ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಮಾಧ್ಯಮಗಳಿಗೆ ಅಂಟಿಕೊಳ್ಳಬೇಡಿ

ಪಠ್ಯೇತರ ಚಟುವಟಿಕೆ ಉದ್ಘಾಟಿಸಿದ ಶಾಸಕ ಪ್ರೀತಂ ಗೌಡ
Last Updated 19 ಜೂನ್ 2022, 4:23 IST
ಅಕ್ಷರ ಗಾತ್ರ

ಹಾಸನ: ‘ನಮ್ಮೊಳಗಿನ ಕ್ರಿಯಾಶೀಲತೆಯನ್ನು ಒಂದಿಷ್ಟು ಬಳಸಿಕೊಂಡರೆ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನವ ಮಾಧ್ಯಮಗಳಿಗೆ ಹೆಚ್ಚು ಅಂಟಿಕೊಳ್ಳಬಾರದು. ಅವುಗಳು ಜೀವನದಲ್ಲಿ ಒಂದು ಭಾಗವಾಗಬೇಕು’ ಎಂದು ಪ್ರೀತಂ ಜೆ.ಗೌಡ ಹೇಳಿದರು.

ನಗರದ ಎಂ.ಜಿ. ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪಠ್ಯೇತರ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವತಿಯರು ತಮ್ಮ ಪದವಿ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ಆರ್ಥಿಕವಾಗಿ ಸದೃಢವಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಎಲ್ಲ ವಿಷಯಗಳಲ್ಲಿ ಮಹಿಳೆ ಸಾಧನೆ ಮಾಡಬೇಕು.

ವಿದ್ಯಾರ್ಥಿ ಜೀವನ ಸುವರ್ಣಮಯ ಆಗಬೇಕಾದರೆ ಶ್ರದ್ಧೆ, ಸಮಯ ಪಾಲನೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ವಿಷಯಗಳನ್ನು ಕಲಿಯುವ ಮೂಲಕ ಪೋಷಕರಿಗೆ ಕೀರ್ತಿ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‍ಗೌಡ ಮಾತನಾಡಿ, ಯುವತಿಯರು ಪದವಿ ಪಡೆದುಕೊಳ್ಳುತ್ತಾರೆ. ಆದರೇ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿದೆ. ಇಂದಿನ ಯುವತಿಯರು ತಾವು ಓದುವ ಪದವಿಯೇ ಬೇರೆ, ವೃತ್ತಿ ಮಾಡುವುದು ಬೇರೆ ಕ್ಷೇತ್ರ ಎಂಬಂತಾಗಿದೆ. ಅದರ ಬದಲು ಇಷ್ಟವಾದ ಹಾಗೂ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದರು.

ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಮಹಿಳೆ ಇಂದು ಪುರುಷರಿಗೆ ಸರಿ ಸಮಾನವಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಆದರೆ ಮಹಿಳೆಯರನ್ನು ಇಂದಿಗೂ ಪುರುಷರು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವೇ ಮುಖ್ಯವಾಗಿದೆ. ಪ್ರತಿ ಕುಟುಂಬದಲ್ಲಿ ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ. ಕೃಷ್ಣೇಗೌಡ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೇ, ತಮ್ಮಲ್ಲಿನ ಪ್ರತಿಭೆ ಅನಾವರಣ ಮಾಡಿಕೊಳ್ಳಲು ಸಾಂಸ್ಕೃತಿಕ ವೇದಿಕೆ ಬಳಕೆ ಮಾಡಿಕೊಳ್ಳಬೇಕು. ಕಾಲೇಜಿನಲ್ಲಿರುವ ಸೌಲಭ್ಯವನ್ನು ಪಡೆದು ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

ಸಾಂಸ್ಕೃತಿಕ ವೇದಿಕೆ ಸಂಚಾಲಕ ಹರೀಶ್, ಕಾಲೇಜಿನ ವಿವಿಧ ವಿಭಾಗದ ಅಧ್ಯಾಪಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT