ಭಾನುವಾರ, ಮೇ 29, 2022
20 °C
ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ

ಧರ್ಮದ ಹೆಸರಿನಲ್ಲಿ ದೇಶ ಒಡೆಯದಿರಿ: ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯ ಸರ್ಕಾರ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷದ ವರೆಗೆ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸುವ ಮಸೂದೆಯನ್ನು ಮಂಡಿಸಿದೆ. ಆದರೆ, ಶತಮಾನಗಳಿಂದ ಪರಿಶಿಷ್ಟರನ್ನು ಊರಿನಿಂದ ಹೊರಗಿಟ್ಟಿದ್ದವರಿಗೆ ಎಷ್ಟು ವರ್ಷ ಶಿಕ್ಷೆ ನೀಡಬೇಕು ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಪ್ರಶ್ನಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಿತ) ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ ಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶತಮಾನಗಳಿಂದ ಪರಿಶಿಷ್ಟರನ್ನು ಊರಿನಿಂದ ಹೊರಗೆ ಇಟ್ಟಿದ್ದವರು ಇಂದು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಭಾರತ ಧರ್ಮಾಧಾರಿತ, ಜಾತಿ ಆಧಾರಿತ ದೇಶವಲ್ಲ. ಧರ್ಮ ಆಧರಿತವಾಗಿ ದೇಶದಲ್ಲಿ ಆಡಳಿತ ನಡೆಸಿದರೆ ಮತ್ತೆ 500 ವರ್ಷ ಗುಲಾಮಗಿರಿಗೆ ಒಳಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ 49 ರಷ್ಟು ಜನ ಅಪೌಷ್ಟಿಕತೆ ಬಳಲುತ್ತಿದ್ದಾರೆ. ಶೇ 90 ರಷ್ಟು ಸಂಪತ್ತು ಕೇವಲ 10 ಜನರ ಕೈಯಲಿದೆ. ಇದು ಅಪಾಯದ ಸಂಕೇತ ಎಂದು ಎಚ್ಚರಿಸಿದರು.

ಅಂಬೇಡ್ಕರ್‌, ಬಸವಣ್ಣ, ಕುವೆಂಪು, ಕನಕದಾಸ ಎಲ್ಲರನ್ನು ಇಂದು ಜಾತಿಯ ಸಂಕೋಲೆಯಲ್ಲಿ ಸಿಲುಕಿಸಿದ್ದಾರೆ. ಅವರನ್ನು ಮಾನವೀಯ ದೃಷ್ಟಿಯಲ್ಲಿ ನೋಡಬೇಕು. ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡಬಾರದು ಎಂದರು.

ಕೊರೊನಾ ವಾರಿಯರ್ಸ್‍ಗಳಾಗಿ ಶ್ರಮಿಸಿದ ಆರೋಗ್ಯ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಡಿಎಸ್‍ಎಸ್ (ಸಂಯೋಜಕ) ರಾಜ್ಯಾಧ್ಯಕ್ಷ ಅಶ್ವಥ್ ನಾರಾಯಣ್ ಅಂತ್ಯಜ, ಜಿಲ್ಲಾಧ್ಯಕ್ಷ ಟಿ.ಡಿ. ಜಗದೀಶ್ ಚೌಡಳ್ಳಿ, ರಾಜ್ಯ ಸಂಯೋಜಕ ನಾರಾಯಣದಾಸ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಅಶ್ವಥ್ ನಾರಾಯಣ್, ಪತ್ರಕರ್ತ ವೆಂಕಟೇಶ್, ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, ಕೃಷ್ಣದಾಸ್, ಕೆ. ಈರಪ್ಪ, ಡಿ.ಎಸ್.ಎಸ್. (ಸಂಯೋಜಕ) ಉಪಾಧ್ಯಕ್ಷ ಕಬ್ಬಳ್ಳಿ ಸತೀಶ್, ರಘು, ಯೋಗೇಶ್, ಅರುಣ್, ಪ್ರೇಮಕುಮಾರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು