ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಾತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ

ದಾಖಲೆ ಬರೆದ ಹಾಸನಾಂಬೆ ದರ್ಶನೋತ್ಸವ: ಲಕ್ಷಾಂತರ ಭಕ್ತರು, ಕೋಟ್ಯಂತರ ಆದಾಯ
Published 14 ನವೆಂಬರ್ 2023, 7:50 IST
Last Updated 14 ನವೆಂಬರ್ 2023, 7:50 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬ ದೇಗುಲದ ಬಾಗಿಲನ್ನು ಬುಧವಾರ (ನ.15) ಮಧ್ಯಾಹ್ನ 12 ಗಂಟೆಗೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಚ್ಚಲಾಗುತ್ತಿದ್ದು, ದೇವಿಯ ದರ್ಶನಕ್ಕೆ ಮಂಗಳವಾರ ಮಾತ್ರ ಭಕ್ತರಿಗೆ ಅವಕಾಶವಿದೆ. ಮಂಗಳವಾರ ದರ್ಶನಕ್ಕೆ 24 ಗಂಟೆ ಅವಕಾಶ ಕಲ್ಪಿಸಲಾಗಿದೆ.

ಹಾಂಸನಾಂಬೆ ದೇವಿ ಸಾರ್ವಜನಿಕ ದರ್ಶನದ 11ನೇ ದಿನವಾದ ಸೋಮವಾರ ಬೆಳಿಗ್ಗೆಯಿಂದಲೇ ವಿಶೇಷ ಹಾಗೂ ಗಣ್ಯರ ಸಾಲಿನಲ್ಲಿ ಭಕ್ತರ ಸಂಖ್ಯೆ ತೀರಾ ಕಡಿಮೆ ಇತ್ತು. ಹೀಗಾಗಿ ಧರ್ಮದರ್ಶನದ ಸಾಲಿನಲ್ಲಿ ಬಂದಿದ್ದ ಭಕ್ತರು ಶೀಘ್ರ ದೇವಿಯ ದರ್ಶನ ಪಡೆಯುವ ಅವಕಾಶ ದೊರೆಯಿತು.

ವಿಶೇಷ ದರ್ಶನದ ₹1000 ಹಾಗೂ ₹ 300 ಬೆಲೆಯ ಟಿಕೆಟ್‌ನ ಸಾಲುಗಳು ಬಹುತೇಕ ಖಾಲಿಯಾಗಿದ್ದವು. ದೀಪಾವಳಿ ಹಬ್ಬ ಹಾಗೂ ಧನಲಕ್ಷ್ಮಿ ಪೂಜೆ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಯ ನಂತರ ದರ್ಶನಕ್ಕೆ ಬರುವವರ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು.

ದಾಖಲೆಯ ಜನ: ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಇತಿಹಾಸ ನಿರ್ಮಾಣವಾಗಿದ್ದು, ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು.

ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನೋತ್ಸವ ಮುಕ್ತಾಯಕ್ಕೆ ಒಂದು ದಿನ ಬಾಕಿ ಇರುವಾಗಲೇ, ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ 10 ಲಕ್ಷಕ್ಕೂ ಹೆಚ್ಚಿನ ಭಕ್ತರು ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

ನಿತ್ಯ 24 ಗಂಟೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಗಂಟೆಗೆ ಸುಮಾರು 3 ಸಾವಿರ ಜನರು ಗರ್ಭಗುಡಿಯಿಂದ ದೇವಿ ದರ್ಶನ ಪಡೆದು ಹೊರ ಹೋಗುತ್ತಿದ್ದಾರೆ. ನವೆಂಬರ್ 11ರಂದು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದಂತೆ 10 ದಿನದಲ್ಲಿ ನಿತ್ಯ 60 ಸಾವಿರದಿಂದ 70ಸಾವಿರ ಮಂದಿ ಭಕ್ತರು ದೇವಿಯ ದರ್ಶನ ಮಾಡಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಮಹಿಳಾ ಭಕ್ತರ ಸಂಖ್ಯೆಯು ಈ ಬಾರಿ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಸಂಸ್ಥೆಯಿಂದಲೂ ಈ ಬಾರಿ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಹಲವು ಜಿಲ್ಲೆಗಳಿಂದ ಬಂದಿದ್ದರು. ಬಹುತೇಕ ಸಾರಿಗೆ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಇದರಿಂದ ಸಾರಿಗೆ ಇಲಾಖೆಗೂ ಹೆಚ್ಚಿನ ಆದಾಯ ಬಂದಂತಾಗಿದೆ.

ಹಾಸನಾಂಬ ಜಾತ್ರಾ ಮಹೋತ್ಸವಕ್ಕಾಗಿ 80ಕ್ಕೂ ಹೆಚ್ಚು ಬಸ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು ಎಂದು ಕೆಎಸ್ಆರ್‌ಟಿಸಿ ಹಾಸನ ವಿಭಾಗೀಯ ನಿಯಂತ್ರಣಧಿಕಾರಿ ದೀಪಕ್ ತಿಳಿಸಿದ್ದಾರೆ.

ಪ್ಯಾರಾ ಸೈಲಿಂಗ್‌ಗೆ ಹಿನ್ನಡೆ: ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪ್ಯಾರಾ ಸೈಲಿಂಗ್ ಹಾಗೂ ಪ್ಯಾರಾ ಮೋಟಾರಿಂಗ್ ಸಾಹಸ ಕ್ರೀಡೆಯಲ್ಲಿ ಸುಮಾರು 290 ಮಂದಿ ಪ್ರಯೋಜನ ಪಡೆದಿದ್ದು, ಇವರಲ್ಲಿ ಸುಮಾರು 40 ಮಂದಿ ಪ್ಯಾರಾ ಮೋಟರಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ.

ಬೂವನಹಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ನಾಲ್ಕು ದಿನದಿಂದ ಸ್ಥಗಿತಗೊಳಿಸಲಾಗಿದ್ದ ಸಾಹಸ ಕ್ರೀಡೆಯನ್ನು ಸೋಮವಾರ ನಿಡೂಡಿ ಬಳಿಯ ಬಯಲು ಪ್ರದೇಶದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅಧಿಕಾರಿ ನಂದಕುಮಾರ್ ತಿಳಿಸಿದ್ದಾರೆ.

[object Object]
ಸೋಮವಾರ ಸರದಿಯಲ್ಲಿ ನಿಂತು ದರ್ಶನ ಪಡೆದ ಭಕ್ತರು.
[object Object]
ಹಾಸನಾಂಬ ದೇಗುಲದ ಗರ್ಭಗುಡಿಯ ಬಳಿ ಭಕ್ತರ ಸಾಲು

₹5.52 ಕೋಟಿ ಆದಾಯ ಅತಿ ಹೆಚ್ಚು ಆದಾಯ ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ₹ 5.52 ಕೋಟಿ ಆದಾಯ ಸಂಗ್ರಹವಾಗಿದೆ. ವಿಶೇಷ ದರ್ಶನದ ₹1ಸಾವಿನ ಬೆಲೆಯ ಟಿಕೆಟ್‌ನಿಂದ ₹2.80 ಕೋಟಿ ₹ 300 ಬೆಲೆಯ ಟಿಕೆಟ್‌ನಿಂದ ₹2.15 ಕೋಟಿ ಆದಾಯ ಬಂದಿದ್ದು ಲಾಡು ಮಾರಾಟದಿಂದ ₹ 56 ಲಕ್ಷ ಸಂಗ್ರಹವಾಗಿದೆ. ಒಟ್ಟು 5.52 ಕೋಟಿ ಆದಾಯ ಸಂಗ್ರಹವಾಗಿದೆ. ದರ್ಶನೋತ್ಸವ ಮುಕ್ತಾಯದ ವೇಳೆಗೆ ಇ- ಹುಂಡಿ ದೇವಾಲಯ ಹುಂಡಿ ಕಾಣಿಕೆ ಹಣ ಸೇರಿದಂತೆ ಇತರೆ ಮೂಲಗಳಿಂದ ಸುಮಾರು ₹ 10 ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ.

ಡ್ರೈ ಫ್ರೂಟ್ಸ್ ವಿತರಿಸಿದ ಶಾಸಕ ಸ್ವರೂಪ್‌ ಶಾಸಕ ಸ್ವರೂಪ್ ಪ್ರಕಾಶ್ ಸೋಮವಾರ ದೇವಾಲಯಕ್ಕೆ ಬಂದು ವಿವಿಧೆಡೆಗಳಿಂದ ಬಂದಿದ್ದ ಭಕ್ತಾದಿಗಳ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಚಾಕೊಲೇಟ್ ಒಣದ್ರಾಕ್ಷಿ ಬಾದಾಮಿ ಗೋಡಂಬಿ ವಿತರಿಸಿದರು. ಭಾನುವಾರ ಸಹ ಹಲವು ಗಂಟೆ ದೇವಾಲಯದ ಆವರಣದಲ್ಲಿಯೇ ಇದ್ದ ಸ್ವರೂಪ್‌ ಭಕ್ತಾದಿಗಳು ಸುಲಲಿತವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ಕ್ರಮ ವಹಿಸಲು ಅಧಿಕಾರಿಗಳು ಹಾಗೂ ಸಂಘಟಕರಿಗೆ ಸೂಚನೆ ನೀಡಿದರು. ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೂ ದೇವಾಲಯದ ಆವರಣದಲ್ಲಿಯೇ ಇದ್ದ ಅವರು ದರ್ಶನೋತ್ಸವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಅಧಿಕಾರಿ ವರ್ಗಕ್ಕೆ ಏರ್ಪಾಡು ಮಾಡಲಾಗಿದ್ದ ಊಟದ ವ್ಯವಸ್ಥೆ ಬಗ್ಗೆಯೂ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಸಹ ಭೋಜನ ಮಾಡುವ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT