ಶುಕ್ರವಾರ, ಜನವರಿ 22, 2021
20 °C
ಸಂವಹನ ಕೊರತೆಯಿಂದ ಸಮಸ್ಯೆ

ಡಿ.ಸಿ–ಶಾಸಕರ ಗೊಂದಲ ಶೀಘ್ರ ಬಗೆಹರಿಸುವೆ: ಸಚಿವ ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಸಂವಹನ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಾನುವಾರ ಹಾಗೂ ಸೋಮವಾರ
ಮೈಸೂರಿನಲ್ಲೇ ವಾಸ್ತವ್ಯ ಹೂಡುತ್ತಿದ್ದು, ಈ ಬಗ್ಗೆ ಅವರ ಜೊತೆ ಚರ್ಚಿಸಿ ಬಗೆಹರಿಸಲಾಗುವುದು. ಈಚೆಗೆ ನಡೆದ ಕೆಡಿಪಿ
ಸಭೆಯಲ್ಲಿ ತಮ್ಮ ಪತ್ರಗಳಿಗೆ ಜಿಲ್ಲಾಧಿಕಾರಿ ಯಾವುದೇ ಉತ್ತರ ಕೊಡುತ್ತಿಲ್ಲ ಎಂದು ಶಾಸಕ ಮಂಜುನಾಥ್  ಆರೋಪಿಸಿದ್ದರು. ಆದರೆ, ತಮಗೆ ಯಾವುದೇ ಪತ್ರ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿದ್ದರು. ಹಾಗಾಗಿ ಮತ್ತೊಮ್ಮೆ ಕುಳಿತು ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲ ಬೇಡ’ ಎಂದು ತಿಳಿಸಿದರು.

ದಸರಾ‌ ವೇಳೆಯಲ್ಲಿ ಜಿಲ್ಲಾಧಿಕಾರಿ ಅವರಿಂದ ಯಾವುದೇ ವ್ಯತ್ಯಾಸ ಆಗಿಲ್ಲ. ಸಣ್ಣಪುಟ್ಟ ವ್ಯತ್ಯಾಸವಾಗಿದ್ದರೆ ಸರಿಪಡಿಸಲಾಗುವುದು. ಜಿಲ್ಲಾಡಳಿತದ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಾಸಕ ಸಾ.ರಾ. ಮಹೇಶ್ ಅವರ ಹೇಳಿಕೆ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿ.ಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬ ಬಗ್ಗೆ
ಕಾರಣ ತಿಳಿದು ಬಂದಿಲ್ಲ. ಕಳೆದ ವಾರ ಮೈಸೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಯಡಿಯೂರಪ್ಪ ಜತೆ ಸಂತೋಷ್ ಸಹ ಪಾಲ್ಗೊಂಡು, ಲವಲವಿಕೆಯಿಂದಲೇ ಮಾತನಾಡಿದ್ದರು. ಅವರ ನಡೆ ಹಾಗೂ ವರ್ತನೆಯಲ್ಲಿ ಯಾವುದೇ ರೀತಿಯ ಬೇಸರ ಕಾಣುತ್ತಿರಲಿಲ್ಲ ಎಂದು ಹೇಳಿದರು.

ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೊ ಕಾರಣ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಸತ್ಯಕ್ಕೆ ದೂರ. ಆ ರೀತಿಯ ವಿಡಿಯೊ ಇದ್ದರೆ ಹೊರಗೆ ತರಲಿ ಎಂದ ಅವರು, ಸಂತೋಷ್ ಒಳ್ಳೆಯ ಹುಡುಗ. ರಾಜಕೀಯವಾಗಿ ಇನ್ನೂ ಮುಂದೆ ಬರಬೇಕಿದೆ. ಮಾನಸಿಕ ತೊಂದರೆ ಕಂಡಿರಬಹುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು