ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಆರ್‌ಟಿಇ ಸೀಟುಗಳ ಸಂಖ್ಯೆ ಕುಸಿತ

ಖಾಸಗಿ ಶಾಲೆಗೆ ₹7 ಕೋಟಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ
Last Updated 16 ಮೇ 2022, 3:15 IST
ಅಕ್ಷರ ಗಾತ್ರ

ಹಾಸನ: ಬಡ ಕುಟುಂಬದ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ರೂಪಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ನಿಯಮಗಳಿಗೆ ತಿದ್ದುಪಡಿ ಮಾಡಿದ ಬಳಿಕ ಆರ್‌ಟಿಇ ಸೀಟುಗಳ ಸಂಖ್ಯೆ ಇಳಿಕೆಯಾಗಿದೆ.

2019ರಲ್ಲಿ ಕೇಂದ್ರ ಸರ್ಕಾರವು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ಮಾಡಿತು. 1 ಕಿ.ಮೀ ವ್ಯಾಪ್ತಿಯಲ್ಲಿ ಅಥವಾ ಆಯಾ ವಾರ್ಡ್‌, ಗ್ರಾಮದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳು ಇಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಪ್ರವೇಶ ಪಡೆಯಲು ಅವಕಾಶ ನೀಡಲಾಯಿತು.

‘ಜಿಲ್ಲೆಯ ಒಟ್ಟು 52 ಶಾಲೆಗಳು ಆರ್‌ಟಿಒ ವ್ಯಾಪ್ತಿಗೆ ಒಳಪಟ್ಟಿವೆ. 2022–23ನೇ ಸಾಲಿನಲ್ಲಿ 11 ಸೀಟುಗಳು ಮಂಜೂರಾಗಿವೆ. ಚನ್ನರಾಯ ಪಟ್ಟಣದಲ್ಲಿ ಏಳು, ಅರಸೀಕೆರೆಯಲ್ಲಿ 4 ಸೀಟುಗಳು. ಮೊದಲ ಸುತ್ತಿನಲ್ಲಿಯೇ 11 ಸೀಟುಗಳು ಭರ್ತಿಯಾಗಿವೆ. ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ವಿನಾಯಿತಿ ಇದೆ. ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪ್ರವೇಶ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದರು.

ಖಾಸಗಿ ಶಾಲೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದವಿದ್ಯಾರ್ಥಿಗಳು ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ 2010ರಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ಜಾರಿಗೊಳಿಸಿತ್ತು. ಆರಂಭದಲ್ಲಿಪ್ರವೇಶ ಕೋರಿ ಸಾವಿರಾರು ಅರ್ಜಿಗಳು ಸಲ್ಲಿಕೆ ಆಗುತ್ತಿದ್ದವು. ಆರ್‌ಟಿಇಯಿಂದಾಗಿಮಕ್ಕಳು ಪ್ರವೇಶ ಪಡೆಯುತ್ತಿಲ್ಲವೆಂದು ಸರ್ಕಾರಿ ಶಾಲೆಗಳ ಶಿಕ್ಷಕರು ವಿರೋಧವ್ಯಕ್ತಪಡಿಸಿದರು. ಹಾಗಾಗಿ ಸರ್ಕಾರ ನಿಯಮ ಬದಲಾಯಿಸಿತು.

ಹೊಸ ನಿಯಮದಿಂದಾಗಿ ಬಹುತೇಕ ಆರ್‌ಟಿಇ ಸೀಟುಗಳು ಕಡಿತಗೊಂಡವು. ಪ್ರತಿಷ್ಠಿತಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಿಂದ ಹೊರಗುಳಿದವು. ಹೀಗಾಗಿ ಪಾಲಕರಆಸಕ್ತಿಯೂ ಕಡಿಮೆ ಯಾಯಿತು.

ಆರ್‌ಟಿಇ ಅಡಿ ಪ್ರವೇಶ ಪಡೆಯಲು ಆಧಾರ್‌ ಕಾರ್ಡ್‌ ಮತ್ತು ಆದಾಯ ಪ್ರಮಾಣಪತ್ರಕಡ್ಡಾಯ. ಹೀಗಾಗಿ ಕೆಲ ಪೋಷಕರು ತಮ್ಮ ವಿಳಾಸವನ್ನೇ ಬದಲಾವಣೆ ಮಾಡಿಕೊಂಡುಮಕ್ಕಳನ್ನು ಆರ್‌ಟಿಇ ಅಡಿ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದ ಅರ್ಹರಿಗೆ ಸೀಟುಸಿಗುತ್ತಿಲ್ಲ ಎಂಬ ಆರೋಪ ಇದೆ.

ಕೆಂಕೆರೆಹಳ್ಳಿಯ ವಿದ್ಯಾನಿಕೇತನ ಶಾಲೆಯಲ್ಲಿ ಆರ್‌ಟಿಇ ಸೀಟು ಪಡೆಯಲು ತಪ್ಪು ಮಾಹಿತಿ ನೀಡಿರುವ ಬಗ್ಗೆ ದೂರು ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ಮತ್ತು ಶಿಕ್ಷಣ ಇಲಾಖೆ ತ್ರಿಸದಸ್ಯ ಸಮಿತಿಯು ಮಗುವಿನ ಪೋಷಕರು ಸಲ್ಲಿಸಿರುವ ದಾಖಲೆ ಪರಿಶೀಲನೆ ನಡೆಸುತ್ತಿದೆ.

ಬೇಲೂರು ತಾಲ್ಲೂಕಿನಲ್ಲಿ ದಿವ್ಯ ಶಾಲೆ, ಹಳೇಬೀಡಿನ ಕಲ್ಪತರು ಶಾಲೆ, ಹೆಬ್ಬಾಳಿನ ಶಾರದ ಶಾಲೆ, ಗೆಂಡೇಹಳ್ಳಿಯ ನವೋದಯ ಶಾಲೆ, ಬಿಕ್ಕೋಡಿನ ವೀರಭದ್ರೇಶ್ವರ ಶಾಲೆ, ಫಾತೀಮಪುರದ ಫಾತೀಮ ಶಾಲೆ ಆರ್‌ಟಿಐ ವ್ಯಾಪ್ತಿಗೆ ಒಳಪಟ್ಟಿವೆ.

‘2022–23ನೇ ಸಾಲಿನಲ್ಲಿ ದಿವ್ಯ ಶಾಲೆಗೆ ಆರು ಅರ್ಜಿಗಳು ಬಂದಿದ್ದು, ನಾಲ್ವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಶಾಲೆಗೆ
ಅರ್ಜಿ ಬಂದಿಲ್ಲ. ಈ ಐದು ಶಾಲೆ
ಗಳಲ್ಲೂ ಕನ್ನಡ ಮಾಧ್ಯಮ ವಿಭಾಗದ ಬೋಧನೆಗೆ ಮಾತ್ರ ಆರ್‌ಟಿಐನ ಅಡಿ ದಾಖಲಾತಿಗೆ ಸರ್ಕಾರ ಅವಕಾಶ ನೀಡಿರುವುದರಿಂದ ದಿವ್ಯ ಶಾಲೆಗೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳು ದಾಖಲಾತಿ ಪಡೆದಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ತಿಳಿಸಿದರು.

ಅರಸೀಕೆರೆ ತಾಲ್ಲೂಕಿನಲ್ಲಿ ಅನುದಾನಿತ ಶಾಲೆಗಳಾದ ನಗರದ ಸೇವಾ ಸಂಕಲ್ಪ,ಸೆಂಟ್‌ ಮೇರಿಸ್, ಬಸವೇಶ್ವರ ಶಾಲೆ ಹಾಗೂ ಜಾವಗಲ್ ಹೋಬಳಿಯ ಕನ್ನಡ ಮಾತಾ, ಇಂದಿರಾ ಮೆಮೋರಿಯಲ್ ಹಾಗೂ ಗಂಡಸಿ ಹೋಬಳಿಯ ಚಿಂದೇನಹಳ್ಳಿಗಡಿಯ ಕಾಡಸಿದ್ದೇಶ್ವರ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಸೀಟು ಹಂಚಿಕೆಗೆ ಆಯ್ಕೆಯಾಗಿವೆ.

ನಗರದ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಸಮರ್ಪಕವಾಗಿ ಇರುವುದರಿಂದ ಖಾಸಗಿ ಶಾಲೆಗಳು ಆರ್‌ಟಿಇ ಸೀಟು ಹಂಚಿಕೆಗೆ ಒಳಪಟ್ಟಿಲ್ಲ. ತಾಲ್ಲೂಕಿನಲ್ಲಿ 41 ಸೀಟುಗಳು ಮಾತ್ರ ಆರ್‌ಟಿಇ ಅಡಿಮಂಜೂರಾಗಿವೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಎರಡು ಖಾಸಗಿಶಾಲೆಗಳಿಂದ 12 ಸೀಟುಗಳು ಲಭ್ಯ ಇವೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಹೊಳೆನರಸೀಪುರ ತಾಲ್ಲೂಕಿನಲ್ಲಿ ಆರ್‌ಟಿಇ ಅಡಿ ಹಳ್ಳಿಮೈಸೂರು ಅನುಗ್ರಹ ಶಾಲೆಗೆ ದಾಖಲಿಸಲು ಅವಕಾಶ ನೀಡಲಾಗಿದೆ. ಅನುದಾನಿತ ಶಾಲೆ ಆಗಿರುವುದರಿಂದ ಎಲ್ಲರಿಗೂ ಉಚಿತ ಪ್ರವೇಶ ಇದೆ ಎಂದು ಮುಖ್ಯಶಿಕ್ಷಕ ಡ್ಯಾನಿಫಿರೆರಾ ತಿಳಿಸಿದ್ದಾರೆ.

ನಿರ್ವಹಣೆ: ಕೆ.ಎಸ್.ಸುನಿಲ್,

ಪೂರಕ ಮಾಹಿತಿ:

ಚಂದ್ರಶೇಖರ್, ಸಿದ್ದರಾಜು,
ಎಚ್.ಎಸ್.ಅನಿಲ್‌ಕುಮಾರ್, ಮಲ್ಲೇಶ್, ರಂಗನಾಥ್, ಸುರೇಶ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT