ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 175 ಭಾಷೆ ಅವನತ್ತಿಯತ್ತ

ಭಾಷಾ ನೀತಿ ಅಗತ್ಯ: ಜೆಎನ್ ಯು ಕನ್ನಡ ಅಧ್ಯಯನ ಪೀಠದ ಪುರುಷೋತ್ತಮ ಬಿಳಿಮಲೆ ಅಭಿಮತ
Last Updated 25 ಸೆಪ್ಟೆಂಬರ್ 2019, 14:09 IST
ಅಕ್ಷರ ಗಾತ್ರ

ಹಾಸನ: ‘ರೈತ ಮಾರುವ ಹಾಲಿಗಿಂತ ವಿವಿಧ ಕಂಪನಿಗಳು ಮಾರುವ ಗಂಜಲಕ್ಕೆ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಿ ಕುಡಿಯುವವರಿದ್ದಾರೆ.ಉನ್ನತವಾದ ಭಾಷೆಯ ಕುರಿತು ಪುಸ್ತಕ ಬರೆದರೆ ಪ್ರಕಟಿಸುವವರೂ ಸಿಗುತ್ತಿಲ್ಲ’ ಎಂದು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಕನ್ನಡ, ಆಂಗ್ಲ, ಹಿಂದಿ ಮತ್ತು ಸಂಸ್ಕೃತ ವಿಭಾಗಗಳ ವತಿಯಿಂದ ಉನ್ನತ ಶಿಕ್ಷಣದಲ್ಲಿ ಭಾಷೆ ಮತ್ತು ಸಾಹಿತ್ಯ ಬೋಧನೆ ಸವಾಲುಗಳು-ಸಾಧ್ಯತೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘2011 ರ ಜನಗಣತಿ ಪ್ರಕಾರ ಭಾರತದಲ್ಲಿ 19,569 ಭಾಷೆಗಳಿವೆ. ಆದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಅಂಗೀಕೃತವಾಗಿರುವುದು 22 ಮಾತ್ರ. ಅವುಗಳಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆ ಮಾತ್ರ ಇವೆ. ಪ್ರಸ್ತುತ ದೇಶದ 99 ಭಾಷೆಗಳು ಸಂವಿಧಾನಕ್ಕೆ ಸೇರಲು ಸ್ಪರ್ಧೆಗಿಳಿದಿವೆ. ದಕ್ಷಿಣ ಭಾರತದ 76 ದ್ರಾವಿಡ ಭಾಷೆಗಳಲ್ಲಿ 36 ಸ್ವತಂತ್ರ ಭಾಷೆಗಳಿದ್ದರೂ ಅವುಗಳ ಸ್ಥಾನಮಾನ ಉಳಿಸುವಲ್ಲಿ ವಿಫಲರಾಗಿದ್ದೇವೆ’ ಎಂದು ಭಾಷೆ ಕುರಿತ ನಿರ್ಲಕ್ಷ್ಯತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಯುನೆಸ್ಕೊ ಅಧ್ಯಯನ ಪಟ್ಟಿ ಪ್ರಕಾರ ದೇಶದ 175 ಭಾಷೆಗಳು ಅವನತಿಯಲ್ಲಿವೆ, ಅವುಗಳಲ್ಲಿ ಮಂಗಳೂರಿನ ಕೊರಗ ಭಾಷೆಯೂ ಒಂದು. ಕೊರಗ ಭಾಷೆ ಮಾತನಾಡುವವರು ತಮ್ಮ ಸ್ಥಾನಮಾನ ಕುಸಿಯುವುದೆಂಬ ಅಂಜಿಕೆಯಿಂದ ಆ ಭಾಷೆ ಬಳಸಲು ಇಚ್ಚಿಸುವುದಿಲ್ಲ. ಈ ರೀತಿಯ ಧೋರಣೆಗಳಿಂದ ಭಾಷೆ ಮರೆಯಾಗುತ್ತದೆ ಎಂದು ಭಾಷೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಬಿಳಿಮಲೆ ವಿವರಿಸಿದರು.

ರಾಜ್ಯದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇಕಡಾ 43, ತಮಿಳು ಶೇಕಡಾ 11, ತೆಲುಗು ಶೇಕಡಾ 13 ಹೆಚ್ಚಿದ್ದರೆ, ಕನ್ನಡ ಮಾತನಾಡುವವರು ಸಂಖ್ಯೆ ಶೇಕಡಾ 3.5 ಮಾತ್ರ ಹೆಚ್ಚಿದೆ. ಇದೇ ರೀತಿ ಮುಂದುವರಿದರೆ ಮುಂದಿನ ನಲವತ್ತು ವರ್ಷಗಳಲ್ಲಿ ಕನ್ನಡ ಭಾಷೆ ಕಣ್ಮರೆಯಾಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯುನ್ಮಾನ ಮಾಧ್ಯಮಗಳಿಗೆ ಹೋಲಿಸಿದರೆ ಪತ್ರಿಕೆಗಳು ಕನ್ನಡವನ್ನು ಚೆನ್ನಾಗಿ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಪೂರಕವಾಗಿವೆ. ಭಾಷೆ ಉಳಿವಿಗಾಗಿ ದೇಶದಲ್ಲಿ ಭಾಷಾ ನೀತಿ ಮತ್ತು ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಯ ವೇದಿಕೆ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಆಶಯ ನುಡಿಗಳನ್ನಾಡಿದ ಮಾನಸಗಂಗೋತ್ರಿ ಕನ್ನಡ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ, ಸಾಹಿತ್ಯ, ಭಾಷೆ ಮತ್ತು ಮಾನವಿಕ ವಿಷಯಗಳು ಕನಿಷ್ಠವೆಂಬ ಮನೋಭಾವ ಬಿಡಬೇಕು. ಇದೊಂದು ಬಗೆಯ ವ್ಯಾದಿ. ಪಠ್ಯಪುಸ್ತಕಗಳ ರಚನಾ ಸಮಿತಿ ಕೆಲವೊಮ್ಮೆ ತಮ್ಮ ಬೇಕು, ಬೇಡಗಳನ್ನು ಪಠ್ಯಗಳಲ್ಲಿ ತೂರಿಸುತ್ತದೆ. ವಿದ್ಯಾರ್ಥಿಗಳಿಗೆ ಅಗತ್ಯವಾದದ್ದನ್ನಷ್ಟೇ ನೀಡಬೇಕು ಎಂದು ಸಲಹೆ ನೀಡಿದರು.

ಜ್ಞಾನದ ವಾಹಕ ಶಕ್ತಿ ಭಾಷೆ. ವ್ಯಕ್ತಿ ಯಾವುದೇ ವಿಷಯ ಕಲಿಯಲು ಭಾಷೆ ಹಂಗು ಬೇಕು. ಹಾಗಾಗಿ ಭಾಷೆಯ ಉಳಿವು, ಬೆಳವಣಿಗೆಗೆ ಹಿಂದಿನವರು ತೋರಿದ ಕಾಳಜಿಯನ್ನು ಮಾದರಿಯಾಗಿ ಸ್ವೀಕರಿಸಬೇಕು ಎಂದು ನುಡಿದರು.

ಕಾಲೇಜಿನ ಕಲಾಶ್ರೀ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಾಂಶುಪಾಲ ಪ್ರೊ. ಸಿ ರಾಜಪ್ಪ, ಶೈಕ್ಷಣಿಕ ಡೀನ್ ಉದಯ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಟಿ.ಪಿ. ಪುಟ್ಟರಾಜು, ಆಂಗ್ಲ ವಿಭಾಗದ ಮುಖ್ಯಸ್ಥ ರಮೇಶ್, ಸಂಸ್ಕೃತ ವಿಭಾಗದ ಮುಖ್ಯಸ್ಥೆ ವೀಣಾ, ಅಂತರ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT