ಹೊಳೆನರಸೀಪುರ: ಹದಗೆಟ್ಟ ರೈಲ್ವೆ ಮೇಲ್ಸೇತುವೆ ರಸ್ತೆ

ಹೊಳೆನರಸೀಪುರ: ತಾಲ್ಲೂಕಿನ ಹಂಗರಹಳ್ಳಿ ಸಮೀಪದ ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ಮೊಳಕಾಲುದ್ದ ಹತ್ತಾರು ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರ ಬಲು ದುಸ್ತರವಾಗಿದೆ.
ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಎಷ್ಟು ಸಿಟ್ಟು ಇದೆ ಎಂಬುದು ಸೆ. 15ರಂದು ಎಂಜಿನಿಯರ್ ದಿನದ ಶುಭಾಶಯಗಳನ್ನು ನೋಡಿದರೆ ಅರ್ಥವಾಗುತ್ತದೆ.
ಸಾಮಾಜಿಕ ಜಾಲ ತಾಣದಲ್ಲಿ ಎಂಜಿನಿಯರ್ ದಿನದ ಶುಭಾಶಯ ತಿಳಿಸುವಾಗ ಅನೇಕರು ‘ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಿದ ಎಂಜಿನಿಯರ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಎಂಜಿನಿಯರ್‌ಗಳಿಗೆ ಶುಭಾಶಯಗಳು’ ಎಂದು ಬರೆದಿದ್ದರು.
ಎಂಜಿನಿಯರ್ ದಿನ ಮುಗಿದು ಒಂದೂವರೆ ತಿಂಗಳು ಕಳೆದರೂ ಜಿಲ್ಲಾಧಿಕಾರಿಗಳಾಗಲಿ, ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಈ ಬಗ್ಗೆ ಪ್ರಜಾವಾಣಿ ಮೂರು ತಿಂಗಳ ಹಿಂದೆ ವರದಿ ಪ್ರಕಟಿಸಿತ್ತು. ಆಗ ಮಣ್ಣು ಮುಚ್ಚಿ ತೇಪೆ ಹಾಕುವ ಕೆಲಸ ಮಾಡಿದ್ದನ್ನು ಬಿಟ್ಟರೆ ಮತ್ತೆ ಹೊರಳಿಯೂ ನೋಡಿಲ್ಲ. ಸೇತುವೆ ರಸ್ತೆ ದುರಸ್ತಿ ಮಾಡಿಲ್ಲ. ಬೇರೆ ಮಾರ್ಗವಿಲ್ಲದೆ ವಾಹನಗಳು ಇಲ್ಲಿ ಅನಿವಾರ್ಯವಾಗಿ ಹೋಗಬೇಕಾಗಿದೆ. ಚಾಲಕರು ಸೇತುವೆ ಮೇಲೆ ಬಂದಾಗ ಶಪಿಸುತ್ತಲೇ ಸಾಗುತ್ತಾರೆ.
ಹೊಳೆನರಸೀಪುರ ತಾಲ್ಲೂಕಿನ ಹಾಸನ ಮೈಸೂರು ರಸ್ತೆಯ ಹಂಗರಹಳ್ಳಿ ಸಮೀಪ ಇತ್ತೀಚೆಗೆ ನಿರ್ಮಾಣಗೊಂಡ ರೈಲ್ವೆ ಮೇತ್ಸೇತುವೆ ರಸ್ತೆಯಲ್ಲಿ ದೊಡ್ಡ ದೊಡ್ಡ ಹತ್ತಾರು ಗುಂಡಿಗಳು ಬಿದ್ದಿದ್ದು ಲಾರಿಗಳ ಗುಂಡಿಗೆ ಇಳಿದಾಗ ಆಕ್ಸಲ್ ತುಂಡಾಗಿ ಚಾಲಕರು ತೊಂದರೆ ಅನುಭವಿಸಿದ್ದಾರೆ. ಮಳೆ ಬಂದಾಗಲಂತೂ ಸಾಕಷ್ಟು ನೀರು ನಿಲ್ಲುವುದರಿಂದ ಗುಂಡಿಯ ಆಳ ಗೊತ್ತಾಗದೆ ಆಗ ಅಪಘಾತಗಳು ಆಗುವುದು ಹೆಚ್ಚು ಅನ್ನುತ್ತಾರೆ ಹಂಗರಹಳ್ಳಿ ಗ್ರಾಮಸ್ಥರು.
ಈ ರಸ್ತೆಯಲ್ಲಿ ಸಾಗುವಾಗ ದ್ವಿಚಕ್ರ ವಾಹನಗಳ ಹಲವು ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಕಾರುಗಳು ಸಾಗುವಾಗ ತೀವ್ರ ತೊಂದರೆ ಆಗುತ್ತಿದೆ. ಶಾಸಕ ಎಚ್.ಡಿ. ರೇವಣ್ಣ ಅವರೂ ಇದೇ ಮಾರ್ಗವಾಗಿ ಕಾರಿನಲ್ಲಿ ಸಂಚರಿಸುತ್ತಾರೆ. ಅವರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಬೇಸರದಿಂದ ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ ರೈಲ್ವೆ ಇಲಾಖೆ ಎಂಜಿನಿಯರ್‌ಗಳಿಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.