ಸೋಮವಾರ, ಸೆಪ್ಟೆಂಬರ್ 20, 2021
22 °C
ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಿರೀಶ್ ಸೂಚನೆ

ಕೋವಿಡ್‌ನಿಂದ ಸಾವು: ವಾರದೊಳಗೆ ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಕೋವಿಡ್‌ನಿಂದ ಮೃತಪಟ್ಟಿರುವ ಬಡತನ ರೇಖೆಗಿಂತ ಕೆಳಗಿರುವವರ ಮಾಹಿತಿಯನ್ನು ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಂಖ್ಯಾ ಸಂಗ್ರಹಣ ಇಲಾಖೆ ಜಂಟಿಯಾಗಿ ನಿಖರವಾಗಿ ಕ್ರೋಡೀಕರಿಸಿ ಇನ್ನೊಂದು ವಾರದಲ್ಲಿ ಅಂತಿಮ ವರದಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜನನ- ಮರಣ ನೋಂದಣಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ‘ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕವಾಗಿ ಕೋವಿಡ್ ಮೊದಲ ಅಲೆಯಲ್ಲಿ ಮೃತಪಟ್ಟ ಬಿ.ಪಿ.ಎಲ್ ಕುಟುಂಬ ಸದಸ್ಯರ ನಿಖರ ಅಂಕಿ– ಅಂಶ ಸಲ್ಲಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಮೂರು ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು’ ಎಂದರು.

‘ಇ- ಜನ್ಮ ತಂತ್ರಾಂಶದಲ್ಲಿ ಮೊದಲ ಅಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 550 ಎಂದು ನೋಂದಣಿಯಾಗಿದೆ. ಆಸ್ಪತ್ರೆ ದಾಖಲೆಗಳ ಪ್ರಕಾರ 465 ಎಂದು ನಮೂದಾಗಿದೆ. ಹಾಗಾಗಿ ಕೋವಿಡ್ ಆಸ್ಪತ್ರೆ ಹೊರತುಪಡಿಸಿ ಮನೆಯಲ್ಲಿ, ಮಾರ್ಗ ಮಧ್ಯದಲ್ಲಿ ಮೃತಪಟ್ಟವರು, ಬೇರೆ ಜಿಲ್ಲೆಯಲ್ಲಿ ಮೃತಪಟ್ಟವರ ವಿವರಗಳನ್ನು ಪರಿಶೀಲಿಸಿ ತಾಳೆ ನೋಡಿ ನವೀಕರಿಸಬೇಕಾಗಿದೆ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಗ್ರಾಮಲೆಕ್ಕಿಗರು ಮನೆ ಮನೆ ಭೇಟಿ ಮಾಡಿ ಆಸ್ಪತ್ರೆಗಳ ವರದಿಗಳ ಕೋವಿಡ್ ಫಲಿತಾಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಾಳೆ ನೋಡಿ ಖಾತರಿ ಪಡಿಸಿ ಬಿಟ್ಟುಹೋದ ಹೆಸರುಗಳನ್ನು ನೋಂದಣಿ ಮಾಡಬೇಕು’ ಎಂದು ಸೂಚಿಸಿದರು.

‘ಜನನ ಮರಣ ನೋಂದಣಿ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಮರಣ ಪ್ರಮಾಣ ಪತ್ರಗಳ ನೋಂದಣಿಗೆ ಕಡ್ಡಾಯವಾಗಿ ಆಧಾರ್ ಹಾಗೂ ಪಡಿತರ ಸಂಖ್ಯೆ ನಮೂದಿಸಲು ಕ್ರಮ ವಹಿಸಬೇಕು’ ಎಂದು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌, ಜಿಲ್ಲಾ ಸಂಖ್ಯೆ ಸಂಗ್ರಹಣಾಧಿಕಾರಿ ರಾಜ ನಾಯಕ್ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು