೃಷ್ಣಕುಮಾರ್, ದುದ್ದ ಶೇಖರ್, ವಿಜಯಕುಮಾರ್, ಮಾಲ್‌ತೇಶ್ ಹಾಜರಿದ್ದರು.

ಕ್ಷೇತ್ರ ಬಿಟ್ಟಿದ್ದಕ್ಕೆ ಗೌಡರಿಂದ ಕಣ್ಣೀರು
ದೇವೇಗೌಡರು ಅವರ ಕುಟುಂಬದಿಂದ ಸಾಕಷ್ಟು ನೊಂದಿದ್ದಾರೆ. ಹಾಸನ ಕ್ಷೇತ್ರ ಬಿಟ್ಟುಕೊಡಬೇಕಲ್ಲ ಅಂತ ಕಣ್ಣೀರು ಹಾಕಿದರು. ಆದರೆ, ಅವರ ಜೊತೆಗೆ ಕುಟುಂಬದ ಸದಸ್ಯರು ಸೇರಿಕೊಂಡು ಅತ್ತರು.

ತುಮಕೂರಲ್ಲಿ ನಾಮಪತ್ರ ಸಲ್ಲಿಸುವಾಗ ಯಾರು ಅವರ ಜತೆ ಹೋಗಲಿಲ್ಲ ಎಂದು ಮಂಜು ಆರೋಪಿಸಿದರು.

ರೇವಣ್ಣ ಸಚಿವರಾಗಿ ಐಎಎಸ್ ಅಧಿಕಾರಿ ಬದಲು ಪ್ರಥಮ ದರ್ಜೆ ಸಹಾಯಕನನ್ನ ನೇಮಿಸಿಕೊಂಡಿದ್ದರು. ನಿತ್ಯ ಪೋನ್ ಮಾಡಿ ಕಿರುಕುಳ ನೀಡುತ್ತಾರೆಂದು ಕೆಲ ಅಧಿಕಾರಿಗಳು ನನ್ನ ಬಳಿ ಹೇಳಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT