ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ಐವರು ಸಿಬ್ಬಂದಿಯನ್ನು ಕೂಡಿ ಹಾಕಿದ ರೈತರು

ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯ
Last Updated 29 ಏಪ್ರಿಲ್ 2022, 3:04 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ರೈತರು ಪಟ್ಟಣದ ಖರೀದಿ ಕೇಂದ್ರದ ಐವರು ಸಿಬ್ಬಂದಿಯನ್ನು ಗುರುವಾರ ಒಂದು ಗಂಟೆ ಕಾಲ ಕೂಡಿ ಹಾಕಿದ್ದರು.

ನೋಂದಣಿ ಪ್ರಕ್ರಿಯೆ ಬುಧವಾರ ಸಂಜೆ 4.30ಕ್ಕೆ ಮುಕ್ತಾಯಗೊಂಡಿತ್ತು. ಗುರುವಾರ ಕೆಲ ರೈತರು ಖರೀದಿ ಕೇಂದ್ರದ ಮುಂದೆ ಜಮಾಯಿಸಿ, ನೋಂದಣಿ ಮಾಡುವಂತೆ ಕೇಳಿಕೊಂಡರು. ‘ಲಾಗಿನ್ ಮುಕ್ತಾಯವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರೂ ಒಪ್ಪಲಿಲ್ಲ.

ಸ್ಥಳದಲ್ಲಿದ್ದ 50 ರೈತರ ಹೆಸರನ್ನು ಬರೆದುಕೊಳ್ಳುವಂತೆ ಸಿಬ್ಬಂದಿಗೆ ಅಧಿಕಾರಿಗಳು ಸೂಚಿಸಿದರು. ಬಳಿಕ ಇನ್ನಷ್ಟು ರೈತರು ಬಂದು ಒತ್ತಾಯಿಸಿದಾಗ ಅಧಿಕಾರಿಗಳು ನಿರಾಕರಿಸಿದರು.

ಅದರಿಂದ ಕೆರಳಿದ ರೈತರು ‘ಕಚೇರಿಯ ಬಾಗಿಲನ್ನು ಏಕೆ ತೆಗೆದಿದ್ದೀರಿ? ನೋಂದಣಿ ಮಾಡಿಕೊಳ್ಳಲೇಬೇಕು’ ಎಂದು ಪಟ್ಟುಹಿಡಿದರು. ಅದಕ್ಕೆ ಒಪ್ಪದ ಸಿಬ್ಬಂದಿಯನ್ನು ಕೂಡಿ ಹಾಕಿ ಕೇಂದ್ರದ ಬಾಗಿಲನ್ನು ಮುಚ್ಚಿ ಬೀಗ ಹಾಕಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಜೆ.ಎಂ. ಗೋವಿಂದರಾಜು, ಕೇಂದ್ರದ ಅಧಿಕಾರಿ ಚೇತನ್ ಹಾಗೂ ಪೊಲೀಸರು ಬಾಗಿಲು ತೆಗೆದರು.

‘ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಗೊಂದಲ ಮೂಡಿಸುತ್ತಿದ್ದಾರೆ. ದಲ್ಲಾಳಿಗಳಿಂದ ಲಂಚ ಪಡೆದು ಅವರಿಗಷ್ಟೇ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ರೈತರು ಆರೋಪಿಸಿದರು.

ತಹಶೀಲ್ದಾರ್ ಗೋವಿಂದರಾಜು ಪ್ರತಿಕ್ರಿಯಿಸಿ, ‘ಸಿಬ್ಬಂದಿಯನ್ನು ಕೂಡಿ ಹಾಕುವುದು ಸರಿಯಲ್ಲ. ರೈತರ ಹೆಸರು, ದಾಖಲೆ ಪಡೆದು ಚೀಟಿ ನೀಡಲಾಗುವುದು. ರಾಗಿ ಖರೀದಿಗೆ ಮತ್ತೆ ಅವಕಾಶ ದೊರಕಿದರೆ ಜ್ಯೇಷ್ಠತೆ ಆಧರಿಸಿ ನೋಂದಾಯಿಸಲಾಗುವುದು’ ಎಂದರು.

2,889 ಅರ್ಜಿಗಳು ನೋಂದಣಿ

ಚನ್ನರಾಯಪಟ್ಟಣ: ‘ತಾಲ್ಲೂಕಿನ ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಉದಯಪುರ ಖರೀದಿ ಕೇಂದ್ರದಲ್ಲಿ ಒಟ್ಟು 2,889 ಮಂದಿ ಹೆಸರು ನೋಂದಾಯಿಸಿದ್ದಾರೆ’ ಎಂದು ತಹಶೀಲ್ದಾರ್ ಜಿ.ಎಂ. ಗೋವಿಂದರಾಜು ತಿಳಿಸಿದರು.

‘ಲಾಗಿನ್ ಮುಕ್ತಾಯವಾಗಿದ್ದು, ನೋಂದಣಿ ಮಾಡಿಸಲು ಅವಕಾಶ ಇಲ್ಲ. ರಾಗಿ ಖರೀದಿಸುವಂತೆ ರೈತರಿಂದ ಬೇಡಿಕೆ ಇದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಪತ್ರ ಬರೆಯಲಾಗುವುದು. ಸರ್ಕಾರ ಪುನಃ ಅವಕಾಶ ನೀಡಿದರೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT